ಮುಂಡಗೋಡ: ಪಟ್ಟಣದ ಕಿಲ್ಲೆಓಣಿ ಪ್ರದೇಶದಲ್ಲಿನ ಸರ್ಕಾರಿ ಜಾಗದ ಅತಿಕ್ರಮಣ ಹಾಗೂ ಕಾಳಿಕಾ ದೇವಸ್ಥಾನದ ಗೋಡೆಗೆ ಸಂಬಂಧಿಸಿದ ವಿವಾದವನ್ನು ತಕ್ಷಣ ಬಗೆಹರಿಸಬೇಕು ಎಂದು ಬಿಜೆಪಿ ಆಗ್ರಹಿಸಿದ್ದು, ಅಕ್ರಮ ಕಟ್ಟಡವನ್ನು 15 ದಿನಗಳೊಳಗೆ ತೆರವುಗೊಳಿಸದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದೆ.
ಈ ಕುರಿತು ಕಾಳಿಕಾ ದೇವಿ ದೇವಸ್ಥಾನ ಸಂಘರ್ಷ ಸಮಿತಿ ವತಿಯಿಂದ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಕಿಲ್ಲೆಓಣಿಯಲ್ಲಿ ಸುಮಾರು ಎರಡು ಎಕರೆ ಸರ್ಕಾರಿ ಜಾಗ ಅತಿಕ್ರಮಣವಾಗಿದ್ದು, ಕಾಳಿಕಾ ದೇವಸ್ಥಾನದ ಗೋಡೆಯನ್ನೂ ಬಿಡದೆ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿದರು. ಈ ಹಿಂದೆ ಭಟ್ಕಳ, ಸೋಮವಾರಪೇಟೆ, ಶಿವಾಜಿನಗರ ಸೇರಿದಂತೆ ವಿವಿಧೆಡೆ ಇಂತಹ ವಿಚಾರಗಳನ್ನು ಕೇಳುತ್ತಿದ್ದೆವು. ಆದರೆ ಉತ್ತರ ಕನ್ನಡದ ಮುಂಡಗೋಡಿನಲ್ಲೇ ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಆತಂಕಕಾರಿ. ಸ್ಥಳೀಯ ಶಾಸಕರ ನೇರ ಹಸ್ತಕ್ಷೇಪದಿಂದಲೇ ಈ ಒತ್ತುವರಿ ಸಾಧ್ಯವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ವಿಡಿಯೋ ಸುದ್ದಿ ನೋಡಿ 👇🏼
https://youtu.be/kpHYua2_GHU?si=F4NsAJa-dyrCXgFd
ಅನೇಕ ವರ್ಷಗಳಿಂದ ಅತಿಕ್ರಮಣ ನಡೆಯುತ್ತಿದೆ ಎಂದು ಆರೋಪಿಸಿದ ಕೋಣೆಮನೆ, ಜೂನ್ 8ರಂದು ಪಟ್ಟಣ ಪಂಚಾಯಿತಿಯಿಂದ ಪಡೆದ ಹಿಂಬರಹದಲ್ಲಿ ರಜಿಯಾ ಬಾನು ಅವರು ಕಟ್ಟಡ ನಿರ್ಮಾಣಕ್ಕೆ ಯಾವುದೇ ಅನುಮತಿ ಪಡೆದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದರು.
ಕಾಳಿಕಾ ದೇವಸ್ಥಾನ ಸುಮಾರು 400 ವರ್ಷಗಳ ಇತಿಹಾಸ ಹೊಂದಿದ್ದು, ದೇವಸ್ಥಾನಕ್ಕೆ ಸಂಬಂಧಿಸಿದ ದಾಖಲೆಗಳಿವೆ. ದೇವಸ್ಥಾನದ ಜಾಗದ ವಿಚಾರದಲ್ಲಿ ಈ ರೀತಿಯ ಬೆಳವಣಿಗೆ ನಡೆಯುತ್ತಿರುವುದು ಸರಿಯಲ್ಲ ಎಂದು ಅವರು ಹೇಳಿದರು.
ಬಿಜೆಪಿ ತಾಲೂಕು ಕಾರ್ಯಕಾರಿಣಿ ಸಭೆಯಲ್ಲಿ ಮುಂಡಗೋಡಿನ ಹಿಂದೂ ಸಮಾಜಕ್ಕೆ ನೈತಿಕ ಬೆಂಬಲ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ಅಕ್ರಮ ಕಟ್ಟಡವನ್ನು 15 ದಿನಗಳೊಳಗೆ ತೆರವುಗೊಳಿಸಬೇಕು. ಮೂರು ತಿಂಗಳೊಳಗೆ ಅತಿಕ್ರಮಣ ತೆರವುಗೊಳಿಸುವ ಕ್ರಮ ಜಿಲ್ಲಾಡಳಿತದಿಂದ ಆಗದಿದ್ದರೆ ಮುಂಡಗೋಡಿನ ಪ್ರತಿ ಗ್ರಾಮದಲ್ಲೂ ಜನಜಾಗೃತಿ ಯಾತ್ರೆ ನಡೆಸಲಾಗುವುದು ಎಂದು ಕೋಣೆಮನೆ ಹೇಳಿದರು.
ಅದಕ್ಕೂ ಸ್ಪಂದನೆ ಸಿಗದಿದ್ದರೆ ಜಿಲ್ಲಾಡಳಿತದ ಎದುರು ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುವುದು. ಅಗತ್ಯವಿದ್ದಲ್ಲಿ ಉತ್ತರ ಕನ್ನಡದ ವಿವಿಧೆಡೆಯಿಂದ ‘ಮುಂಡಗೋಡ ಚಲೋ’ ಹಮ್ಮಿಕೊಳ್ಳಲಾಗುವುದು. ಕಾಳಿಕಾ ದೇವಸ್ಥಾನ ಹಿಂದೂಗಳ ಸ್ವಾಭಿಮಾನದ ಪ್ರತೀಕವಾಗಿದ್ದು, ಅಕ್ರಮ ತೆರವುಗೊಳಿಸದಿದ್ದರೆ ಹೋರಾಟ ಮುಂದುವರಿಯಲಿದೆ ಎಂದರು.
ಹಿಂದೂ ಜಾಗರಣ ವೇದಿಕೆಯ ಪ್ರಮುಖ ಹರೀಶ್ ಕರ್ಕಿ ಮಾತನಾಡಿ, ಕೋಟೆಯ ರಕ್ಷಣೆಗಾಗಿ ಹಿಂದಿನ ಕಾಲದಲ್ಲಿ ಹನುಮಾನ ಮತ್ತು ಕಾಳಿಕಾ ದೇವಸ್ಥಾನಗಳನ್ನು ನಿರ್ಮಿಸಲಾಗಿತ್ತು ಎನ್ನಲಾಗುತ್ತದೆ. ಇಂದು ಆ ದೇವಸ್ಥಾನದ ರಕ್ಷಣೆಯ ಜವಾಬ್ದಾರಿ ನಮ್ಮ ಮೇಲಿದೆ. ಅಕ್ರಮ ಕಟ್ಟಡ ನಿರ್ಮಾಣದ ಬಗ್ಗೆ ತಾಲೂಕು ಆಡಳಿತದ ಗಮನಕ್ಕೆ ತಂದಿದ್ದರೂ ನಿಯಮಗಳನ್ನು ಮೀರಿ ನಿರ್ಮಾಣಕ್ಕೆ ಅವಕಾಶ ನೀಡಲಾಗಿದೆ ಎಂದು ಆರೋಪಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ ಮಾತನಾಡಿ, ಕಿಲ್ಲೆಓಣಿ ಮುಂಡಗೋಡಿನ ಹೃದಯ ಭಾಗದಲ್ಲಿರುವ ಪ್ರದೇಶವಾಗಿದ್ದು, ಹಿಂದೆ ಬಯಲು ಜಾಗವಾಗಿತ್ತು. ನಿರಂತರ ಅತಿಕ್ರಮಣದಿಂದ ಇದೀಗ ದೇವಸ್ಥಾನದ ಜಾಗದವರೆಗೂ ವಿಚಾರ ತಲುಪಿದೆ ಎಂದು ಹೇಳಿದರು.
ಕಟ್ಟಡ ನಿರ್ಮಾಣಕ್ಕೆ ಪಟ್ಟಣ ಪಂಚಾಯಿತಿಯಿಂದ ಅನುಮತಿ ಪಡೆದಿಲ್ಲ ಎಂದು ಹೇಳಲಾಗಿದ್ದರೂ ನಿರ್ಮಾಣ ಮುಂದುವರಿದಿದೆ. ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ರಾಜಕೀಯ ಒತ್ತಡದಿಂದ ಮೌನ ವಹಿಸಲಾಗಿದೆ ಎಂಬ ಆರೋಪಗಳಿವೆ. ಮುಂಡಗೋಡ ಶಾಂತಿಯುತ ಪಟ್ಟಣವಾಗಿದ್ದು, ಈ ವಿಚಾರದಿಂದ ಯಾವುದೇ ಅಹಿತಕರ ಪರಿಸ್ಥಿತಿ ನಿರ್ಮಾಣವಾಗಬಾರದು. ಜಿಲ್ಲಾಧಿಕಾರಿಗಳು ಪ್ರಕರಣವನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪೊಲೀಸ್ ಕಣ್ಗಾವಲಿನಲ್ಲೇ ರಾತ್ರೋರಾತ್ರಿ ಕಟ್ಟಡ ನಿರ್ಮಾಣವಾಗಿದೆ ಎಂದು ಮುಖಂಡರು ಆರೋಪಿಸಿದರು. ಈ ವಿಚಾರದಲ್ಲಿ ಶಾಂತಿಯುತವಾಗಿ ಕಾನೂನುಬದ್ಧ ಹೋರಾಟ ನಡೆಸಲಾಗುವುದು ಹಾಗೂ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುತ್ತಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ ಮಾಜಿ ಸದಸ್ಯ ರಾಘವೇಂದ್ರ ಭಟ್ಟ ಹಾಸಣಗಿ ಸೇರಿದಂತೆ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.


