ಕಾರವಾರ: ಪ್ರಸಕ್ತ ಸಾಲಿನ SPICED ಯೋಜನೆಯಡಿ ವಿವಿಧ ಕಾರ್ಯಕ್ರಮಗಳು ಹಾಗೂ ಘಟಕಗಳಿಗೆ ಆರ್ಥಿಕ ನೆರವು ಪಡೆಯಲು ಅರ್ಹ ರೈತರು, ರೈತ ಉತ್ಪಾದಕ ಸಂಸ್ಥೆಗಳು (ಎಫ್‌ಪಿಒ), ರಫ್ತುದಾರರು ಮತ್ತು ಸಂಬಾರ ವಲಯದ ಇತರೆ ಪಾಲುದಾರರಿಂದ ಸಂಬಾರ ಮಂಡಳಿ ಅರ್ಜಿಗಳನ್ನು ಆಹ್ವಾನಿಸಿದೆ.
ಈ ಯೋಜನೆಯಡಿ ಏಲಕ್ಕಿ ಹೊಸ ನಾಟಿ ಮತ್ತು ಮರುನಾಟಿ, ಪ್ರಮಾಣೀಕೃತ ನರ್ಸರಿ ಸ್ಥಾಪನೆ, ನೀರು ಸಂಗ್ರಹಣಾ ರಚನೆ ನಿರ್ಮಾಣ, ನೀರಾವರಿ ಪಂಪ್‌ಸೆಟ್ ಖರೀದಿ, ಸ್ಪ್ರಿಂಕ್ಲರ್ ವ್ಯವಸ್ಥೆ ಅಳವಡಿಕೆ ಸೇರಿದಂತೆ ಹಲವು ಯೋಜನೆಗಳಿಗೆ ನೆರವು ಲಭ್ಯವಿದೆ.
ಇದರ ಜೊತೆಗೆ, ಎಫ್‌ಪಿಒಗಳ ಮೂಲಕ ಕೊಯ್ಲೋತ್ತರ ಉಪಕರಣಗಳ ಬ್ಯಾಂಕ್ ಸ್ಥಾಪನೆ, ಕಾಳುಮೆಣಸು ಬಿಡಿಸುವ ಯಂತ್ರ, ಪಾಲಿಷರ್, ಸ್ವಚ್ಛಗೊಳಿಸುವ ಹಾಗೂ ದರ್ಜೆ ವಿಂಗಡಿಸುವ ಯಂತ್ರಗಳು, ತೊಳೆಯುವ ಉಪಕರಣಗಳು, ಹುಣಸೆಹಣ್ಣಿನ ಸಿಪ್ಪೆ ಮತ್ತು ಬೀಜ ತೆಗೆಯುವ ಯಂತ್ರಗಳು, ಡ್ರೈಯರ್ ಹಾಗೂ ಸುಧಾರಿತ ಏಲಕ್ಕಿ ಕ್ಯೂರಿಂಗ್ ಸಾಧನಗಳ ಖರೀದಿಗೂ ಅರ್ಜಿ ಸಲ್ಲಿಸಬಹುದಾಗಿದೆ.
ಆಸಕ್ತರು ಆನ್‌ಲೈನ್ ಮೂಲಕ ಆಗಸ್ಟ್ 31ರೊಳಗೆ ಅರ್ಜಿ ಸಲ್ಲಿಸಬೇಕು. ನಿಗದಿತ ಅವಧಿಯ ನಂತರ ಸಲ್ಲಿಸಲಾದ ಅಥವಾ ಅಪೂರ್ಣ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸಂಬಾರ ಮಂಡಳಿ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ www.indianspices.com ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ ಸಮೀಪದ ಸಂಬಾರ ಮಂಡಳಿ ಕಚೇರಿಯನ್ನು ಸಂಪರ್ಕಿಸಬಹುದು.