ಕಾರವಾರ: ಜನನ ಅಥವಾ ಮರಣ ಪ್ರಮಾಣ ಪತ್ರಕ್ಕಾಗಿ ಕಚೇರಿಗಳಿಗೆ ಪದೇಪದೇ ಅಲೆದಾಡಬೇಕಾದ ಅಗತ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರವಾರ ಅಂಚೆ ಇಲಾಖೆ ಹಾಗೂ ನಗರಸಭೆ ಹೊಸ ಸೇವೆಗೆ ಚಾಲನೆ ನೀಡಿವೆ. ಪ್ರಮಾಣ ಪತ್ರ ಸಿದ್ಧವಾದ ಬಳಿಕ ನಿಗದಿತ ಅಂಚೆ ಶುಲ್ಕ ಪಾವತಿಸಿ, ಭಾರತೀಯ ಅಂಚೆ ಇಲಾಖೆಯ ಮೂಲಕ ಅದನ್ನು ಮನೆ ಬಾಗಿಲಿಗೇ ಪಡೆಯಬಹುದಾಗಿದೆ.
ಕಾರವಾರ ಅಂಚೆ ವಿಭಾಗ ಹಾಗೂ ನಗರಸಭೆಯ ಸಹಯೋಗದಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ಅಂಚೆ ಮೂಲಕ ಮನೆ ಬಾಗಿಲಿಗೆ ತಲುಪಿಸುವ ಈ ಸೇವೆಗೆ ನಗರಸಭೆಯಲ್ಲಿ ಸೋಮವಾರ ಚಾಲನೆ ನೀಡಲಾಯಿತು.
ಜನನ ಅಥವಾ ಮರಣ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿ, ಪ್ರಮಾಣ ಪತ್ರ ಸಿದ್ಧವಾದ ನಂತರ ರೂ.100 ಅಂಚೆ ಶುಲ್ಕ ಪಾವತಿಸಿದರೆ ಭಾರತೀಯ ಅಂಚೆ ಇಲಾಖೆಯ ಮೂಲಕ ಪ್ರಮಾಣ ಪತ್ರವನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ಇದರಿಂದ ಸಾರ್ವಜನಿಕರ ಸಮಯ ಮತ್ತು ಶ್ರಮ ಉಳಿತಾಯವಾಗುವುದರ ಜೊತೆಗೆ ಸರ್ಕಾರಿ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಪ್ರಯತ್ನಕ್ಕೂ ಮತ್ತಷ್ಟು ವೇಗ ದೊರೆಯಲಿದೆ.
“ನಿಮ್ಮ ಕೋರಿಕೆ, ನಮ್ಮ ಸೇವೆ” ಎಂಬ ಆಶಯದೊಂದಿಗೆ ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕಾರವಾರ ವಿಭಾಗದ ಅಂಚೆ ಅಧೀಕ್ಷಕ ಹೂವಪ್ಪ ಜಿ. ಹಾಗೂ ಕಾರವಾರ ನಗರಸಭೆ ಪೌರಾಯುಕ್ತ ಜಗದೀಶ ಹುಲಗೆಜ್ಜಿ ತಿಳಿಸಿದ್ದಾರೆ.


