Friday, March 13, 2026
HomeCultureಸಂಸ್ಕೃತಿ, ಇತಿಹಾಸದ ಸಂಗಮ ಹೈಗುಂದ

ಸಂಸ್ಕೃತಿ, ಇತಿಹಾಸದ ಸಂಗಮ ಹೈಗುಂದ

ಹತ್ತು ಹಲವು ವಿಶೇಷತೆಗಳನ್ನು ಹೊಂದಿರುವ ಈ ದ್ವೀಪ ನಿಜಕ್ಕೂ ಭೂಲೋಕದ ಸ್ವರ್ಗ. ಅದೆಷ್ಟೋ ರಾಜಮನೆತನದವರ ಆಳ್ವಿಕೆಯಲ್ಲಿ ಸಂಪದ್ಭರಿತವಾಗಿದ್ದ ಈ ಪ್ರದೇಶ ಇಂದು ದ್ವೀಪವಾಗಿ ಬದಲಾಗಿದೆ. ಸುತ್ತ ಎಲ್ಲಿ ಕಣ್ಣು ಹಾಯಿಸಿದರೂ ಹಚ್ಚ ಹಸಿರು ಹಾಗೂ ನೀರು. ಶಾಂತವಾಗಿ ಬೀಸುವ ತಂಗಾಳಿ. ನಗರದ ಯಾವುದೇ ಸದ್ದು-ಗದ್ದಲಗಳಿಲ್ಲದ ಪ್ರಶಾಂತ ಸ್ಥಳ. ವಿಶೇಷವೆಂದರೆ, ಈ ದ್ವೀಪದಲ್ಲಿ ಜನವಸತಿಯೂ ಇದ್ದು, ಕದಂಬರ ಕಾಲದ ಗಟ್ಟಿ ಕೊಂಡಿಯಾಗಿ ಇಂದಿಗೂ ಅನೇಕ ಕುಟುಂಬಗಳನ್ನು ತನ್ನೊಡಲಲ್ಲಿ ಪೊರೆಯುತ್ತಿದೆ. ಅಂಥದೊಂದು ವಿಶೇಷ ದ್ವೀಪವೇ ಹೊನ್ನಾವರದ ಹೈಗುಂದ.

            ಈ ಹಿಂದೆ ಹವ್ಯಕುಂಡ ಎಂದಿದ್ದ ಪ್ರಾಕೃತ ಹೆಸರೇ ಇಂದು ಹೈಗುಂದವಾಗಿದೆ. ಮಾನವ ನಿರ್ಮಿತ ದ್ವೀಪವಾಗಿರುವ ಹೈಗುಂದಕ್ಕೆ ತಲುಪಲು ಸೇತುವೆ ಸಂಪರ್ಕವಿದೆ. ಕದಂಬ ವಂಶದ ರಾಜ ಮಯೂರವರ್ಮ ತನ್ನ ಯಾಜ್ಞಿಕ ಕ್ರಿಯೆಗಳನ್ನು ನೆರವೇರಿಸಿಕೊಡುವಂತೆ ನೈನಿತಾಲ್‌ನಿಂದ 32 ಬ್ರಾಹ್ಮಣ ಕುಟುಂಬಗಳನ್ನು ಇಲ್ಲಿಗೆ ಆಹ್ವಾನಿಸಿದ್ದ. ಅಲ್ಲಿಂದ ಬಂದ ಬೇರೆ ಬೇರೆ ಗೋತ್ರದ ಬ್ರಾಹ್ಮಣರು ಇಲ್ಲಿಗೆ ಬಂದು ರಾಜಸೂಯಾಗ, ಅಶ್ವಮೇಧ ಯಾಗಗಳಂಥಹ ಮಹಾಯಜ್ಞಗಳನ್ನು ನಡೆಸಿದರು. ಅವುಗಳಿಗೆ ಸಾಕ್ಷಿಯೆಂಬಂತೆ ಇಂದಿಗೂ ಆ ಕಾಲದ ಇಟ್ಟಿಗೆಗಳು ಕಂಡುಬರುತ್ತವೆ.

            ದಿನಗಳೆದಂತೆ ಪಲ್ಲವರೂ ಸೇರಿದಂತೆ ಅನೇಕ ಗುಂಪುಗಳ ಆಕ್ರಮಣದಿಂದ ಹೈರಾಣಾದ ಮಯೂರವರ್ಮ ಶರಾವತಿ ತೀರದ ಈ ಪ್ರದೇಶದ ಸುತ್ತಲೂ ಭೂಭಾಗವನ್ನು ಕೊರೆಯಿಸಿ, ದ್ವೀಪವನ್ನಾಗಿ ಬದಲಾಯಿಸಿ ಶತ್ರುಗಳ ದಾಳಿಯಿಂದ ರಕ್ಷಿಸಿಕೊಂಡ ಎಂಬ ನಂಬಿಕೆಯಿದೆ. ಇದಕ್ಕೆ ಸಾಕ್ಷಿಯೆಂಬಂತೆ ಇಲ್ಲಿ ಪ್ರತಿಷ್ಠಾಪಿಸಿದ ದುರ್ಗಾಂಬಿಕಾ ದೇಗುಲ, ಕಲ್ಯಾಣಿ ಎಲ್ಲವೂ ಇಂದಿಗೂ ತನ್ನ ಅಸ್ಥಿತ್ವ ಉಳಿಸಿಕೊಂಡಿವೆ.

            ಮಯೂರವರ್ಮನ ನಂತರ ಜೈನರು ಆಗಮಿಸಿದರು. ಪ್ರಸ್ತುತ ಜಾಗಕ್ಕೆ ಕಾವಲು ಕಾಯುವ ಉದ್ದೇಶಕ್ಕಾಗಿ ತುಳುನಾಡಿನ ಬೊಬ್ಬರ್ಯ ದೈವ ಬಂದ ಇತಿಹಾಸವಿದ್ದು, ಇಂದಿಗೂ 6 ಅಡಿ ಎತ್ತರದ ಮಾನವಾಕಾರದ ಬೊಬ್ಬರ್ಯನ ವಿಗ್ರಹವನ್ನು ನೋಡಬಹುದು. ಇಲ್ಲಿನ ಇನ್ನೊಂದು ವಿಶೇಷತೆಯೆಂದರೆ, ನಾಲ್ಕೂ ಕಡೆಯಿಂದ ತೇಲಿ ಬರುವ ತಂಗಾಳಿಗೆ ಇಡೀ ಶರೀರ ತೇಲಾಡಿದ ಅನುಭವವಾಗುತ್ತದೆ. ಈ ವಿಶೇಷತೆಗಾಗಿಯೇ ಈ ದ್ವೀಪವನ್ನು ತೇಲಾಡುವ ದ್ವೀಪ ಎಂದೂ ಕರೆಯಲಾಗುತ್ತದೆ.

            ಹವ್ಯಕರ ಮೂಲ ತಾಣವಾಗಿರುವ ಹೈಗುಂದದಲ್ಲಿ ಕೇವಲ ಹವ್ಯಕರಷ್ಟೇ ಅಲ್ಲದೆ ಎಲ್ಲ ವರ್ಗದವರೂ ಅನ್ಯೋನ್ಯವಾಗಿಯೇ ವಾಸಿಸುತ್ತಿದ್ದಾರೆ. ಹೈಗುಂದ ದ್ವೀಪದಲ್ಲಿ ಎಲ್ಲೇ ಭೂಮಿ ಅಗೆದರೂ ಇಟ್ಟಿಗೆಗಳೇ ಸಿಗುತ್ತವೆ. ಹೀಗಾಗಿ ಇಲ್ಲಿ ಮನೆ ಕಟ್ಟಲು ಹೊರಗಿನಿಂದ ಇಟ್ಟಿಗೆಗಳನ್ನು ತರುವ ಅಗತ್ಯವೇ ಇಲ್ಲ. ಊಹೆಗೂ ನಿಲುಕದಷ್ಟು ಯಜ್ಞಕುಂಡದ ರಚನೆಗಳು ಇಲ್ಲಿದ್ದು, ಕದಂಬರ ಕಾಲದ ಇಟ್ಟಿಗೆಗಳೂ ಹೇರಳವಾಗಿ ಕಾಣಸಿಗುತ್ತವೆ. ಹವ್ಯಕರ ಮೂಲ ನೆಲೆ, ಶಕ್ತಿ ಕೇಂದ್ರವೂ ಆಗಿರುವ ಹೈಗುಂದ ಹೊನ್ನಾವರ-ಗೇರುಸೊಪ್ಪಾ ಮಾರ್ಗದಲ್ಲಿದೆ. ಅಲ್ಲಿಂದ ಮುಂದೆ ಅಳ್ಳಂಕಿ ಎಂಬಲ್ಲಿಂದ ಕಾಲ್ನಡಿಗೆಯಲ್ಲಿ 2 ಕಿ.ಮೀ ಸಾಗಿದರೆ ಹೈಗುಂದವನ್ನು ತಲುಪಬಹುದು. ದ್ವೀಪ ತಲುಪಲು ಸೇತುವೆ ಸಂಪರ್ಕವಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share