Thursday, October 22, 2026
HomeLocal Newsವ್ಯಸನಮುಕ್ತ ವ್ಯಕ್ತಿಗಳಿಂದ ಆರೋಗ್ಯಕರ ಸಮಾಜ ನಿರ್ಮಾಣ: ನಟರಾಜ್ ಬಾದಾಮಿ

ವ್ಯಸನಮುಕ್ತ ವ್ಯಕ್ತಿಗಳಿಂದ ಆರೋಗ್ಯಕರ ಸಮಾಜ ನಿರ್ಮಾಣ: ನಟರಾಜ್ ಬಾದಾಮಿ

ಶಿರಸಿ: ವ್ಯಸನಮುಕ್ತ ವ್ಯಕ್ತಿಗಳಿಂದ ನೆಮ್ಮದಿಯ ಕುಟುಂಬ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯ ಸಂಘಟನಾ ಅಧ್ಯಕ್ಷ ನಟರಾಜ್ ಬಾದಾಮಿ ಹೇಳಿದರು.

ನಗರದ ಮಾರಿಕಾಂಬಾ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಮಹಾತ್ಮ ಗಾಂಧೀಜಿಯವರ ಜಯಂತಿ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.), ಬಿ.ಸಿ. ಟ್ರಸ್ಟ್ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಗಾಂಧಿ ಸ್ಮೃತಿ ಹಾಗೂ ನವಜೀವನ ಸಮಿತಿಯ ಸಮಾವೇಶದಲ್ಲಿ ಅವರು ಮಾತನಾಡಿದರು.

ಗಾಂಧೀಜಿಯವರ ಸತ್ಯ, ಅಹಿಂಸೆ ಮತ್ತು ಸರಳ ಜೀವನದ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ. ಯುವಜನರು ಮದ್ಯಪಾನ ಸೇರಿದಂತೆ ವಿವಿಧ ದುಶ್ಚಟಗಳಿಗೆ ಬಲಿಯಾಗದೆ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು. ಮದ್ಯವರ್ಜನ ಶಿಬಿರಗಳ ಮೂಲಕ ಈವರೆಗೆ 1.40 ಲಕ್ಷಕ್ಕೂ ಅಧಿಕ ಮಂದಿ ಮದ್ಯಪಾನ ತ್ಯಜಿಸಿ ನವಜೀವನದತ್ತ ಹೆಜ್ಜೆ ಇಟ್ಟಿರುವುದು ಜನಜಾಗೃತಿ ಕಾರ್ಯದ ಯಶಸ್ಸಿಗೆ ಸಾಕ್ಷಿಯಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ಮಾರಿಕಾಂಬಾ ದೇವಸ್ಥಾನದ ಧರ್ಮದರ್ಶಿ ರವಿ ಬೆಳ್ಳಿಮನೆ ಮಾತನಾಡಿ, ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಮ್ಮಿಕೊಳ್ಳುತ್ತಿರುವ ಸಮಾಜಮುಖಿ ಕಾರ್ಯಕ್ರಮಗಳು ಶ್ಲಾಘನೀಯ. ದುಶ್ಚಟಗಳಿಂದ ಸಂಕಷ್ಟಕ್ಕೀಡಾದ ವ್ಯಕ್ತಿಗಳು ಹಾಗೂ ಕುಟುಂಬಗಳಿಗೆ ಹೊಸ ಬದುಕಿನ ಭರವಸೆ ನೀಡುವಲ್ಲಿ ಜನಜಾಗೃತಿ ವೇದಿಕೆಯ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಮಾಜಿ ಅಧ್ಯಕ್ಷ ಸಚ್ಚಿದಾನಂದ ಹೆಗಡೆ ಮಾತನಾಡಿ, ಮದ್ಯಪಾನ ತ್ಯಜಿಸಿ ಹೊಸ ಬದುಕು ಕಟ್ಟಿಕೊಂಡವರು ತಮ್ಮ ಅನುಭವಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಕು. ಇದರಿಂದ ವ್ಯಸನದ ಸಮಸ್ಯೆ ಎದುರಿಸುತ್ತಿರುವವರಿಗೆ ಪ್ರೇರಣೆ ದೊರೆಯುವುದರ ಜತೆಗೆ ಸಮಾಜದಲ್ಲಿ ಜಾಗೃತಿ ಮೂಡಿಸಲು ಸಾಧ್ಯವಾಗುತ್ತದೆ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್ ಎಂ. ಮಾತನಾಡಿ, ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಕುಟುಂಬದ ವಾತಾವರಣ, ಪೋಷಕರ ನಡವಳಿಕೆ ಹಾಗೂ ಭಾಷೆಯ ಬಳಕೆ ಪ್ರಮುಖ ಪಾತ್ರ ವಹಿಸುತ್ತವೆ. ಮಕ್ಕಳಲ್ಲಿ ಉತ್ತಮ ಸಂಸ್ಕಾರ, ನೈತಿಕ ಮೌಲ್ಯಗಳು ಮತ್ತು ಪರಸ್ಪರ ಗೌರವದ ಮನೋಭಾವ ಬೆಳೆಸಬೇಕು. ಯುವಜನರಲ್ಲಿ ಮಾದಕ ವಸ್ತುಗಳ ಬಳಕೆ ಸೇರಿದಂತೆ ದುಶ್ಚಟಗಳತ್ತ ಹೆಚ್ಚುತ್ತಿರುವ ಆಕರ್ಷಣೆಯನ್ನು ನಿಯಂತ್ರಿಸಲು ಸೂಕ್ತ ಮಾರ್ಗದರ್ಶನ ಹಾಗೂ ನಿರಂತರ ಜಾಗೃತಿ ಅಗತ್ಯ ಎಂದು ತಿಳಿಸಿದರು.

ಶಿರಸಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ. ವೀಣಾ ಜೀ ಮಾತನಾಡಿ, ವ್ಯಸನಮುಕ್ತ ಜೀವನಕ್ಕೆ ದೃಢಸಂಕಲ್ಪ, ಆತ್ಮವಿಶ್ವಾಸ ಹಾಗೂ ನಿರಂತರ ಪ್ರಯತ್ನ ಅಗತ್ಯ. ಕೆಟ್ಟ ಚಟಗಳನ್ನು ತ್ಯಜಿಸಿ ಮೌಲ್ಯಾಧಾರಿತ ಜೀವನ ನಡೆಸುವುದರಿಂದ ಕುಟುಂಬದಲ್ಲಿ ಸಂತೋಷ ಹಾಗೂ ಸಮಾಜದಲ್ಲಿ ಆರೋಗ್ಯಕರ ವಾತಾವರಣ ನಿರ್ಮಿಸಲು ಸಾಧ್ಯ ಎಂದರು.

ನವಜೀವನ ಸಮಿತಿಯ ಸದಸ್ಯರಾದ ಅರುಣ್ ಶೆಟ್ಟಿ ಮತ್ತು ವೆಂಕಟೇಶ್ ತಮ್ಮ ಅನುಭವ ಹಾಗೂ ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿರಸಿ ಜಿಲ್ಲಾ ಜನಜಾಗೃತಿ ವೇದಿಕೆಯ ಸಂಘಟನಾ ಅಧ್ಯಕ್ಷೆ ಗೌರಿ ನಾಯ್ಕ್ ಮಾತನಾಡಿದರು.

ಮಾರಿಕಾಂಬಾ ದೇವಸ್ಥಾನದ ಧರ್ಮದರ್ಶಿ ಅರ್ಚನಾ ರಾಘವೇಂದ್ರ, ಜಿಲ್ಲಾ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ನವಜೀವನ ಸಮಿತಿಯ ಸದಸ್ಯರು, ಯೋಜನಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

ವಿಶಾಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಮೇಲ್ವಿಚಾರಕಿ ಅರ್ಚನಾ ಸ್ವಾಗತಿಸಿದರು. ಸಮನ್ವಯಾಧಿಕಾರಿ ಮಲ್ಲಿಕಾ ಶೆಟ್ಟಿ ವರದಿ ವಾಚಿಸಿದರು. ಸುನಂದ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share