Friday, March 13, 2026
HomeNationalಹಳದಿಪುರದ ನರ್ಸ್‌ ಅರುಣಾ ಶಾನಭಾಗ್‌ರ ಕರುಣಾಜನಕ ಕಥೆ

ಹಳದಿಪುರದ ನರ್ಸ್‌ ಅರುಣಾ ಶಾನಭಾಗ್‌ರ ಕರುಣಾಜನಕ ಕಥೆ

ವೈದ್ಯಕೀಯ ನೀತಿ, ಕಾನೂನಿನ ಕುರಿತ ಚರ್ಚೆಗೆ ಕಾರಣವಾದ ಘಟನೆ

ಭಾರತದಲ್ಲಿ ದಯಾಮರಣ ಕುರಿತ ಚರ್ಚೆಯನ್ನು ರಾಷ್ಟ್ರಮಟ್ಟಕ್ಕೆ ತಂದ ಅತ್ಯಂತ ಪ್ರಸಿದ್ಧ ಪ್ರಕರಣವೆಂದರೆ ಅರುಣಾ ಶಾನಭಾಗ್‌ ಪ್ರಕರಣ. ಇದು ಕೇವಲ ಒಬ್ಬ ಮಹಿಳೆಯ ನೋವಿನ ಬದುಕಿನ ಕಥೆಯಷ್ಟೇ ಅಲ್ಲ, ವೈದ್ಯಕೀಯ ನೀತಿ, ಕಾನೂನು ಮತ್ತು ಮಾನವೀಯತೆ ಕುರಿತ ದೊಡ್ಡ ಚರ್ಚೆಗೆ ಕಾರಣವಾದ ಘಟನೆ.

ಅರುಣಾ ಶಾನಭಾಗ್‌ ಮೂಲತಃ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹಳದಿಪುರದವರು. 1973ರ ನವೆಂಬರ್‌ 27ರಂದು, ಮುಂಬೈನ ಕಿಂಗ್‌ ಎಡ್ವರ್ಡ್‌ ಮೆಡಿಕಲ್‌ ಆಸ್ಪತ್ರೆಯಲ್ಲಿ (KEM ಆಸ್ಪತ್ರೆ) ನರ್ಸ್ ಆಗಿ ಕೆಲಸ ಮಾಡುತ್ತಿದ್ದ 25 ವರ್ಷದ ಅರುಣಾ ಶಾನಭಾಗ್ ಮೇಲೆ ಆಸ್ಪತ್ರೆಯಲ್ಲೇ ಕೆಲಸ ಮಾಡುತ್ತಿದ್ದ ಸ್ವೀಪರ್ ಸೋಹನ್‌ಲಾಲ್ ವಾಲ್ಮಿಕಿ ದಾಳಿ ನಡೆಸಿದ್ದ. ಕೆಲಸ ಮುಗಿಸಿ ಬಟ್ಟೆ ಬದಲಾಯಿಸುತ್ತಿದ್ದ ವೇಳೆ ಸೋಹನ್‌ಲಾಲ್ ಅರುಣಾಳನ್ನು ನಾಯಿ ಸರಪಳಿಯಿಂದ ಕತ್ತು ಬಿಗಿದು ಹಲ್ಲೆ ಮಾಡಿದ್ದ.

ಆ ಸಮಯದಲ್ಲಿ ಮೆದುಳಿಗೆ ಆಮ್ಲಜನಕ ಸರಬರಾಜು ದೀರ್ಘ ಸಮಯ ಕಡಿತಗೊಂಡ ಪರಿಣಾಮ ಮೆದುಳಿಗೆ ಗಂಭೀರ ಹಾನಿ ಉಂಟಾಯಿತು. ಈ ದಾಳಿಯ ನಂತರ ಅರುಣಾ ಶಾಶ್ವತ ಅಚೇತನ ಸ್ಥಿತಿಗೆ (persistent vegetative state) ತಲುಪಿದರು.

ಮುಂದಿನ ಹಲವು ದಶಕಗಳ ಕಾಲ ಅರುಣಾ ಮಾತನಾಡಲಿಲ್ಲ. ನಡೆಯಲೂ ಇಲ್ಲ. ಅವರ ಕಣ್ಣುಗಳು ತೆರೆದಿದ್ದರೂ, ಮೆದುಳು ಚಿತ್ರಗಳನ್ನು ಗುರುತಿಸುವ ಸಾಮರ್ಥ್ಯ ಕಳೆದುಕೊಂಡಿತ್ತು. ಅವರು ಸಾಮಾನ್ಯ ಜೀವನಕ್ಕೆ ಮರಳುವ ಯಾವುದೇ ಸಾಧ್ಯತೆ ಇಲ್ಲ ಎಂದು ವೈದ್ಯರು ಹೇಳಿಬಿಟ್ಟಿದ್ದರು. ಅವರು ದ್ರವ ಅಥವಾ ಮೃದುವಾದ ಆಹಾರವನ್ನು ಮಾತ್ರ ಸೇವಿಸಬಹುದಾಗಿದ್ದು, ಸಂಪೂರ್ಣವಾಗಿ ಇತರರ ಆರೈಕೆಯಿಂದಲೇ ಜೀವನ ಕಳೆಯಬೇಕಾಗಿತ್ತು.

ಈ ಘಟನೆ ನಂತರ ಕುಟುಂಬದವರು ಕೆಲವು ವರ್ಷಗಳವರೆಗೆ ಸಂಪರ್ಕದಲ್ಲಿದ್ದರೂ, ನಂತರ ಹೆಚ್ಚು ನೋಡಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ KEM ಆಸ್ಪತ್ರೆಯ ನರ್ಸ್‌ಗಳು ಮತ್ತು ಸಿಬ್ಬಂದಿಯೇ 4 ದಶಕಕ್ಕೂ ಹೆಚ್ಚು ಕಾಲ ಅವರನ್ನು ತಮ್ಮದೇ ಸಹೋದ್ಯೋಗಿಯಂತೆ ನೋಡಿಕೊಂಡರು. ಆಶ್ಚರ್ಯಕರವಾಗಿ, ಇಷ್ಟು ವರ್ಷ ಹಾಸಿಗೆಯಲ್ಲೇ ಇದ್ದರೂ ಅವರಿಗೆ ದೊಡ್ಡ ಮಟ್ಟದ ಗಾಯಗಳು ಅಥವಾ ಹಾಸಿಗೆ ಗಾಯಗಳು (bed sores) ಉಂಟಾಗದಂತೆ ನರ್ಸ್‌ಗಳು ಅಪಾರ ಕಾಳಜಿ ವಹಿಸಿದ್ದರು.

2009ರಲ್ಲಿ ಪತ್ರಕರ್ತೆ ಮತ್ತು ಸಾಮಾಜಿಕ ಕಾರ್ಯಕರ್ತೆ ಪಿಂಕಿ ವಿರಾಣಿ ಅರುಣಾ ಶಾನಭಾಗ್ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು. ಅರುಣಾ 35ಕ್ಕೂ ಹೆಚ್ಚು ವರ್ಷಗಳಿಂದ ಅಚೇತನ ಸ್ಥಿತಿಯಲ್ಲಿ ಇದ್ದು ಯಾವುದೇ ಚೇತರಿಕೆ ಸಾಧ್ಯವಿಲ್ಲದ ಕಾರಣ, ಅವರಿಗೆ ದಯಾಮರಣ (Passive euthanasia) ನೀಡಬೇಕು ಎಂದು ಅವರು ಮನವಿ ಮಾಡಿದರು. ಆದರೆ KEM ಆಸ್ಪತ್ರೆಯ ನರ್ಸ್‌ಗಳು ಮತ್ತು ಸಿಬ್ಬಂದಿ ಈ ಮನವಿಗೆ ವಿರೋಧ ವ್ಯಕ್ತಪಡಿಸಿದರು.

2011ರಲ್ಲಿ ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿತು. ಅಂದರೆ ಅರುಣಾಗೆ ದಯಾಮರಣ ನೀಡಲು ನ್ಯಾಯಾಲಯ ಅನುಮತಿ ನೀಡಲಿಲ್ಲ. ಆದರೆ ಈ ತೀರ್ಪು ಭಾರತದಲ್ಲಿ ಮಹತ್ವದ ಕಾನೂನು ಮಾರ್ಗಸೂಚಿಯನ್ನು ನೀಡಿತು. ಮೊದಲ ಬಾರಿಗೆ ನ್ಯಾಯಾಲಯವು ನಿರ್ದಿಷ್ಟ ಪರಿಸ್ಥಿತಿಗಳಲ್ಲಿ Passive euthanasia ಅನ್ನು ಅನುಮತಿಸಬಹುದು ಎಂದು ಘೋಷಿಸಿತು.

ಅರುಣಾ ಕೊನೆಗೂ 2015ರ ಮೇ 18ರಂದು ನ್ಯೂಮೋನಿಯಾ ಕಾಯಿಲೆಯಿಂದ ಮೃತಪಟ್ಟರು. ಸುಮಾರು 42 ವರ್ಷಗಳ ಕಾಲ ಅಚೇತನ ಸ್ಥಿತಿಯಲ್ಲಿ ಬದುಕಿದ್ದ ಅವರು ವಿಶ್ವದ ಅತಿ ದೀರ್ಘ vegetative state ಪ್ರಕರಣಗಳಲ್ಲಿ ಒಂದಾಗಿ ದಾಖಲೆಯಾದರು.

ಈ ಪ್ರಕರಣ ಭಾರತದಲ್ಲಿ ದಯಾಮರಣದ ಕುರಿತು ದೊಡ್ಡ ಚರ್ಚೆಯನ್ನು ಹುಟ್ಟುಹಾಕಿತು. ನಂತರದ ವರ್ಷಗಳಲ್ಲಿ ದಯಾಮರಣ ಕುರಿತ ಕಾನೂನು ಚರ್ಚೆಗಳು ಮತ್ತು ನ್ಯಾಯಾಲಯದ ತೀರ್ಪುಗಳಿಗೆ ಇದು ಮೂಲ ಕಾರಣವಾಗಿ ಪರಿಣಮಿಸಿತು.

ಒಟ್ಟಿನಲ್ಲಿ, ಅರುಣಾ ಶಾನಭಾಗ್ ಪ್ರಕರಣವು ಕೇವಲ ಒಂದು ದುರಂತದ ಕಥೆಯಲ್ಲ. ಅದು ಭಾರತದ ವೈದ್ಯಕೀಯ ಮತ್ತು ಕಾನೂನು ಇತಿಹಾಸದಲ್ಲಿ ದಯಾಮರಣ ಕುರಿತ ಪ್ರಮುಖ ಮೈಲಿಗಲ್ಲಾಗಿ ಉಳಿದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share