Friday, March 13, 2026
HomeCrimeಎಚ್ಚರಿಕೆಯ ಪಾಠವಾದ ಶಿವಮೊಗ್ಗದ ಸೈಬರ್ ವಂಚನೆ ಪ್ರಕರಣ

ಎಚ್ಚರಿಕೆಯ ಪಾಠವಾದ ಶಿವಮೊಗ್ಗದ ಸೈಬರ್ ವಂಚನೆ ಪ್ರಕರಣ

ಬ್ಯಾಂಕ್‌ ಖಾತೆಯನ್ನೂ ಬಾಡಿಗೆ ಪಡೆದು ಮಾಡಿದ್ದೇನು ಗೊತ್ತೇ?!

ಸುಲಭ ಹಣ, ಕಮಿಷನ್, ತಿಂಗಳಿಗೆ ನಿಗದಿತ ಆದಾಯ ಎಂಬ ಆಮಿಷಕ್ಕೆ ಬಲಿಯಾದರೆ ನಿಮ್ಮದೇ ಬ್ಯಾಂಕ್ ಖಾತೆ ನಿಮ್ಮನ್ನು ಅಪರಾಧಿಯಾಗಿಸಬಹುದು ಎಂಬುದಕ್ಕೆ ಶಿವಮೊಗ್ಗದಲ್ಲಿ ಬಯಲಾದ ಸೈಬರ್ ವಂಚನೆ ಪ್ರಕರಣ ಜೀವಂತ ಉದಾಹರಣೆ.

ಶಿವಮೊಗ್ಗದ ತುಂಗಾನಗರ ನಿವಾಸಿ ಕೆ. ಶರತ್ ಕುಮಾರ್ ಅಲಿಯಾಸ್ ಗುಂಡ ಎಂಬಾತ ಸಾರ್ವಜನಿಕರ ಬ್ಯಾಂಕ್ ಖಾತೆಗಳ ಸಂಪೂರ್ಣ ವಿವರಗಳನ್ನು ಹಣದ ಆಮಿಷವೊಡ್ಡಿ ಪಡೆದು ಸೈಬರ್ ವಂಚಕರಿಗೆ ನೀಡುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಚಾಲಕ ವೃತ್ತಿ ಮಾಡುತ್ತಿದ್ದ ಶರತ್ ಕುಮಾರ್ ತನ್ನ ಸ್ನೇಹಿತ ಅಮಿತ್ ಎಂಬುವರನ್ನು ನಂಬಿಸಿ, ಬ್ಯಾಂಕ್ ಪಾಸ್‌ಬುಕ್, ಎಟಿಎಂ ಕಾರ್ಡ್, ಮೊಬೈಲ್ ಸಂಖ್ಯೆ ಸೇರಿದಂತೆ ಎಲ್ಲಾ ಖಾತೆ ವಿವರಗಳನ್ನು ಪಡೆದುಕೊಂಡಿದ್ದ.

ಪ್ರತಿ 15 ದಿನಕ್ಕೊಮ್ಮೆ ಕಮಿಷನ್ ನೀಡುವುದಾಗಿ ಭರವಸೆ ನೀಡಿದ್ದ ಶರತ್, ಅಮಿತ್‌ನ ಖಾತೆಯನ್ನು ವಂಚನೆಗೆ ಬಳಸಿದ್ದಾನೆ ಎಂಬುದು ನಂತರ ಬೆಳಕಿಗೆ ಬಂದಿದೆ. ಕೆಲವೇ ದಿನಗಳಲ್ಲಿ ಅಮಿತ್‌ನ ಖಾತೆ ಫ್ರೀಜ್ ಆಗಿದ್ದು, ಬ್ಯಾಂಕ್‌ಗೆ ವಿಚಾರಿಸಲು ಹೋದಾಗ ಆ ಖಾತೆಯ ವಿರುದ್ಧವೇ 51 ಸೈಬರ್ ಕ್ರೈಮ್ ಪ್ರಕರಣ ದಾಖಲಾಗಿವೆ ಎಂಬ ಶಾಕಿಂಗ್‌ ಮಾಹಿತಿ ದೊರೆತಿದೆ.

ಆತಂಕಗೊಂಡ ಅಮಿತ್ ನೀಡಿದ ದೂರಿನ ಆಧಾರದಲ್ಲಿ ಶಿವಮೊಗ್ಗ ಸಿ.ಇ.ಎನ್ ಪೊಲೀಸರು ಶರತ್ ಕುಮಾರ್‌ನನ್ನು ಬಂಧಿಸಿದ್ದು, ಆತನಿಂದ 18 ಪಾಸ್‌ಬುಕ್‌ಗಳು, 25 ಎಟಿಎಂ ಕಾರ್ಡ್‌ಗಳು, 7 ಚೆಕ್ ಬುಕ್‌ಗಳು, 2 ಮೊಬೈಲ್ ಫೋನ್‌ಗಳು ಹಾಗೂ 2 ಕ್ಯೂಆರ್ ಕೋಡ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ತನಿಖೆಯಲ್ಲಿ ಈತನ ಬಳಿ ಇದ್ದ 19 ಬಾಡಿಗೆ ಬ್ಯಾಂಕ್ ಖಾತೆಗಳ ಮೂಲಕ ದೇಶಾದ್ಯಂತ 96ಕ್ಕೂ ಹೆಚ್ಚು ವಂಚನೆ ಪ್ರಕರಣಗಳು ನಡೆದಿದ್ದು, ಸಾರ್ವಜನಿಕರಿಂದ ಸುಮಾರು 55.43 ಕೋಟಿ ರೂ ಮೊತ್ತದ ವಂಚನೆ ಎಸಗಿರುವುದು ಬೆಳಕಿಗೆ ಬಂದಿದೆ. ಇದೇ ಖಾತೆಗಳ ಮೂಲಕ 11.48 ಕೋಟಿ ರೂ ಹಣ ವರ್ಗಾವಣೆ ನಡೆದಿರುವುದೂ ದಾಖಲಾಗಿದೆ.

ಇನ್ನೂ ಆತಂಕಕಾರಿ ಅಂಶವೆಂದರೆ, 2021ರಿಂದ ಇದುವರೆಗೆ ನಡೆದ ತನಿಖೆಯಲ್ಲಿ ಸುಮಾರು 48 ಸಾವಿರಕ್ಕೂ ಹೆಚ್ಚು ಬಾಡಿಗೆ ಬ್ಯಾಂಕ್ ಖಾತೆಗಳು (ಮ್ಯೂಲ್ ಅಕೌಂಟ್ಸ್) ದೇಶದಾದ್ಯಂತ ಅಕ್ರಮ ಚಟುವಟಿಕೆಗೆ ಬಳಸಲ್ಪಟ್ಟಿದ್ದು, ಅಂದಾಜು 100 ಕೋಟಿ ರೂಪಾಯಿಗೂ ಅಧಿಕ ಹಣದ ವಹಿವಾಟು ನಡೆದಿದೆ. ವಂಚಕರು ಒಂದು ನಕಲಿ ಅಥವಾ ಬಾಡಿಗೆ ಖಾತೆಗೆ 10ರಿಂದ 20 ಸಾವಿರದವರೆಗೆ ಹಣ ನೀಡುತ್ತಿದ್ದು, ಆ ಖಾತೆಯ ಮೂಲಕ ಪ್ರತಿ 1 ಲಕ್ಷ ರೂಪಾಯಿ ವರ್ಗಾವಣೆಯಾದಾಗ 3ರಿಂದ 5 ಸಾವಿರ ರೂಪಾಯಿ ಕಮಿಷನ್ ನೀಡುತ್ತಿದ್ದರು.

ಕೆಲವರು ಇದನ್ನೇ ವೃತ್ತಿಯಾಗಿ ಮಾಡಿಕೊಂಡು ವ್ಯವಸ್ಥಿತ ದಂಧೆ ನಡೆಸುತ್ತಿರುವುದು ತನಿಖೆಯಿಂದ ಸ್ಪಷ್ಟವಾಗಿದೆ. ಈ ಪ್ರಕರಣದಿಂದ ಸ್ಪಷ್ಟವಾಗುವ ಸಂದೇಶ ಒಂದೇ. ನಿಮ್ಮ ಬ್ಯಾಂಕ್ ಖಾತೆ, ಎಟಿಎಂ ಕಾರ್ಡ್, ಪಾಸ್‌ಬುಕ್, ಓಟಿಪಿ, ಮೊಬೈಲ್ ಸಂಖ್ಯೆ ಯಾವತ್ತೂ ಯಾರಿಗೂ ನೀಡಬಾರದು. ಸುಲಭ ಹಣದ ಆಮಿಷಕ್ಕೆ ಬಲಿಯಾದರೆ ಕಾನೂನು ತೊಂದರೆ, ಬಂಧನ, ಜೈಲು ಶಿಕ್ಷೆಗೂ ಕಾರಣವಾಗಬಹುದು.

ಸೈಬರ್ ವಂಚನೆಗಳಲ್ಲಿ ನೇರವಾಗಿ ಹಣ ಕಳಿಸಿದವನಷ್ಟೇ ಅಪರಾಧಿಯಲ್ಲ. ತನ್ನ ಖಾತೆಯನ್ನು ಬಳಸಲು ಅವಕಾಶ ಕೊಟ್ಟವನೂ ಕಾನೂನು ಪ್ರಕಾರ ಸಮಾನ ಅಪರಾಧಿಯೇ. ಅನುಮಾನಾಸ್ಪದ ಆಫರ್‌ಗಳನ್ನು ತಕ್ಷಣವೇ ನಿರಾಕರಿಸಿ. ಸೈಬರ್ ಅಪರಾಧ ಕಂಡುಬಂದರೆ ಕೂಡಲೇ ಪೊಲೀಸರಿಗೆ ಅಥವಾ ಸೈಬರ್ ಕ್ರೈಮ್ ಹೆಲ್ಪ್‌ಲೈನ್‌ಗೆ ದೂರು ನೀಡಿ. ಜಾಗೃತಿಯೇ ಇಂತಹ ವಂಚನೆಗಳ ವಿರುದ್ಧದ ಅತಿದೊಡ್ಡ ಅಸ್ತ್ರ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share