Friday, July 24, 2026
Join WhatsApp Group
HomeLocal Newsಆಡಳಿತಾಧಿಕಾರಿ ವಿರುದ್ಧದ ಹೋರಾಟ ರಾಜಕೀಯ ಪ್ರಹಸನದಂತೆ!

ಆಡಳಿತಾಧಿಕಾರಿ ವಿರುದ್ಧದ ಹೋರಾಟ ರಾಜಕೀಯ ಪ್ರಹಸನದಂತೆ!

ಯಲ್ಲಾಪುರ: ಕಳೆದ ಎರಡು ದಿನಗಳಿಂದ ಟಿಎಂಎಸ್‌ ಯಲ್ಲಾಪುರದ ಹಳೆಯ ಆಡಳಿತ ಮಂಡಳಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಒಂದು ರಾಜಕೀಯ ಪಕ್ಷದ ಮುಖಂಡರು ಸೇರಿ ಆಡಳಿತಾಧಿಕಾರಿಯ ರಾಜೀನಾಮೆ ಹಾಗೂ ಉಚ್ಛಾಟನೆಗೆ ಆಗ್ರಹಿಸಿ ಧರಣಿ ಹಾಗೂ ರಸ್ತೆ ರೋಖೋ ನಡೆಸುತ್ತಿರುವುದು ರಾಜಕೀಯ ಪ್ರಹಸನದಂತಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಸಹಕಾರ ಇಲಾಖೆಯ ಅಧೀನದಲ್ಲಿ ಸಹಕಾರ ಕಾನೂನು ಮತ್ತು ನಿಯಮಾವಳಿಗಳಂತೆ ಆಡಳಿತ ನಡೆಸುವ ಹೊಣೆಗಾರಿಕೆ ಸಹಕಾರ ಇಲಾಖೆಯದ್ದಾಗಿದ್ದು, ಈ ಪ್ರಕ್ರಿಯೆಯಲ್ಲಿ ಸದಸ್ಯರಿಗೆ ಯಾವುದೇ ತೊಂದರೆ ಆಗುವ ಪ್ರಶ್ನೆಯಿಲ್ಲ. ನೇಮಕಗೊಂಡಿರುವ ಆಡಳಿತಾಧಿಕಾರಿ ಭಾಸ್ಕರ ನಾಯ್ಕ ಅವರು ಅಧಿಕಾರ ವಹಿಸಿಕೊಂಡ ನಂತರ ಸಂಘದ ಆಡಳಿತವನ್ನು ನಿಯಮಾನುಸಾರ ನಡೆಸುತ್ತಿದ್ದಾರೆ.

ಹಿಂದಿನ ಅವಧಿಯಲ್ಲಿ ಸುಮಾರು 13.50 ಲಕ್ಷ ರೂ. ಹಣವನ್ನು ವಕಾಲತು ಶುಲ್ಕವಾಗಿ ಖರ್ಚು ಮಾಡಲಾಗಿದೆ ಎಂದು ತೋರಿಸಲಾಗಿದೆ. ಸದಸ್ಯರ ಹಣ ಈ ರೀತಿಯಾಗಿ ವ್ಯಯವಾಗುವುದನ್ನು ತಡೆಯಲು ಹಾಗೂ ಉಚ್ಚ ನ್ಯಾಯಾಲಯದಲ್ಲಿ ಇರುವ ಪ್ರಕರಣವನ್ನು ಹಿಂತೆಗೆದುಕೊಳ್ಳಲು ಆಡಳಿತಾಧಿಕಾರಿ ನಿರಾಕರಿಸಿರುವುದು ನ್ಯಾಯಸಮ್ಮತವಾಗಿದೆ. ವರ್ಷಾನುಗಟ್ಟಲೆ ನ್ಯಾಯಾಲಯದಲ್ಲಿ ಪ್ರಕರಣ ಮುಂದುವರಿದರೆ ಉಂಟಾಗುವ ಹಾನಿಗೆ ಯಾರು ಹೊಣೆ ಎಂಬ ಪ್ರಶ್ನೆಯೂ ಉದ್ಭವಿಸಿದೆ.

ತಾವು ಅಧಿಕಾರದಲ್ಲೇ ಇರಬೇಕು, ಸದಸ್ಯರು ತಮ್ಮ ತಾಳಕ್ಕೆ ಹೆಜ್ಜೆ ಹಾಕಬೇಕು ಎಂಬ ಮನೋಭಾವದಿಂದ ಕುರ್ಚಿಗೆ ಅಂಟಿಕೊಂಡು ಈ ರೀತಿಯ ಹೋರಾಟ ನಡೆಸುವುದು ಹಿರಿಯ ಸಹಕಾರಿಗಳಿಗೆ ಶೋಭೆ ತರುವಂತದ್ದಲ್ಲ. ಶಾಸಕರನ್ನು ಹಾಗೂ ನಿವೃತ್ತ ಕಾರ್ಯನಿರ್ವಾಹಕರನ್ನು ದೂಷಿಸಿ ಹೆಸರು ಗಳಿಸುವ ಪ್ರಯತ್ನ ಮಾಡುವುದು ಸರಿಯಲ್ಲ.

ತಾಲೂಕಾ ಮಾರಾಟ ಸಹಕಾರಿ ಸಂಘ, ಯಲ್ಲಾಪುರವು ಹಿಂದಿನಿಂದಲೂ ತಾಲೂಕಿನ ಅನೇಕ ಹಿರಿಯ ಸಹಕಾರಿಗಳ ಮಾರ್ಗದರ್ಶನದಲ್ಲಿ ಬೆಳೆಯುತ್ತ ಬಂದಿದ್ದು, ಕಳೆದ ಹತ್ತು ವರ್ಷಗಳಲ್ಲಿ ನಡೆದ ಅಭಿವೃದ್ಧಿಗೆ ಅಡಿಪಾಯ ಹಾಕಿದ ಹಿರಿಯ ಸಹಕಾರಿಗಳು ಹಾಗೂ ನೌಕರರ ಕೊಡುಗೆಯನ್ನು ಮರೆತರೆ ಸರಿಯಲ್ಲ. ತಾನೇ ಸರ್ವಾಧಿಕಾರಿ ಎಂಬಂತೆ ಬಿಂಬಿಸಿಕೊಳ್ಳುವ ಧೋರಣೆ ಸಹಕಾರಿ ಚಳವಳಿಗೆ ಹೊಂದುವುದಿಲ್ಲ.

ಈ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿಗಳು ತಮ್ಮ ವಿವೇಚನೆಯಂತೆ ತೆಗೆದುಕೊಂಡಿರುವ ನಿರ್ಧಾರಗಳು ಸಹಕಾರಿ ಸಂಘದ ಉಳಿವು ಮತ್ತು ಶಿಸ್ತಿನ ಆಡಳಿತಕ್ಕೆ ಮಹತ್ವದ್ದಾಗಿವೆ ಎಂದು ಆರ್‌.ಎಸ್‌. ದೇಸಾಯಿಮನೆ, ಎಸ್‌.ಕೆ. ಭಾಗ್ವತ ಗಾಣಗದ್ದೆ, ರವಿ ಭಟ್ಟ ಬರಗದ್ದೆ, ವಿ.ಎಸ್.‌ ಭಟ್ಟ ಉಪಳೇಶ್ವರ, ನವೀನ ಹೆಗಡೆ ಬೆದೆಹಕ್ಲ, ಮುರಳಿ ಹೆಗಡೆ ಇಡಗುಂದಿ, ಗಣೇಶ ಹೆಗಡೆ ಸವಣಗೇರಿ, ನಾರಾಯಣ ಭಟ್ಟ ಬಟ್ಲಗುಂಡಿ, ಟಿ.ವಿ.ಭಾಗ್ವತ ನಂದೊಳ್ಳಿ, ಲಾರೆನ್ಸ್‌ ಸಿದ್ದಿ, ಕೃಷ್ಣ ಶೆಟ್ಟಿ ಕಣ್ಣಿಗೇರಿ, ಸುಬ್ಬಣ್ಣ ಕುಂಟೆಗಾಳಿ ಮುಂತಾದವರು ನೀಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share