ಚಾಲಕರೇ ಮಾಲಕರಾಗುವ ಸಹಕಾರಿ ಮಾದರಿಯಲ್ಲಿ ಹೊಸ ಅಧ್ಯಾಯ ಆರಂಭವಾಗಿದ್ದು, ಕೇಂದ್ರ ಸಹಕಾರ ‘ಭಾರತ್ ಟ್ಯಾಕ್ಸಿ’ ಎಂಬ ರೈಡ್-ಹೈಲಿಂಗ್ ವೇದಿಕೆಯನ್ನು ಪ್ರಾರಂಭಿಸಿದೆ. ಓಲಾ, ಉಬರ್ ಮಾದರಿಯ ಖಾಸಗಿ ಆನ್‌ಲೈನ್ ಟ್ಯಾಕ್ಸಿ ಸೇವೆಗಳಿಗೆ ಪರ್ಯಾಯವಾಗಿ ಈ ಸಹಕಾರಿ ವೇದಿಕೆ ರೂಪುಗೊಂಡಿದ್ದು, ಲಾಭದಲ್ಲಿ ಚಾಲಕರಿಗೂ ನೇರ ಪಾಲು ನೀಡುವುದೇ ಇದರ ಪ್ರಮುಖ ವಿಶೇಷತೆ.
ದೆಹಲಿ-ಎನ್‌ಸಿಆರ್ ಹಾಗೂ ರಾಜ್‌ಕೋಟ್ ಪ್ರದೇಶಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಭಾರತ್ ಟ್ಯಾಕ್ಸಿ, ಚಾಲಕರು ಕೇವಲ 500 ರೂ ನೀಡಿ ಪಾಲುದಾರರಾಗುವ ಅವಕಾಶ ನೀಡುತ್ತಿದೆ. ಸಂಸ್ಥೆಯ ಲಾಭದ ಶೇ. 80 ಭಾಗವನ್ನು ಚಾಲಕರು ಸಂಚರಿಸಿದ ಕಿಲೋಮೀಟರ್‌ಗಳ ಆಧಾರದಲ್ಲಿ ಹಂಚಲಾಗುತ್ತದೆ. ಉಳಿದ ಶೇ. 20 ಮೊತ್ತವನ್ನು ಸಹಕಾರ ಸಂಘದ ಮೂಲಧನ ನಿರ್ಮಾಣಕ್ಕೆ ಬಳಸಲಾಗುತ್ತದೆ.
ಸದಸ್ಯತ್ವ ಹೆಚ್ಚಾದಂತೆ ಚಾಲಕರಿಗೆ ಆಡಳಿತ ಮಂಡಳಿಯಲ್ಲಿ ಪ್ರತಿನಿಧಿತ್ವವೂ ಸಿಗಲಿದೆ. ಯಾವುದೇ ನಿರ್ಧಾರ ಚಾಲಕರ ಹಿತಾಸಕ್ತಿಗೆ ವಿರುದ್ಧವಾಗಿದ್ದರೆ, ಅವರ ಪ್ರತಿನಿಧಿಗಳು ಅದನ್ನು ಪ್ರಶ್ನಿಸುವ ವ್ಯವಸ್ಥೆ ಇರಲಿದೆ ಎಂದು ಭರವಸೆ ನೀಡಲಾಗಿದೆ. ಪ್ರಾರಂಭಿಕ ಹಂತದಲ್ಲಿ ಲಾಭ ಹಂಚಿಕೆ ವ್ಯವಸ್ಥೆ ಸಂಪೂರ್ಣ ಸ್ಥಿರಗೊಳ್ಳಲು ಸುಮಾರು ಮೂರು ವರ್ಷ ಬೇಕಾಗಬಹುದು ಎಂದು ತಿಳಿಸಲಾಗಿದೆ.
ಫೆಬ್ರವರಿ 5ರಂದು ಎಂಟು ಪ್ರಮುಖ ಸಹಕಾರಿ ಸಂಸ್ಥೆಗಳ ಬೆಂಬಲದೊಂದಿಗೆ ಆರಂಭಗೊಂಡ ಈ ಯೋಜನೆ, ಎರಡು ತಿಂಗಳ ಪೈಲಟ್ ಹಂತದ ನಂತರ ಅಧಿಕೃತವಾಗಿ ಪ್ರಾರಂಭಗೊಂಡಿದೆ. ಪ್ರಸ್ತುತ ಖಾಸಗಿ ವೇದಿಕೆಗಳು ಚಾಲಕರಿಂದ ಶೇ. 25-30 ಕಮಿಷನ್ ವಸೂಲಿ ಮಾಡುತ್ತವೆ. ಆದರೆ ಭಾರತ್ ಟ್ಯಾಕ್ಸಿ ಯಾವುದೇ ಕಮಿಷನ್ ಕಡಿತ ಮಾಡದೆ, ಚಾಲಕರ ಸ್ವಾಮ್ಯ ಮತ್ತು ಲಾಭ ಹಂಚಿಕೆ ಆಧಾರಿತ ಮಾದರಿಯನ್ನು ಮುಂದಿಟ್ಟಿದೆ.
- ಸೇರ್ಪಡೆಯಾಗಲು ಕನಿಷ್ಠ 500 ರೂ ಮೌಲ್ಯದ 5 ಷೇರುಗಳನ್ನು ಖರೀದಿಸಬೇಕು.
- ಇದರಿಂದ ಅವರು ಸಂಸ್ಥೆಯ ಪಾಲುದಾರರಾಗುತ್ತಾರೆ.
- ಲಾಭಾಂಶ (ಡಿವಿಡೆಂಡ್), ಆರೋಗ್ಯ ವಿಮೆ, ಪಿಂಚಣಿ ಮುಂತಾದ ಸೌಲಭ್ಯಗಳಿಗೂ ಅರ್ಹರಾಗುತ್ತಾರೆ. ಇದೀಗ ಸುಮಾರು 4 ಲಕ್ಷ ಚಾಲಕರು ಮತ್ತು 10 ಲಕ್ಷಕ್ಕೂ ಹೆಚ್ಚು ಬಳಕೆದಾರರು ವೇದಿಕೆಯಲ್ಲಿ ನೋಂದಾಯಿಸಿದ್ದಾರೆ ಎನ್ನಲಾಗಿದೆ.
ನೋಂದಣಿ ಹೇಗೆ?:
* “Bharat Taxi Driver” ಆಪ್ ಡೌನ್‌ಲೋಡ್ ಮಾಡಬೇಕು.
* ಮೊಬೈಲ್ ಸಂಖ್ಯೆಯನ್ನು OTP ಮೂಲಕ ದೃಢೀಕರಿಸಬೇಕು.
ಕಮರ್ಶಿಯಲ್ ಡ್ರೈವಿಂಗ್ ಲೈಸೆನ್ಸ್ (ಯೆಲ್ಲೋ ಬ್ಯಾಡ್ಜ್), ಆಧಾರ್ ಮತ್ತು ಪ್ಯಾನ್ ಕಾರ್ಡ್, ವಾಹನದ RC ಹಾಗೂ ಪರ್ಮಿಟ್, ವಿಮೆ ಮತ್ತು PUC ಪ್ರಮಾಣಪತ್ರ ಅಪ್‌ಲೋಡ್ ಮಾಡಬೇಕು. ಈಗಾಗಲೇ ನವದೆಹಲಿ, ರಾಜ್‌ಕೋಟ್, ಅಹ್ಮದಾಬಾದ್‌ಗಳಲ್ಲಿ ಭಾಟತ್ ಟ್ಯಾಕ್ಸಿ ಸೇವೆ ಲಭ್ಯವಿದೆ.
ಪ್ರಯಾಣಿಕರ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ದೆಹಲಿ ಪೊಲೀಸ್ ನಿಯಂತ್ರಣ ಕೊಠಡಿಯೊಂದಿಗೆ ನೇರ ಸಂಪರ್ಕ, ಆಪ್‌ನಲ್ಲಿ SOS ಬಟನ್, ಸೈರನ್, ವಿಮಾನ ನಿಲ್ದಾಣ, ರೈಲು ನಿಲ್ದಾಣ ಮತ್ತು ಮೆಟ್ರೋ ಕೇಂದ್ರಗಳಲ್ಲಿ ಸಹಾಯ ಕೌಂಟರ್‌ಗಳು ಲಭ್ಯ.
ಭಾರತ ಟ್ಯಾಕ್ಸಿ ಸಹಕಾರ ಮಾದರಿಯಲ್ಲಿ ಚಾಲಕರನ್ನು ಪಾಲುದಾರರನ್ನಾಗಿ ಮಾಡಿರುವ ಹೊಸ ಪ್ರಯತ್ನ. ನ್ಯಾಯಸಮ್ಮತ ದರ, ಚಾಲಕರಿಗೆ ಲಾಭಾಂಶ ಹಾಗೂ ಸುರಕ್ಷತಾ ವೈಶಿಷ್ಟ್ಯಗಳ ಮೂಲಕ ಸಾಮಾನ್ಯ ಜನರಿಗೆ ಪರ್ಯಾಯ ಸಾರಿಗೆ ಸೇವೆ ಒದಗಿಸುವ ಗುರಿಯಿದೆ.