ಭಾರತದಲ್ಲಿ ದೂರಸಂಪರ್ಕ ಇಲಾಖೆ (DoT) ಜಾರಿಗೆ ತರಲಿರುವ ಹೊಸ ನಿಯಮಗಳ ಹಿನ್ನೆಲೆಯಲ್ಲಿ, ಮಾರ್ಚ್ 1, 2026ರಿಂದ ವಾಟ್ಸಪ್ ಬಳಕೆಯಲ್ಲಿ ಮಹತ್ವದ ಬದಲಾವಣೆಗಳು ಕಾಣಿಸಿಕೊಳ್ಳಲಿವೆ. ಇನ್ನು ಮುಂದೆ ವಾಟ್ಸಪ್ ಬಳಸಲು ಮೊಬೈಲ್ ಫೋನ್‌ನಲ್ಲಿ ಸಕ್ರಿಯ ಸಿಮ್ ಕಾರ್ಡ್ ಇರಿಸುವುದು ಕಡ್ಡಾಯವಾಗಲಿದೆ.
ಇದೇ ನಿಯಮ ಟೆಲಿಗ್ರಾಮ್ ಮತ್ತು ಸಿಗ್ನಲ್ ಸೇರಿದಂತೆ ಇತರ ಮೆಸೇಜಿಂಗ್ ಅಪ್ಲಿಕೇಶನ್‌ಗಳಿಗೂ ಅನ್ವಯವಾಗುತ್ತದೆ. ಮಾರ್ಚ್ ತಿಂಗಳ ಮೊದಲ ದಿನದಿಂದಲೇ ಈ ನಿಯಮ ಜಾರಿಗೆ ಬರುವ ಸಾಧ್ಯತೆ ಇದ್ದು, ಇದು ಲಕ್ಷಾಂತರ ಬಳಕೆದಾರರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
ಹೊಸ ನಿಯಮಗಳ ಪ್ರಕಾರ, ವಾಟ್ಸಪ್ ಖಾತೆಯನ್ನು ಮೊಬೈಲ್ ಸಾಧನದಲ್ಲಿ ಅಳವಡಿಸಿರುವ ಸಕ್ರಿಯ ಸಿಮ್ ಕಾರ್ಡ್‌ಗೆ ನೇರವಾಗಿ ಲಿಂಕ್ ಮಾಡಬೇಕು. ಅಂದರೆ, ಖಾತೆಗೆ ಸಂಬಂಧಿಸಿದ ಸಿಮ್ ಕಾರ್ಡ್ ಅನ್ನು ಫೋನ್‌ನಿಂದ ತೆಗೆದರೆ ಅಥವಾ ಅದು ನಿಷ್ಕ್ರಿಯವಾದರೆ, ಆ ಸಾಧನದಲ್ಲಿ ವಾಟ್ಸಪ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ. ಸಿಮ್ ಇಲ್ಲದಿದ್ದರೆ ಆಪ್ ಸ್ವಯಂಚಾಲಿತವಾಗಿ ಲಾಗ್‌ಔಟ್ ಆಗುವ ವ್ಯವಸ್ಥೆ ಜಾರಿಗೆ ಬರಲಿದೆ.
ಇದುವರೆಗೆ ಒಂದೇ ಸಿಮ್ ಒಂದು ಫೋನ್‌ನಲ್ಲಿ ಇದ್ದರೂ, ಬೇರೆ ಫೋನ್‌ನಲ್ಲಿ ವೈ-ಫೈ ಮೂಲಕ ವಾಟ್ಸಪ್ ಬಳಸುವ ಅವಕಾಶವಿತ್ತು. ಆದರೆ ಹೊಸ ನಿಯಮದ ನಂತರ ಈ ವಿಧಾನ ಸಾಧ್ಯವಾಗುವುದಿಲ್ಲ. ಪ್ರಾಥಮಿಕ ಸಿಮ್ ಇರುವ ಫೋನ್ ಇಲ್ಲದೆ ಬಹು ಸಾಧನಗಳಲ್ಲಿ ಒಂದೇ ಖಾತೆಯನ್ನು ಬಳಸುವುದಕ್ಕೆ ನಿರ್ಬಂಧ ಬರುವ ಸಾಧ್ಯತೆಯಿದೆ.
ಇದಲ್ಲದೆ, ವಾಟ್ಸಪ್ ವೆಬ್ ಮತ್ತು ಡೆಸ್ಕ್‌ಟಾಪ್ ಆವೃತ್ತಿಗಳ ಬಳಕೆಯಲ್ಲೂ ಬದಲಾವಣೆ ಮಾಡಲಾಗಿದೆ. ಇವು ಪ್ರತಿ ಆರು ಗಂಟೆಗಳಿಗೊಮ್ಮೆ ಸ್ವಯಂಚಾಲಿತವಾಗಿ ಲಾಗ್‌ಔಟ್ ಆಗಲಿದ್ದು, ಮರುಬಳಕೆಗಾಗಿ ಕ್ಯೂಆರ್ ಕೋಡ್ ಮೂಲಕ ಮತ್ತೆ ದೃಢೀಕರಣ ಮಾಡಬೇಕಾಗುತ್ತದೆ. ಇದರಿಂದ ಖಾತೆಗಳ ಸುರಕ್ಷತೆ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ.
ಡಿಜಿಟಲ್ ವಂಚನೆಗಳು, ಸೈಬರ್ ಅಪರಾಧಗಳು ಹಾಗೂ ಡಿಜಿಟಲ್ ಅರೆಸ್ಟ್‌ಗಳಂತಹ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈ ಕ್ರಮಗಳನ್ನು ಭಾರತ ಸರ್ಕಾರ ಜಾರಿಗೆ ತರುತ್ತಿದೆ ಎಂದು ತಿಳಿದುಬಂದಿದೆ. ಒಟ್ಟಾರೆ, ಬಳಕೆದಾರರ ಖಾತೆ ಭದ್ರತೆ ಮತ್ತು ಗುರುತಿನ ಪರಿಶೀಲನೆಯನ್ನು ಕಠಿಣಗೊಳಿಸುವ ನಿಟ್ಟಿನಲ್ಲಿ ಈ ಹೊಸ ನಿಯಮಗಳು ಮಹತ್ವದ ಹೆಜ್ಜೆಯಾಗಿ ಕಾಣಿಸುತ್ತಿವೆ.