ಕಾರವಾರ: ನೌಕರರು ತಮ್ಮ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಬೇಕು. ಕರ್ತವ್ಯದಲ್ಲಿ ಭ್ರಷ್ಟಾಚಾರ, ಕರ್ತವ್ಯ ಲೋಪ ಅಥವಾ ಅನಗತ್ಯ ವಿಳಂಬ ಕಂಡುಬಂದರೆ ಲೋಕಾಯುಕ್ತ ಸಂಸ್ಥೆಯಿಂದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಲೋಕಾಯುಕ್ತದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಎಚ್ಚರಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆದ ಉತ್ತರ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರುವ ಹಾಗೂ ತನಿಖೆ/ವಿಚಾರಣೆಗೆ ಬಾಕಿಯಿರುವ ಪ್ರಕರಣಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ದೂರುದಾರರು ಹಾಗೂ ಎದುರುದಾರರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನರು ತಮ್ಮ ಸಮಸ್ಯೆಗಳು ಹಾಗೂ ಪ್ರಕರಣಗಳ ವಿಚಾರಣೆಗಾಗಿ ದೂರದ ಬೆಂಗಳೂರಿಗೆ ಅಲೆಯುವುದನ್ನು ತಪ್ಪಿಸಿ, ಅವರ ಮನೆಬಾಗಿಲಿಗೆ ನ್ಯಾಯ ಒದಗಿಸುವುದು ಲೋಕಾಯುಕ್ತ ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ. ರಾಜ್ಯದಲ್ಲಿ ಸುಮಾರು 8 ಕೋಟಿ ಜನಸಂಖ್ಯೆಯಿದ್ದು, ಸುಮಾರು ಶೇ.1ರಷ್ಟು ಮಂದಿ ಸಾರ್ವಜನಿಕ ಹಾಗೂ ಸರ್ಕಾರಿ ನೌಕರರಿದ್ದಾರೆ. ಉಳಿದ ಶೇ.99ರಷ್ಟು ಜನರ ಹಕ್ಕುಗಳು, ಆಸ್ತಿ-ಪಾಸ್ತಿ, ಆರೋಗ್ಯ ಹಾಗೂ ಸಾಮಾಜಿಕ ಜೀವನವನ್ನು ರಕ್ಷಿಸುವ ಗುರುತರ ಜವಾಬ್ದಾರಿ ಈ ನೌಕರರ ಮೇಲಿದೆ.
ಹೀಗಾಗಿ ಸಾರ್ವಜನಿಕ ಸೇವೆ ಮಾಡಲು ದೊರೆತಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಪ್ರತಿಯೊಬ್ಬರೂ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಸಂವಿಧಾನವು ಸರ್ವರಿಗೂ ಸಮಬಾಳು, ಸಮಪಾಲು ತತ್ವವನ್ನು ಅಳವಡಿಸಿಕೊಂಡಿದೆ. ಸರ್ಕಾರ ಜಾರಿಗೆ ತರುವ ವಿವಿಧ ಯೋಜನೆಗಳ ಪ್ರಯೋಜನ ಸಮಾಜದ ಪ್ರತಿಯೊಬ್ಬರಿಗೂ ಸಮಾನವಾಗಿ ದೊರೆಯುವಂತೆ ನೋಡಿಕೊಳ್ಳುವುದು ಸಾರ್ವಜನಿಕ ನೌಕರರ ಜವಾಬ್ದಾರಿಯಾಗಿದೆ.
ಕಚೇರಿಗೆ ಆಗಮಿಸುವ ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸಿ, ಅವರ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಬೇಕು. ಅರ್ಜಿಗಳಿಗೆ ಕಾನೂನಾತ್ಮಕ ಹಿಂಬರಹ ನೀಡುವುದರ ಜೊತೆಗೆ ಸಮಸ್ಯೆಗಳಿಗೆ ಸಕಾಲದಲ್ಲಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ಹೇಳಿದರು.
ಸಾರ್ವಜನಿಕರ ದೂರುಗಳು ಹಾಗೂ ಕುಂದುಕೊರತೆಗಳನ್ನು ಅವರಿದ್ದಲ್ಲಿಯೇ ಪರಿಶೀಲಿಸಿ ತ್ವರಿತವಾಗಿ ಪರಿಹರಿಸುವ ಉದ್ದೇಶದಿಂದ ಕಾರವಾರದಲ್ಲಿ ಲೋಕಾಯುಕ್ತ ಸಂಸ್ಥೆಯ ವತಿಯಿಂದ ಬಾಕಿ ಪ್ರಕರಣಗಳ ವಿಚಾರಣೆಯನ್ನು ದೂರುದಾರರು ಹಾಗೂ ಎದುರುದಾರರ ಸಮ್ಮುಖದಲ್ಲಿ ಕಾನೂನು ರೀತ್ಯಾ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿ.ಎಂ., ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ, ಲೋಕಾಯುಕ್ತ ಪೊಲೀಸ್ ಅಧೀಕ್ಷಕ ದಿನೇಶ್ ಕುಮಾರ್, ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪಾಟೀಲ್, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ದೂರುದಾರರು ಉಪಸ್ಥಿತರಿದ್ದರು.


