Friday, July 24, 2026
Join WhatsApp Group
HomeNationalಹೊಟೇಲ್‌ ಬಿಲ್‌ನಲ್ಲಿ ಗ್ಯಾಸ್‌ ಶುಲ್ಕ?!

ಹೊಟೇಲ್‌ ಬಿಲ್‌ನಲ್ಲಿ ಗ್ಯಾಸ್‌ ಶುಲ್ಕ?!

ಚೆನ್ನೈ: ಕೊಲ್ಲಿ ದೇಶಗಳಲ್ಲಿ ಕವಿದಿರುವ ಯುದ್ಧದ ಕಾರ್ಮೋಡದ ಹಿನ್ನೆಲೆ ಭಾರತದಲ್ಲಿ ಅಡುಗೆ ಅನಿಲದ ಬೆಲೆ ಏರಿಕೆ ಮತ್ತು ಸರಬರಾಜಿನ ಬಗ್ಗೆ ಆತಂಕ ವ್ಯಕ್ತವಾಗುತ್ತಿರುವ ನಡುವೆಯೇ, ಚೆನ್ನೈನಲ್ಲಿ ನಡೆದ ಒಂದು ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ರೆಸ್ಟೋರೆಂಟ್‌ವೊಂದು ಗ್ರಾಹಕರಿಗೆ ನೀಡಿದ ಬಿಲ್ಲಿನಲ್ಲಿ ‘ಗ್ಯಾಸ್ ಶುಲ್ಕ’ ಸೇರಿಸಿರುವುದು ಇದೀಗ ವೈರಲ್ ಆಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ವರದಿಗಳ ಪ್ರಕಾರ, ಚೆನ್ನೈನ ತಿರುವೆಂಕಡನಗರ್‌ನ ಎಂ.ಜಿ.ಆರ್ ಸಾಲೈ, ಪೆರುಂಗುಡಿಯಲ್ಲಿರುವ ‘ಗ್ರೀರಾಸ್ ರೆಸ್ಟೋರೆಂಟ್‌’ನಲ್ಲಿ ಈ ಘಟನೆ ನಡೆದಿದೆ. ಗ್ರಾಹಕರೊಬ್ಬರು ಬೆಳಗಿನ ಉಪಹಾರಕ್ಕಾಗಿ ರೆಸ್ಟೋರೆಂಟ್‌ಗೆ ತೆರಳಿ ಇಡ್ಲಿ ಮತ್ತು ವಡೆ ಸೇವಿಸಿದ್ದಾರೆ.

ಆದರೆ ಬಿಲ್ ನೀಡಿದಾಗ ಅದರಲ್ಲಿನ ವಿವರಗಳನ್ನು ನೋಡಿ ಅವರು ಅಚ್ಚರಿಗೊಂಡಿದ್ದಾರೆ. ಸಾಮಾನ್ಯವಾಗಿ ಆಹಾರದ ಬೆಲೆಯ ಜೊತೆಗೆ ತೆರಿಗೆಗಳು ಮಾತ್ರ ಸೇರಿಸುವ ಬದಲು, ಬಿಲ್ಲಿನಲ್ಲಿ ‘ಗ್ಯಾಸ್ ಚಾರ್ಜ್’ ಎಂಬ ಹೆಸರಿನಲ್ಲಿ ಹೆಚ್ಚುವರಿ ಶುಲ್ಕವನ್ನು ನಮೂದಿಸಲಾಗಿದೆ.

ಬಿಲ್ಲಿನಲ್ಲಿ 12-03-2026 ಬೆಳಿಗ್ಗೆ 8:32 ಸಮಯವನ್ನು ಉಲ್ಲೇಖಿಸಲಾಗಿದ್ದು, ಅದರಲ್ಲಿ ಗ್ಯಾಸ್ ಶುಲ್ಕವನ್ನು ಪ್ರತ್ಯೇಕವಾಗಿ ಸೇರಿಸಿರುವುದು ಗಮನಸೆಳೆದಿದೆ. ಈ ಬಿಲ್‌ನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಂತೆಯೇ ಅದು ವೈರಲ್ ಆಗಿದ್ದು, ಹಲವರು ಈ ಕ್ರಮವನ್ನು ಟೀಕಿಸಿದ್ದಾರೆ.

ಇತ್ತೀಚೆಗೆ ಅಡುಗೆ ಅನಿಲದ ಬೆಲೆ ಏರಿಕೆ ಮತ್ತು ಸರಬರಾಜಿನ ಬಗ್ಗೆ ದೇಶದ ಹಲವು ಭಾಗಗಳಲ್ಲಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ, ಹೋಟೆಲ್‌ಗಳು ಗ್ರಾಹಕರ ಮೇಲೆಯೇ ಹೆಚ್ಚುವರಿ ವೆಚ್ಚವನ್ನು ಹಾಕಲು ಪ್ರಾರಂಭಿಸಿದ್ದಾರೆಯೇ ಎಂಬ ಪ್ರಶ್ನೆಯೂ ಉದ್ಭವಿಸಿದೆ.

ವಿಶೇಷವಾಗಿ ಬೆಂಗಳೂರು ಸೇರಿದಂತೆ ಕೆಲವು ಮಹಾನಗರಗಳಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಲಭ್ಯತೆಯಲ್ಲಿ ತೊಂದರೆಗಳಿರುವುದಾಗಿ ವರದಿಗಳು ಬಂದಿರುವ ಹಿನ್ನೆಲೆಯಲ್ಲಿ ಈ ಘಟನೆ ಇನ್ನಷ್ಟು ಚರ್ಚೆಗೆ ಕಾರಣವಾಗಿದೆ.

ಆದರೆ, ಒಂದು ಉಪಹಾರದ ಬಿಲ್ಲಿನಲ್ಲೇ ‘ಗ್ಯಾಸ್ ಶುಲ್ಕ’ ಸೇರಿಸಿರುವುದು ಸರಿಯೇ ಎಂಬ ಪ್ರಶ್ನೆಯನ್ನು ನೆಟ್ಟಿಗರು ಕೇಳುತ್ತಿದ್ದು, ಈ ಕ್ರಮದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಇನ್ನೊಂದೆಡೆ, ಎಲ್‌ಪಿಜಿ ಗ್ಯಾಸ್‌ ಅಭಾವ ಎಂಬ ಸುದ್ದಿಯೂ ಸಾಮಾಜಿಕ ಜಾಲತಾಣಗಳ ಸೃಷ್ಟಿಯೇ ಹೊರತು ನಿಜದಲ್ಲಿ ಅಂತಹ ಅಭಾವ ಇಲ್ಲ ಎಂಬುದು ಸರ್ಕಾರದ ಹೇಳಿಕೆ. ಯಾವುದಕ್ಕೂ, ಇಂತಹ ಸುದ್ದಿಗಳನ್ನು ಇನ್ನಷ್ಟು ಹರಡುವ ಮುನ್ನ ತುಸು ವಿವೇಚನೆಯಿಂದ ವ್ಯವಹರಿಸುವ ಅಗತ್ಯವೂ ಇದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share