Friday, July 24, 2026
Join WhatsApp Group
HomeLocal Newsಗೋಣಿ ಚೀಲ ನುಂಗುವ ಹೆಗ್ಗಣ ಯಾವುದು?!

ಗೋಣಿ ಚೀಲ ನುಂಗುವ ಹೆಗ್ಗಣ ಯಾವುದು?!

ʻಎಲ್ಲವೂ ಇಲ್ಲʼಎನ್ನುವಲ್ಲಿ ಅಡಕೆ ತಂದ ಗೋಣಿಚೀಲವೂ ನಾಪತ್ತೆ!

ಯಲ್ಲಾಪುರ: ಉತ್ತರಕನ್ನಡ ಜಿಲ್ಲೆಯಲ್ಲಿ ಎಲ್ಲವೂ ಇಲ್ಲ ಎನ್ನುತ್ತ ರೈತರ ಹೆಸರಿನಲ್ಲಿಯೇ ಕಾರ್ಪೊರೇಟ್‌ ಕಂಪನಿಗಳಿಗೂ ಕಡಿಮೆಯಿಲ್ಲದಂತೆ ನಡೆಯುತ್ತಿರುವ ಸಂಸ್ಥೆಯೊಂದು ಆಗಾಗ ಸುದ್ದಿಯಾಗುತ್ತದೆ. ಈ ಸಂಸ್ಥೆಯ ಸುಪರ್‌ ಮಾರ್ಕೆಟ್‌ನಲ್ಲಿ ಒಮ್ಮೆ ಕ್ರಿಮಿಗಳು ತುಂಬಿರುವ ಅಪ್ಪೆಮಿಡಿ ಉಪ್ಪಿನಕಾಯಿ ಸಿಕ್ಕರೆ, ಮತ್ತೊಮ್ಮೆ ಅಡಕೆ ಟೆಂಡರ್‌ ವಿಷಯವಾಗಿ ವಿವಾದವೇಳುತ್ತದೆ. ಇವೆಲ್ಲಕ್ಕಿಂತ ಹಿಂದೆ ನಡೆದ, ನಡೆಯುತ್ತಿರುವ ದಗಲಬಾಜಿ ದಂಧೆಗಳನ್ನೇನೂ ರೈತರು ಮರೆತಿಲ್ಲ.

ಇದೀಗ, ರೈತರು ವಿಕ್ರಿಗೆಂದು ತಂದ ಅಡಕೆಯ ಖಾಲಿ ಗೋಣಿಚೀಲಗಳನ್ನೂ ಅಲ್ಲಿಯೇ ಇರುವ ಯಾವುದೋ ಹೆಗ್ಗಣಗಳು ನುಂಗುತ್ತಿವೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಹೇಳಿಕೊಳ್ಳಲು ರೈತರಿಂದಲೇ ಹುಟ್ಟಿದ, ರೈತರಿಗಾಗಿಯೇ ಇರುವ ಸಹಕಾರ ಸಂಸ್ಥೆ. ಆದರೆ, ರೈತನ ಬೆವರಿನ ಹನಿ ತಟ್ಟಿದ ಖಾಲಿ ಚೀಲವನ್ನೂ ‘ನುಂಗುವ’ ದುರವಸ್ಥೆ ಏಕೆ?

ಈ ಆರೋಪ ಕೇಳಬರಲು ಕಾರಣಗಳೂ ಇವೆ. ಈ ಸಂಸ್ಥೆಯ ಯಲ್ಲಾಪುರ ಶಾಖೆಯಲ್ಲಿ ರೈತರು ವಿಕ್ರಿಗೆಂದು ಅಡಕೆ ಒಯ್ದಾಗ ಚೀಲವೇನಾದರೂ ಸ್ವಲ್ಪ ಹಳೆಯದಾಗಿದ್ದರೆ ಅಲ್ಲಿಂದಲೇ ಹಮಾಲಿಗಳ ಬೈಗುಳ ಪ್ರಾರಂಭವಾಗುತ್ತದೆ. ʻಅಲ್ರೀ, 40-50 ಸಾವಿರ ರೂ. ಬೆಲೆಯ ಮಹಸೂಲನ್ನು ಒಂದು ಒಳ್ಳೆಯ ಚೀಲದಲ್ಲಿ ತರೋಕೆ ನಿಮಗೇನ್ರೀ…ʼ ಎಂಬರ್ಥದಲ್ಲಿ ಅವರ ಮಾತು ಶುರುವಾಗುತ್ತದೆ. ಸುತ್ತ ನಿಂತಿರುವ ಉಳಿದ ರೈತರೆದುರು ಇಂತಹ ಮಾತು ಹೇಳಿಸಿಕೊಳ್ಳಲು ರೈತನಿಗೆ ಅವಮಾನವಾಗದೇ?!

ಅಲ್ಲಿಂದ ಮುಂದೆ, ಅಡಕೆ ವಿಕ್ರಿಯಾದ ಮೇಲೆ ನಿಮ್ಮ ಖಾಲಿ ಗೋಣಿ ಚೀಲ ನಿಮಗೇ ಸಿಗಬೇಕೆಂದರೆ ಸಾಕಷ್ಟು ಸಮಯವನ್ನೂ, ಚಪ್ಪಲಿಯನ್ನೂ ಸವೆಸಬೇಕು! ಅಡಕೆ ವಿಕ್ರಿಯಾದ 2 ತಿಂಗಳೊಳಗಾಗಿ ಖಾಲಿ ಚೀಲವನ್ನು ವಾಪಸ್‌ ಪಡೆಯಬೇಕೆಂಬ ನಿಯಮವಿದೆ. ವಿಕ್ರಿಯಾದ ಮಾರನೇ ದಿನವೇ ಹೋದರೂ ನಿಮ್ಮ ಚೀಲ ಸಿಗದು. ಇಲ್ಲೆಲ್ಲಾ ಅಡಕೆ ಹರಡಿಕೊಂಡಿದೆ, ಈಗೆಲ್ಲಿ ಹುಡುಕೋಣ? ಎಲ್ಲಾ ಕೆಲಸದಲ್ಲಿದ್ದಾರೆ, ನಿಮ್ಮ ಚೀಲ ಹುಡುಕುತ್ತ ಕೂರೋಕಾಗಲ್ಲ ಎಂಬರ್ಥದ ಮಾತುಗಳು ಬರುತ್ತವೆ.

ನಾಲ್ಕು ದಿನ ಬಿಟ್ಟು ಹೋದರೆ ಇಲ್ಲೇ ಎಲ್ಲೋ ಇಟ್ಟಿದಾರೆ. ನೋಡೋಣ ಇರಿ. ನೀವು ಮಾರನೆಯ ದಿನವೇ ಬರಬೇಕ್ರೀ ಎಂಬ ಮಾತುಗಳು ಉದುರುತ್ತವೆ. ಕೊನೆಗೆ ಬೇಸತ್ತ ನೀವೇ ಇನ್ನೂ ಎಷ್ಟು ಸಲ ಬರೋದು. 10 ಚೀಲ ತಾನೇ, ಹೋದರೆ ಹೋಗ್ಲಿ ಬಿಡು ಎನ್ನುತ್ತ ನೀವೇ ಅದರ ಚಿಂತೆ ಬಿಡಬೇಕು! ಒಂದು ಗೋಣಿಚೀಲಕ್ಕೆ ಕನಿಷ್ಠ ನೂರು ರೂಪಾಯಿ ಮೌಲ್ಯವಿದ್ದರೂ, ಪ್ರತಿದಿನ ನೂರಾರು ಚೀಲಗಳು ಕಣ್ಮರೆಯಾದರೆ ಒಬ್ಬೊಬ್ಬ ರೈತನಿಗೆ ಆಗುವ ನಷ್ಟ ಎಷ್ಟಾಗಬಹುದು? ಈ ನುಂಗಣ್ಣಗಳು ಮಾಡಿಕೊಳ್ಳುತ್ತಿರುವ ಲಾಭ ಎಷ್ಟಾಗಬಹುದು? ಈ ನಷ್ಟ ಯಾವ ಲೆಕ್ಕಪತ್ರದಲ್ಲೂ, ಯಾವ ಆಡಿಟ್ ವರದಿಯಲ್ಲೂ ಕಾಣಿಸದು! ಇಲ್ಲಿ ಲೆಕ್ಕಾಚಾರ ಸಣ್ಣದೇ. ಆದರೆ ಅದರ ಹಣ ಮಾತ್ರ ಇನ್ನೆಲ್ಲೋ ಸೇರುತ್ತಿದೆ.

“ಖಾಲಿ ಗೋಣಿಚೀಲವನ್ನೇ ನುಂಗುವ ಪರಿಸ್ಥಿತಿ ಇದ್ದರೆ, ಇನ್ನೂ ಏನೇನು ನುಂಗಬಹುದು?” ಎಂಬ ರೈತರ ನೋವಿನ ಪ್ರಶ್ನೆಗೆ ಉತ್ತರ ಸುಲಭಕ್ಕೆ ಸಿಗುವುದಲ್ಲ. ಇಂತಹ ಸಂದರ್ಭದಲ್ಲಿ ಸುಮ್ಮನಾಗದೇ ಪ್ರಶ್ನಿಸುವ ನೈತಿಕತೆ ಎಲ್ಲ ರೈತರಿಗೂ ಇದ್ದೇ ಇದೆ. ಯಾಕೆಂದರೆ, ಇದು ನಮ್ಮದೇ ಸಂಸ್ಥೆ. ರೈತನ ಬೆವರಿನ ಬೆಲೆ ಕಾಪಾಡುವುದು ಕೇವಲ ಮಾತಲ್ಲ, ಅದು ವ್ಯವಸ್ಥೆಯ ಹೊಣೆಗಾರಿಕೆಯೂ ಆಗಿರಲಿ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share