Friday, March 13, 2026
HomeLocal Newsತಾಲೂಕು ಕೇಂದ್ರಗಳಲ್ಲೂ'ಬಿಳಿ ಹೊಗೆ'ಯ ಕರಿನೆರಳು!

ತಾಲೂಕು ಕೇಂದ್ರಗಳಲ್ಲೂ’ಬಿಳಿ ಹೊಗೆ’ಯ ಕರಿನೆರಳು!

ರಾಜ್ಯದ ವಿವಿಧ ಭಾಗಗಳಲ್ಲಿ, ವಿಶೇಷವಾಗಿ ಸುಸಂಸ್ಕೃತರ ಜಿಲ್ಲೆಯೆಂದೇ ಹೆಸರಾಗಿರುವ ಉತ್ತರಕನ್ನಡ ಜಿಲ್ಲೆಯಲ್ಲಿಯೂ ಗಾಂ*ಜಾ ಸೇವನೆಯ ಪ್ರಕರಣಗಳು ಹೆಚ್ಚುತ್ತಿರುವುದು ಸಮಾಜದ ಸ್ವಾಸ್ಥ್ಯವನ್ನು ಕದಡುತ್ತಿರುವ ವಿಚಾರ. ಇದು ನಮ್ಮ ಯುವಜನತೆಯ ಭವಿಷ್ಯದ ಮೇಲೆ ಬೀಳುತ್ತಿರುವ ಕಪ್ಪು ನೆರಳು. ಹಳ್ಳಿ-ನಗರ, ಶ್ರೀಮಂತ-ಬಡ ಎಂಬ ಬೇಧವಿಲ್ಲದೆ ಈ ವ್ಯಸನ ಎಲ್ಲೆಡೆ ವ್ಯಾಪಿಸುತ್ತಿರುವುದು ಆತಂಕಕಾರಿ ಬೆಳವಣಿಗೆ.

ಈ ಆತಂಕ ಈಗ ಕರಾವಳಿ ಮತ್ತು ಅರಣ್ಯಸಿರಿ ಹೊಂದಿರುವ ಉತ್ತರಕನ್ನಡ ಜಿಲ್ಲೆಯಲ್ಲಿಯೂ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತಿದೆ. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಪ್ರತಿನಿತ್ಯ ಒಂದಲ್ಲೊಂದು ಕಡೆ ಗಾಂ*ಜಾ ಸೇವನೆಯ ಪ್ರಕರಣಗಳು ದಾಖಲಾಗುತ್ತಿವೆ ಎಂಬುದು ಚಿಂತಾಜನಕ ಸಂಗತಿ. ಇದರ ಹಿಂದೆ ಸಂಘಟಿತ ಸರಬರಾಜು ಜಾಲವಿರುವ ಸಾಧ್ಯತೆ ಹೆಚ್ಚಾಗಿದೆ.

ಈ ಪಾಶಕ್ಕೆ ಸಿಲುಕುತ್ತಿರುವವರು ಹೈಸ್ಕೂಲು ವಿದ್ಯಾರ್ಥಿಗಳಿಂದ ಕಾಲೇಜು ಯುವಕರವರೆಗೆ ದೇಶದ ಭವಿಷ್ಯವೆಂದೇ ಕರೆಯಲ್ಪಡುವ ಯುವಜನತೆ. ಸ್ನೇಹಿತರ ಒತ್ತಾಯ, ಓದು-ಉದ್ಯೋಗದ ಒತ್ತಡ, ಕುಟುಂಬದ ಸಮಸ್ಯೆಗಳಿಂದ ತಪ್ಪಿಸಿಕೊಳ್ಳುವ ಮನೋಭಾವ ಇವೆಲ್ಲವೂ ಯುವಕರನ್ನು ಈ ಕತ್ತಲೆಯ ದಾರಿಯತ್ತ ಒಯ್ಯುತ್ತಿವೆ.

ಆದರೆ ಇಲ್ಲಿ ಇನ್ನೊಂದು ಕಠಿಣ ಸತ್ಯವಿದೆ. ಇಲ್ಲಿ ಯುವಕರು ಮಾತ್ರ ತಪ್ಪುಗಾರರಲ್ಲ. ಅವರ ದುರ್ಬಲತೆಯನ್ನು ಲಾಭದಾಯಕ ವ್ಯವಹಾರವಾಗಿ ನೋಡುತ್ತಿರುವ ಧನದಾಹಿಗಳು, ಕಳ್ಳಸಾಗಣೆ ಜಾಲಗಳು, ಗುಪ್ತ ಸರಬರಾಜು ವಲಯಗಳು ಈ ವಿಷದ ವ್ಯಾಪಾರವನ್ನು ಬೆಳೆಸುತ್ತಿವೆ. ಅಮಾಯಕ ವಿದ್ಯಾರ್ಥಿಗಳೇ ಇವರಿಗೆ ಸುಲಭ ಬಲಿಗಳು. ಒಂದು ಪ್ಯಾಕೆಟ್ ಮಾರಾಟದಿಂದ ಬರುವ ಲಾಭಕ್ಕಾಗಿ ಯಾರೋ ಒಬ್ಬರು ತಮ್ಮ ಸ್ವಾರ್ಥ ತೀರಿಸಿಕೊಳ್ಳುತ್ತಾರೆ; ಆದರೆ ಅದರ ಬೆಲೆ ಒಂದು ಕುಟುಂಬದ ಕಣ್ಣೀರಾಗುತ್ತದೆ, ಓರ್ವ ಯುವಕನ ಭವಿಷ್ಯ ಹಾಳಾಗುತ್ತದೆ.

ನೆನಪಿಡಿ, ಕೆಲ ತಾಲೂಕುಗಳ ಪಟ್ಟಣ ಪ್ರದೇಶದ ಹೈಸ್ಕೂಲು ವಿದ್ಯಾರ್ಥಿಗಳಿಗೂ ಇದರ ರುಚಿ ಅದಾಗಲೇ ತಾಕಿದೆ. ಹೀಗಾಗಿ, ಕೇವಲ ಬಳಕೆದಾರರನ್ನು ಬಂಧಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಸೋಷಿಯಲ್‌ ಮೀಡಿಯಾಗಳಲ್ಲಿ ʻquite drugsʼ ಎಂದು ವಿಡಿಯೋ, ಪೋಸ್ಟರ್‌ ಅಪ್‌ಲೋಡ್‌ ಮಾಡಿ ಕುಳಿತರೂ ಸಮಸ್ಯೆ ಕಡಿಮೆಯಾಗದು. ಅಧಿಕಾರಿಗಳು “ನಮ್ಮ ಕೆಲಸ ನಾವು ಮಾಡುತ್ತಲೇ ಇದ್ದೇವೆ, ಆದರೂ ಸ್ಮಗ್ಲರ್‌ಗಳು ರಂಗೋಲಿಯ ಕೆಳಗೆ ತೂರುತ್ತಿದ್ದಾರೆ, ನಮ್ಮ ಕಾರ್ಯ ಮುಂದುವರೆಯುತ್ತದೆ” ಎಂದರೂ ಪ್ರಯೋಜನವಾಗದು.

ಒಂದಿಷ್ಟು ದಿನ ಪಟ್ಟಣ ಪ್ರದೇಶಗಳ ಹೈಸ್ಕೂಲು, ಕಾಲೇಜುಗಳ ಅಕ್ಕಪಕ್ಕದ ಕೆಲ ಅಂಗಡಿಗಳ ಮೇಲೆ ಕಣ್ಣಿಟ್ಟರೂ ಮಹತ್ವದ ಸುಳಿವುಗಳು ಸಿಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ಬಂಧಿತರಿಗೆ ಗಾಂ*ಜಾ ಎಲ್ಲಿಂದ ಪೂರೈಕೆಯಾಯಿತು, ಅದರ ಮೂಲ ಯಾವುದು, ಯಾವ ಜಾಲದ ಮೂಲಕ ಜಿಲ್ಲೆಗೆ ತಲುಪತ್ತಿದೆ ಎಂಬುದನ್ನು ಸಮಗ್ರವಾಗಿ ತನಿಖೆ ಮಾಡಿ, ಸರಬರಾಜು ಸರಪಳಿಯನ್ನು ಬೇರುಸಹಿತ ಕಿತ್ತುಹಾಕುವ ಕೆಲಸವನ್ನು ಸಂಬಂಧಿಸಿದ ಇಲಾಖೆಗಳು ಸಮನ್ವಯದಿಂದ ಕೈಗೊಳ್ಳಬೇಕಾದ ಜರೂರಿದೆ. ಸಣ್ಣ ಮೀನುಗಳನ್ನು ಹಿಡಿಯುವುದಕ್ಕಿಂತ ದೊಡ್ಡ ಜಾಲವನ್ನು ಭೇದಿಸುವ ಕ್ರಮವೇ ಶಾಶ್ವತ ಪರಿಹಾರ.

ಗಾಂ*ಜಾ ಕೇವಲ ಒಂದು ವ್ಯಸನವಲ್ಲ. ಅದು ಮನಸ್ಸಿನ ಮೇಲೆ ಹಿಡಿತ ಸಾಧಿಸುವ ಮೌನ ಶತ್ರು. ಈ ಸಮಸ್ಯೆ ಸರ್ಕಾರದ ಹೊಣೆಗಾರಿಕೆಗಷ್ಟೇ ಸೀಮಿತವಲ್ಲ. ಪೋಷಕರು ಮಕ್ಕಳ ನಡೆ-ನುಡಿಗಳನ್ನು ಗಮನಿಸಬೇಕು. ಶಾಲೆ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳು ಪರಿಣಾಮಕಾರಿಯಾಗಬೇಕಿದೆ ಎಂಬುದು ಜಿಲ್ಲೆಯ ಪ್ರಜ್ಞಾವಂತ ನಾಗರಿಕರ ಕೋರಿಕೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share