Thursday, October 22, 2026
HomeLocal Newsಎಸ್‌ಸಿ-ಎಸ್‌ಟಿ ಅನುದಾನ; ಅವಧಿ ಮುಗಿಯುವ ಮುನ್ನ ಖರ್ಚು  ಮಾಡಿ!

ಎಸ್‌ಸಿ-ಎಸ್‌ಟಿ ಅನುದಾನ; ಅವಧಿ ಮುಗಿಯುವ ಮುನ್ನ ಖರ್ಚು  ಮಾಡಿ!

ಕಾರವಾರ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕಾಗಿ ವಿವಿಧ ಇಲಾಖೆಗಳ ಮೂಲಕ ಬಿಡುಗಡೆಯಾಗುವ ಅನುದಾನವನ್ನು ನಿಗದಿತ ಅವಧಿಯೊಳಗೆ ಸಂಪೂರ್ಣವಾಗಿ ಬಳಸಬೇಕು. ಅರ್ಹ ಫಲಾನುಭವಿಗಳಿಗೆ ಯೋಜನೆಗಳ ಸೌಲಭ್ಯ ತಲುಪಿಸುವಲ್ಲಿ ವಿಳಂಬ ಮಾಡಬಾರದು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಹಾಗೂ ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರದ ವಿವಿಧ ಯೋಜನೆಗಳಡಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸೌಲಭ್ಯ ಒದಗಿಸಲು ಬಿಡುಗಡೆಯಾಗುವ ಅನುದಾನವನ್ನು ನಿಗದಿತ ಗುರಿಗಳಿಗೆ ಅನುಗುಣವಾಗಿ ಸಮರ್ಪಕವಾಗಿ ವೆಚ್ಚ ಮಾಡಬೇಕು. ಅನುದಾನ ಬಳಕೆಯಲ್ಲಿ ವಿಳಂಬ ಮಾಡದೆ, ಯೋಜನೆಗಳ ಪ್ರಯೋಜನ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಎಲ್ಲ ಅನುಷ್ಠಾನಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲೆ ದೌರ್ಜನ್ಯ ಪ್ರಕರಣಗಳು ವರದಿಯಾದ ತಕ್ಷಣ ಅಧಿಕಾರಿಗಳು ಸಂತ್ರಸ್ತರ ನೆರವಿಗೆ ಧಾವಿಸಬೇಕು. ಅವರಿಗೆ ದೊರೆಯಬಹುದಾದ ಪರಿಹಾರ ಹಾಗೂ ಇತರ ಸೌಲಭ್ಯಗಳ ಕುರಿತು ಅಗತ್ಯ ಮಾಹಿತಿ ಒದಗಿಸಿ, ಸಕಾಲದಲ್ಲಿ ನೆರವು ಸಿಗುವಂತೆ ನೋಡಿಕೊಳ್ಳಬೇಕು ಎಂದರು.

ಇದೇ ವೇಳೆ, ಪರಿಶಿಷ್ಟ ಜಾತಿ ಮತ್ತು ಪಂಗಡದವರ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಜಾಗ ಒತ್ತುವರಿಯಾಗಿರುವುದು ಕಂಡುಬಂದರೆ ತಕ್ಷಣ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಂ.ಎಸ್. ಅಲ್ಲಾಬಕ್ಷ್‌, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಹೀರ್ ಅಬ್ಬಾಸ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಉಮೇಶ್ ವೈ.ಕೆ. ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share