ಹುಬ್ಬಳ್ಳಿ: ಜಮೀನಿನ ದಾರಿ ವಿವಾದದ ಹಿನ್ನೆಲೆಯಲ್ಲಿ ದಾಖಲಾದ ಅಟ್ರಾಸಿಟಿ ಪ್ರಕರಣದ ವಿಚಾರಣೆಗೆ ಪೊಲೀಸರ ಕರೆ ಬಂದಿದ್ದರಿಂದ ಭಯಗೊಂಡ ರೈತನೊಬ್ಬ ಆತ್ಮ*ಹತ್ಯೆ ಮಾಡಿಕೊಂಡಿರುವ ದುರ್ಘಟನೆ ಬೆಳಕಿಗೆ ಬಂದಿದೆ.
ಹುಬ್ಬಳ್ಳಿ ತಾಲೂಕಿನ ಉಮಚಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಿಂಗಪ್ಪ ಅಂಗಡಿ (48) ಮೃ*ತ ರೈತ. ಹೊಲದ ದಾರಿ ವಿಚಾರವಾಗಿ ಉಮಚಗಿ ಗ್ರಾಮದಲ್ಲಿ ಗಲಾಟೆ ನಡೆದಿದ್ದು, ಈ ವೇಳೆ ನಿಂಗಪ್ಪನ ಮೇಲೆ ಹಲ್ಲೆ ನಡೆದ ಹಿನ್ನೆಲೆಯಲ್ಲಿ ಅವರ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಾಗಿತ್ತು.
ಗ್ರಾಮ ಪಂಚಾಯಿತಿ ಸದಸ್ಯರು ನಿಂಗಪ್ಪನನ್ನು ಕರೆಸಿ ಹಲ್ಲೆ ನಡೆಸಿ, ಬಳಿಕ ಅವರ ವಿರುದ್ಧ ಹುಬ್ಬಳ್ಳಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು ಎನ್ನಲಾಗಿದೆ. ಈ ಪ್ರಕರಣದ ಸಂಬಂಧ ಪೊಲೀಸರು ಕಳೆದ ಎರಡು–ಮೂರು ದಿನಗಳಿಂದ ನಿಂಗಪ್ಪನಿಗೆ ಕರೆ ಮಾಡಿ ಠಾಣೆಗೆ ಬಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸುತ್ತಿದ್ದರು.
ಇಂದೂ ಕೂಡ ಪೊಲೀಸರು ಕರೆ ಮಾಡಿ, “ನಿಮ್ಮ ಮೇಲೆ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ. ತಕ್ಷಣ ಠಾಣೆಗೆ ಬನ್ನಿ” ಎಂದು ತಿಳಿಸಿದ್ದರಿಂದ ನಿಂಗಪ್ಪ ಆತಂಕಗೊಂಡಿದ್ದರೆಂದು ತಿಳಿದುಬಂದಿದೆ.
ಗ್ರಾಮ ಪಂಚಾಯಿತಿ ಸದಸ್ಯರ ಹಲ್ಲೆಯಿಂದ ಮನನೊಂದಿದ್ದ ನಿಂಗಪ್ಪನಿಗೆ ಪೊಲೀಸರ ಕರೆಗಳು ಮತ್ತಷ್ಟು ಭಯ ಹುಟ್ಟಿಸಿದ್ದರಿಂದ, ಅವರು ತಮ್ಮ ಜಮೀನಿನಲ್ಲಿರುವ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.