Friday, March 13, 2026
HomeLocal Newsಸರಕಾರಿ ಆಸ್ಪತ್ರೆಗಳಲ್ಲಿ ಹೊರಗಿನಿಂದ ಔಷಧಿ ಪಡೆಯಲು ಹೇಳಬೇಡಿ

ಸರಕಾರಿ ಆಸ್ಪತ್ರೆಗಳಲ್ಲಿ ಹೊರಗಿನಿಂದ ಔಷಧಿ ಪಡೆಯಲು ಹೇಳಬೇಡಿ

ಕಾರವಾರ: ಜಿಲ್ಲೆಯ ಯಾವುದೇ ಸರಕಾರಿ ವೈದ್ಯಕೀಯ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ನೀಡುವ ಔಷಧಗಳ ವಿತರಣೆಯಲ್ಲಿ ಕೊರತೆಯಾಗದಂತೆ ಎಚ್ಚರ ವಹಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಮೀನಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಳಾ ಎಸ್.ವೈದ್ಯ ಸೂಚನೆ ನೀಡಿದರು.

ಅವರು ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮತನಾಡಿದರು.

ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಆಸ್ಪತ್ರೆಯ ಹೊರಗಿನಿಂದ ಔಷಧ ಪಡೆಯುವಂತೆ ಚೀಟಿಗಳನ್ನು ವಿತರಿಸಬಾರದು. ಆಸ್ಪತ್ರೆಯಲ್ಲಿ ಔಷಧಗಳ ಕೊರತೆಯಿದ್ದಲ್ಲಿ ಆರೋಗ್ಯ ರಕ್ಷಾ ಸಮಿತಿಯ ಮೂಲಕ ಅಗತ್ಯವಿರುವಷ್ಟು ಔಷಧಗಳನ್ನು ಖರೀದಿಸಿ, ಉಚಿತವಾಗಿ ವಿತರಣೆ ಮಾಡುವಂತೆ ಸೂಚಿಸಿದ ಅವರು, ಕಾರವಾರದ ಮಲ್ಪಿ ಸ್ಪೆಶಾಲಿಟಿ ಆಸ್ಪತ್ರೆಗೆ ತಜ್ಞ ವೈದ್ಯರನ್ನು ನೇಮಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಮಕ್ಕಳ ಕೊರತೆಯಿಂದ ಈಗಾಗಲೇ ಮುಚ್ಚಿರುವ ಸರಕಾರಿ ಶಾಲೆಗಳನ್ನು ಸರ್ವೇ ಮಾಡಿಸಿ, ಅವುಗಳನ್ನು ಸ್ಥಳೀಯ ಗ್ರಾಮ ಪಂಚಾಯತ್‌ಗಳಿಗೆ ಹಸ್ತಾಂತರಿಸಬೇಕು. ಮುಚ್ಚಿದ ಶಾಲೆಗಳ ಜಾಗ ಅತಿಕ್ರಮಣವಾದಲ್ಲಿ ಸಂಬಂಧಪಟ್ಟ ಪಂಚಾಯತ್‌ನ ಪಿಡಿಓ ಮತ್ತು ತಾ.ಪಂ ಕಾರ್ಯನಿರ್ವಹಣಾಧಿಕಾರಿಗಳನ್ನು ಜವಾಬ್ದಾರನ್ನಾಗಿ ಮಾಡಲಾಗುವುದು. ಈ ಬಾರಿಯ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಜಿಲ್ಲೆಗೆ ಶೇ.100ರಷ್ಟು ಫಲಿತಾಂಶ ಬರುವ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಶಿಕ್ಷಕರು ಕಾರ್ಯನಿರ್ವಹಿಸಬೇಕು ಎಂದರು.

ಜಿಲ್ಲೆಯಲ್ಲಿ ಸಾರಿಗೆ ಬಸ್‌ಗಳ ವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು, ಜಿಲ್ಲೆಗೆ ಇದುವರೆಗೆ 104 ಹೊಸ ಬಸ್ ಕೊಟ್ಟಿದ್ದೇವೆ. ಪ್ರಸ್ತುತ ಇನ್ನೂ 20 ಹೊಸ ಬಸ್‌ಗಳು ಬರುತ್ತವೆ. ಸಮಸ್ಯೆಯನ್ನು ಸರಿಯಾಗಿ ನಿರ್ವಹಿಸಿ ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯ ಎಲ್ಲ ಕಡೆ ಗುಜರಿ ಬಸ್‌ಗಳು ಓಡಾಡುತ್ತಿವೆ. ಬಸ್‌ಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಕಾರವಾರ, ಅಂಕೋಲಾ ಬಸ್ ಘಟಕಗಳು ದುರ್ಬಲವಾಗಿವೆ ಎಂದು ಎಂಸಿಎ ಅಧ್ಯಕ್ಷ ಹಾಗೂ ಶಾಸಕ ಸತೀಶ ಸೈಲ್ ಆರೋಪಿಸಿದರು.

ಜಿಲ್ಲೆಯಲ್ಲಿ ವ್ಯಾಪಕವಾಗಿ ವಿರೋಧ ವ್ಯಕ್ತವಾಗುತ್ತಿರುವ ಬೇಡ್ತಿ- ವರದಾ, ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆಯನ್ನು ವಿರೋಧಿಸಿ ಸಭೆಯಲ್ಲಿ ನಿರ್ಣಯ ಕೈಗೊಳ್ಳುವಂತೆ ಪ್ರಸ್ತಾಪಿಸಿ ಶಿರಸಿ ಶಾಸಕ ಭೀಮಣ್ಣ ನಾಯ್ಕ್ ಒತ್ತಾಯಿಸಿದರು. ಉಸ್ತುವಾರಿ ಸಚಿವರೂ ಕೂಡಾ ಈ ಪ್ರಸ್ತಾವನೆಗೆ ತಮ್ಮ ಒಪ್ಪಿಗೆ ಸೂಚಿಸಿ ಅನುಮೋದನೆ ನೀಡಿದರು.

ಸಭೆಯಲ್ಲಿ ಮಳೆ ಮಾಪನ ಯಂತ್ರಗಳ ದುರಸ್ತಿ ಮತ್ತು ಕಾರ್ಯನಿರ್ವಹಣೆ, ಆಟೋಗಳಿಗೆ ಪರ್ಮಿಟ್ ನೀಡುವ ಬಗ್ಗೆ, ಬೆಳೆ ವಿಮೆ ಪಾವತಿ ಬಗ್ಗೆ, ಪ್ರಾಕೃತಿಕ ವಿಕೋಪ ತಡೆ ಕಾಮಗಾರಿಗಳನ್ನು ನಿಗಧಿತ ಅವಧಿಯಲ್ಲಿ ಮುಕ್ತಾಯಗೊಳಿಸುವ ಬಗ್ಗೆ, ಅತಿಕ್ರಮಣ ಜಮೀನುಗಳ ಜಿ.ಪಿ.ಎಸ್ ಸರ್ವೇ ಕಾರ್ಯದ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.

 ಸಭೆಯಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಲ್ಲಾ ಪಂಚಾಯಿತಿ ಸಿಇಒ ಡಾ. ದಿಲೀಷ್ ಶಶಿ, ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ್ ಹಾಗೂ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share