Ad
Ad
Ad
Home Local News ಹತ್ತು ದಿನ, ಹತ್ತು ಚಿತ್ತಾರ | ಭ್ರಮರಾಂಭೆಗೆ ಸಹೋದರಿಯರ ಕಲಾರ್ಪಣೆ

ಹತ್ತು ದಿನ, ಹತ್ತು ಚಿತ್ತಾರ | ಭ್ರಮರಾಂಭೆಗೆ ಸಹೋದರಿಯರ ಕಲಾರ್ಪಣೆ

0
17

ಯಲ್ಲಾಪುರ: ಮನೆಯ ಮುಂಬಾಗಿಲಿನಲ್ಲಿ ಮನಸೆಳೆಯುವ ರಂಗೋಲಿ ಅರಳಿದರೆ ಆ ಮನೆಯ ಸೊಬಗೇ ಹೆಚ್ಚುತ್ತದೆ. ರಂಗೋಲಿ ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಧಾರ್ಮಿಕ ನಂಬಿಕೆಯ ಸಂಕೇತವೂ ಹೌದು. ಆಧುನಿಕ ಜೀವನದ ಓಟದಲ್ಲಿ ಅನೇಕ ಮನೆಗಳ ಮುಂಬಾಗಿಲಿನಿಂದ ರಂಗೋಲಿ ಕಣ್ಮರೆಯಾಗುತ್ತಿರುವ ಈ ದಿನಗಳಲ್ಲಿ, ಯಲ್ಲಾಪುರ ತಾಲೂಕಿನ ಭರತನಹಳ್ಳಿಯ ಇಬ್ಬರು ಸಹೋದರಿಯರು ತಮ್ಮ ಕಲೆಯ ಮೂಲಕ ಸಂಪ್ರದಾಯದ ಸೊಗಡನ್ನು ಉಳಿಸುವ ಪ್ರಯತ್ನ ಮಾಡಿದ್ದಾರೆ.

Ad

ಭರತನಹಳ್ಳಿ ಗ್ರಾಮದ ದೇವರಾಯ ನಾಯ್ಕ ಹಾಗೂ ಸುಮನಾ ನಾಯ್ಕ ದಂಪತಿಯ ಪುತ್ರಿಯರಾದ ಪವಿತ್ರಾ ಮತ್ತು ಸುಚಿತ್ರಾ, ಗ್ರಾಮದ ಆರಾಧ್ಯ ದೇವತೆ ಭ್ರಮರಾಂಭ ದೇವಿಯ ಸನ್ನಿಧಿಯಲ್ಲಿ ನವರಾತ್ರಿಯ ಹತ್ತು ದಿನಗಳ ಕಾಲ ಪ್ರತಿದಿನ ಬೆಳಗ್ಗೆ ಒಂದೊಂದು ರಂಗೋಲಿ ಬಿಡಿಸಿ ದೇವಿಗೆ ತಮ್ಮ ಕಲೆಯನ್ನು ಅರ್ಪಿಸಿದ್ದಾರೆ. ಪ್ರತಿದಿನವೂ ಹೊಸ ಚಿತ್ತಾರ ಬಿಡಿಸುವ ಮೂಲಕ ದೇವಾಲಯದ ಆವಾರಕ್ಕೆ ವಿಶೇಷ ಮೆರುಗು ತಂದಿದ್ದಾರೆ.

ಹಬ್ಬ-ಹರಿದಿನಗಳಲ್ಲಿ ಮನೆಯ ಅಂಗಳದಲ್ಲಿ ರಂಗೋಲಿ ಬಿಡಿಸುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ. ಇಂತಹ ಕಲೆಗಳು ನಿಧಾನವಾಗಿ ಮರೆಯಾಗುತ್ತಿರುವ ಸಂದರ್ಭದಲ್ಲಿ ಪವಿತ್ರಾ ಮತ್ತು ಸುಚಿತ್ರಾ ನವರಾತ್ರಿಯ ಹತ್ತು ದಿನವೂ ದೇವಸ್ಥಾನಕ್ಕೆ ಬಂದು ರಂಗೋಲಿ ಬಿಡಿಸಿರುವುದು ಗಮನಾರ್ಹವಾಗಿದೆ.

ನವರಾತ್ರಿಯ ಸಂದರ್ಭದಲ್ಲಿ ಭರತನಹಳ್ಳಿಯ ಗ್ರಾಮದೇವತೆ ಭ್ರಮರಾಂಭ ದೇವಿಯ ದರ್ಶನಕ್ಕೆ ನೂರಾರು ಭಕ್ತರು ಆಗಮಿಸುತ್ತಾರೆ. ಹಣ್ಣು-ಕಾಯಿ, ಉಡಿ ಸಮರ್ಪಣೆ ಹಾಗೂ ಕುಂಕುಮಾರ್ಚನೆ ನೆರವೇರಿಸಿ ದೇವಿಯ ಆಶೀರ್ವಾದ ಪಡೆಯುತ್ತಾರೆ. ಇಂತಹ ಭಕ್ತಿಭಾವದ ವಾತಾವರಣದಲ್ಲಿ ಸಹೋದರಿಯರ ಕೈಯಲ್ಲಿ ಅರಳಿದ ರಂಗೋಲಿಗಳು ದೇವಿಯ ಸನ್ನಿಧಿಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿವೆ.

ಪವಿತ್ರಾ ಮತ್ತು ಸುಚಿತ್ರಾ ಅವರ ಕಲಾಸಕ್ತಿಗೆ ಭ್ರಮರಾಂಭ ಹಾಗೂ ಮಲ್ಲಿಕಾರ್ಜುನ ದೇವಸ್ಥಾನದ ಆಡಳಿತ ಮಂಡಳಿಯವರು ಹರ್ಷ ವ್ಯಕ್ತಪಡಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!