Saturday, May 30, 2026
HomeLifestyleವಾಸ್ತು ಪ್ರಕಾರ... ಶೌಚಾಲಯಕ್ಕೂ ಐತೆ ವಾಸ್ತು!

ವಾಸ್ತು ಪ್ರಕಾರ… ಶೌಚಾಲಯಕ್ಕೂ ಐತೆ ವಾಸ್ತು!

ಮನೆ ಕಟ್ಟುವಾಗ ಬಹುತೇಕರು ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಯಾವ ಕೋಣೆ ಯಾವ ಜಾಗದಲ್ಲಿ ಇರಬೇಕು, ಯಾವ ದಿಕ್ಕಿನಲ್ಲಿ ಇರಬೇಕು, ಮನೆಯ ಒಳ ವಿನ್ಯಾಸ ಹೇಗಿರಬೇಕು ಎಂಬುದನ್ನು ಗಮನಿಸಿ ಯೋಜನೆ ರೂಪಿಸಲಾಗುತ್ತದೆ.

ಇದೇ ರೀತಿಯಲ್ಲಿ ಸ್ನಾನಗೃಹ ಅಥವಾ ಶೌಚಾಲಯದ ಸ್ಥಳವನ್ನು ಆಯ್ಕೆ ಮಾಡುವಾಗಲೂ ಕೆಲವು ವಾಸ್ತು ನಿಯಮಗಳನ್ನು ಪಾಲಿಸಬೇಕು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ತಪ್ಪು ದಿಕ್ಕಿನಲ್ಲಿ ಶೌಚಾಲಯ ನಿರ್ಮಿಸಿದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿ, ಕುಟುಂಬದಲ್ಲಿ ಅಶಾಂತಿ, ಆರೋಗ್ಯ ಸಮಸ್ಯೆಗಳು ಮತ್ತು ಆರ್ಥಿಕ ತೊಂದರೆಗಳು ಎದುರಾಗಬಹುದು ಎಂಬ ನಂಬಿಕೆ ಇದೆ.

ವಾಸ್ತು ಶಾಸ್ತ್ರದ ಪ್ರಕಾರ ವಾಯುವ್ಯ ದಿಕ್ಕು, ಅಂದರೆ ಉತ್ತರ-ಪಶ್ಚಿಮ ಭಾಗದಲ್ಲಿ ಸ್ನಾನಗೃಹ ಅಥವಾ ಶೌಚಾಲಯ ನಿರ್ಮಿಸುವುದು ಅತ್ಯುತ್ತಮ ಎಂದು ಪರಿಗಣಿಸಲಾಗುತ್ತದೆ. ಮನೆಯ ಹೊರಗಡೆಯ ಗೋಡೆಯ ಸಮೀಪ ಈ ಭಾಗದಲ್ಲಿ ನಿರ್ಮಿಸಿದರೆ ಉತ್ತಮ ಫಲ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಈ ಜಾಗದಲ್ಲಿ ನಿರ್ಮಿಸಲು ಸಾಧ್ಯವಾಗದಿದ್ದರೆ ಪಶ್ಚಿಮ ದಿಕ್ಕು ಕೂಡ ಪರ್ಯಾಯವಾಗಿ ಬಳಸಬಹುದಾಗಿದೆ.

ಕೆಲವು ಸಂದರ್ಭಗಳಲ್ಲಿ ದಕ್ಷಿಣ ದಿಕ್ಕಿನಲ್ಲಿಯೂ ಶೌಚಾಲಯ ನಿರ್ಮಿಸಬಹುದು. ಆದರೆ ಅದು ನೈಋತ್ಯ ಭಾಗಕ್ಕೆ ತಾಗದಂತೆ ವಿಶೇಷ ಜಾಗ್ರತೆ ವಹಿಸಬೇಕು. ನೈಋತ್ಯ ದಿಕ್ಕಿನಲ್ಲಿ ಸ್ನಾನಗೃಹ ನಿರ್ಮಿಸುವುದು ಮಾನಸಿಕ ಒತ್ತಡ, ಅಶಾಂತಿ ಮತ್ತು ಕುಟುಂಬದಲ್ಲಿ ಕಲಹಕ್ಕೆ ಕಾರಣವಾಗಬಹುದು ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ.

ಇನ್ನೊಂದೆಡೆ, ಈಶಾನ್ಯ ದಿಕ್ಕಿನಲ್ಲಿ ಬಾತ್ರೂಮ್ ಅಥವಾ ಶೌಚಾಲಯ ನಿರ್ಮಿಸಿದರೆ ಆರ್ಥಿಕ ಸಮಸ್ಯೆಗಳು, ಆರೋಗ್ಯ ಸಮಸ್ಯೆಗಳು ಹಾಗೂ ಮನೆಯ ಶಾಂತಿ ಭಂಗವಾಗುವ ಸಾಧ್ಯತೆ ಇದೆ ಎಂಬ ನಂಬಿಕೆ ಇದೆ. ಆಗ್ನೇಯ ದಿಕ್ಕು ಅಗ್ನಿ ತತ್ವಕ್ಕೆ ಸಂಬಂಧಿಸಿದ ದಿಕ್ಕಾಗಿರುವುದರಿಂದ, ಅಲ್ಲಿ ನೀರಿನ ಅಂಶ ಇರುವ ಸ್ನಾನಗೃಹ ನಿರ್ಮಿಸುವುದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ.

ಶೌಚಾಲಯದ ಆಸನದ ದಿಕ್ಕಿಗೂ ವಾಸ್ತುವಿನಲ್ಲಿ ಮಹತ್ವ ನೀಡಲಾಗಿದೆ. ಆಸನವನ್ನು ಉತ್ತರ ಅಥವಾ ದಕ್ಷಿಣ ದಿಕ್ಕಿಗೆ ಮುಖವಾಗಿರಿಸುವುದು ಸೂಕ್ತ ಎಂದು ತಜ್ಞರು ಸಲಹೆ ನೀಡುತ್ತಾರೆ. ಪೂರ್ವ ಅಥವಾ ಪಶ್ಚಿಮಕ್ಕೆ ಮುಖವಾಗಿರುವ ವ್ಯವಸ್ಥೆಯನ್ನು ತಪ್ಪಿಸಲು ಸೂಚಿಸಲಾಗುತ್ತದೆ.

ನೀರಿನ ನಲ್ಲಿಗಳು, ಶವರ್‌ಗಳು ಮತ್ತು ಇತರೆ ನೀರಿನ ಸಂಪರ್ಕ ಸಾಧನಗಳನ್ನು ಪೂರ್ವ, ಉತ್ತರ ಅಥವಾ ಈಶಾನ್ಯ ಗೋಡೆಗಳಲ್ಲಿ ಅಳವಡಿಸುವುದು ಉತ್ತಮ. ಅದೇ ರೀತಿ ಕನ್ನಡಿಯನ್ನು ಪೂರ್ವ ಅಥವಾ ಉತ್ತರ ಗೋಡೆಯ ಮೇಲೆ ಇಡುವುದು ಶುಭಕರ ಎಂದು ಪರಿಗಣಿಸಲಾಗುತ್ತದೆ.

ಸ್ನಾನಗೃಹದಲ್ಲಿ ಗಾಳಿಯ ಸರಿಯಾದ ಹರಿವೂ ಅಗತ್ಯವಾಗಿದೆ. ಕಿಟಕಿ ಮೂಲಕ ಗಾಳಿ ಸುಲಭವಾಗಿ ಒಳಬರುವ ವ್ಯವಸ್ಥೆ ಮಾಡಬೇಕು. ಸಾಧ್ಯವಾಗದಿದ್ದರೆ ಎಕ್ಸಾಸ್ಟ್ ಫ್ಯಾನ್ ಅನ್ನು ವಾಯುವ್ಯ ಅಥವಾ ಪಶ್ಚಿಮ ದಿಕ್ಕಿನಲ್ಲಿ ಅಳವಡಿಸಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.

ಒಟ್ಟಿನಲ್ಲಿ, ಮನೆ ನಿರ್ಮಾಣದಲ್ಲಿ ಶೌಚಾಲಯದ ಸ್ಥಳ, ದಿಕ್ಕು ಹಾಗೂ ಒಳ ವಿನ್ಯಾಸಕ್ಕೂ ಸಮಾನ ಪ್ರಾಮುಖ್ಯತೆ ನೀಡಿದರೆ ಮನೆಯ ವಾತಾವರಣ ಸಮತೋಲನದಲ್ಲಿರುತ್ತದೆ ಎಂಬುದು ವಾಸ್ತು ಶಾಸ್ತ್ರದ ನಂಬಿಕೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share