ಬೆಟ್ಟದಪುರ: ಸಾರ್ವಜನಿಕರಲ್ಲಿ ದಿನೇದಿನೇ ಹೆಚ್ಚುತ್ತಿರುವ ಮೂಳೆ ಸಂಬಂಧಿತ ಸಮಸ್ಯೆಗಳ ಹಿನ್ನೆಲೆ ವಿಶೇಷ ಆರೋಗ್ಯ ಶಿಬಿರವನ್ನು ಸ್ಥಳೀಯವಾಗಿ ಆಯೋಜಿಸಲಾಗಿದೆ ಎಂದು ರೋಟರಿ ಕ್ಲಬ್ ಪಿರಿಯಾಪಟ್ಟಣ ಐಕಾನ್ಸ್ ಸಂಸ್ಥೆಯ ಅಧ್ಯಕ್ಷ ಸಂಪತ್ ಕುಮಾರ್ ತಿಳಿಸಿದರು.
ಇಲ್ಲಿನ ಗ್ರಾಮ ಪಂಚಾಯಿತಿ ಆವರಣದಲ್ಲಿ ಎನ್.ಜೆ. ಹಾಸ್ಪಿಟಲ್, ರೋಟರಿ ಕ್ಲಬ್ ಪಿರಿಯಾಪಟ್ಟಣ ಐಕಾನ್ಸ್ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಆಯೋಜಿಸಿದ್ದ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಮೂಳೆಗಳು ಶರೀರಕ್ಕೆ ಬೆಂಬಲ ನೀಡಲು ಅವಶ್ಯಕವಾಗಿದೆ. ಆದರೆ, ಅವುಗಳಲ್ಲಿ ಉಂಟಾದ ಸಮಸ್ಯೆಗಳು ಬೇರೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಹಿನ್ನೆಲೆಯಲ್ಲಿ, ಗ್ರಾಮೀಣ ಭಾಗದ ಜನರು ಶಿಬಿರದ ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ವಲಯ 6ರ ವಲಯ ಸೇನಾನಿ ಕೆ. ರಮೇಶ್ ಮಾತನಾಡಿ, ಇತ್ತೀಚಿನ ಜೀವನಶೈಲಿಯಿಂದ ಯುವಕರಲ್ಲಿಯೇ ಮೂಳೆ ಮತ್ತು ಬೆನ್ನುನೋವು ಹೆಚ್ಚುತ್ತಿರುವುದು ಆತಂಕಕಾರಿ. ನಿಯಮಿತ ವ್ಯಾಯಾಮ, ಕ್ಯಾಲ್ಸಿಯಂ ಸಮೃದ್ಧ ಆಹಾರ ಹಾಗೂ ಸಮಯಕ್ಕೆ ಸರಿಯಾದ ಚಿಕಿತ್ಸೆ ಪಡೆದುಕೊಂಡರೆ ಈ ಸಮಸ್ಯೆಗಳನ್ನು ನಿಯಂತ್ರಿಸಬಹುದು ಎಂದು ತಿಳಿಸಿದರು.
ಪಿಡಿಒ ಮಂಜುನಾಥ್ ಮಾತನಾಡಿ, ದಿನನಿತ್ಯದ ಜೀವನದಲ್ಲಿ ಸರಿಯಾಗಿ ಕುಳಿತುಕೊಳ್ಳುವ ವಿಧಾನ, ಭಾರವಾದ ವಸ್ತುಗಳನ್ನು ಎತ್ತುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ, ನಿಯಮಿತ ವ್ಯಾಯಾಮ ಮತ್ತು ಪೌಷ್ಠಿಕ ಆಹಾರದ ಮಹತ್ವದ ಬಗ್ಗೆ ತಿಳಿದುಕೊಳ್ಳಲು ಇಂತಹ ಶಿಬಿರಗಳು ಸಹಕಾರಿಯಾಗಲಿದೆ ಎಂದು ಹೇಳಿದರು.
110ಕ್ಕೂ ಹೆಚ್ಚು ಮಂದಿ ಶಿಬಿರದ ಸದುಪಯೋಗವನ್ನು ಪಡೆದುಕೊಂಡರು.
ನಿಯೋಜಿತ ಸಹಾಯಕ ಗವರ್ನರ್ ಸಿ.ಎನ್. ವಿಜಯ್, ಕಾರ್ಯದರ್ಶಿ ಸತೀಶ್ ಆರಾಧ್ಯ, ಸದಸ್ಯ ಬಿ.ಎಸ್. ಪ್ರಸನ್ನ ಕುಮಾರ್, ಬಿ.ವಿ. ಅನಿತಾ ತೋಟಪ್ಪಶೆಟ್ಟಿ, ಪ್ರೀತಿ ಅರಸ್, ಡಿ.ರಮೇಶ್, ಡಿ.ಆರ್. ಧನಂಜಯ್, ವೈದ್ಯಾಧಿಕಾರಿ ರೋಹಿತ್, ಸಿಬ್ಬಂದಿ ಸಂಜಯ್, ದೇವರಾಜು, ಚಂದ್ರು, ಶಿವು, ಹೇಮಾ, ಅರ್ಪಿತಾ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಭಾಗವಹಿಸಿದ್ದರು.