ಸನಾತನ ಸಂಸ್ಕೃತಿಯ ಬಗ್ಗೆ ಪ್ರತಿಯೊಬ್ಬರೂ ಗೌರವಾದರದ ಭಾವನೆಯನ್ನು ಹೊಂದಿ ಭಾರತವೆಂದೂ ಸುಭಿಕ್ಷವಾಗಿ, ಶತ್ರು ದೇಶಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸುವ ಸಾಮರ್ಥ್ಯವುಳ್ಳ ದೇಶವಾಗಬೇಕು.
ಭಾರತ ವಿಶ್ವಗುರುವಾಗಬೇಕು. ದೇಶಾದ್ಯಂತ ನಡೆಯುತ್ತಿರುವ ಅನಾಚಾರ, ಸ್ವಾರ್ಥ ರಾಜಕಾರಣ, ಅಮಾಯಕರ ಶೋಷಣೆ, ರೈತರ ಬವಣೆಗಳು ಶಾಶ್ವತವಾಗಿ ದೂರವಾಗಬೇಕು.
ಇವೆಲ್ಲವೂ ಸಾಧ್ಯವಾಗುವಂತೆ ವಿಪ್ರರಾದ ಎಲ್ಲರೂ ಒಂದಾಗಿ ದೇವತಾಕಾರ್ಯವನ್ನು ಕೈಗೊಳ್ಳಬೇಕು ಮತ್ತು ದೇಶದ ಪ್ರತೀ ಭಾಗದಲ್ಲಿರುವ ವೈದಿಕ ವರ್ಗದವರೆಲ್ಲರೂ ಒಂದಾಗಿ ತಮ್ಮೂರಿನ ದೇವಾಲಯಗಳಲ್ಲಿ ಮತ್ತು ಪ್ರತೀ ಮನೆಯಲ್ಲಿಯೂ ಕೂಡ ನಿಯಮಿತವಾಗಿ ಲೋಕಹಿತವೇ ಮೂಲ ಉದ್ದೇಶವೆಂಬ ಪ್ರಧಾನ ಸಂಕಲ್ಪಕ್ಕೆ ಪುಷ್ಠಿ ನೀಡುವಂತಹ ಕಾರ್ಯಕ್ರಮಗಳನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕೈಗೊಳ್ಳುವಂತಾಗಬೇಕೆಂಬ ಸದುದ್ದೇಶದಿಂದ ಹುಟ್ಟಿಕೊಂಡಿದ್ದೇ ಆಯುಷ್ಮಾನ್ ಭವ ಮತ್ತು ವಿಜಯೀಭವ ಸಂಘಟನೆಗಳು.
ಉತ್ತರಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರವಷ್ಟೇ ಅಲ್ಲದೆ, ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ ಭಾಗದ ವಿಪ್ರರು ಮತ್ತು ತಮಿಳುನಾಡು, ಕೇರಳ, ಮೈಸೂರು ಮಹಾರಾಷ್ಟ್ರ ಭಾಗಗಳ ಕೆಲ ವೈದಿಕರು ಮತ್ತು ವೇದ ಪಾಠಶಾಲೆಯ ವಿದ್ಯಾರ್ಥಿಗಳೂ ಈ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ.
ಪ್ರತೀ ಕಾರ್ಯಕ್ರಮದಲ್ಲಿಯೂ ಆಯಾ ಊರಿನ ಹಿರಿಯ ದಂಪತಿಗಳು ಯಜಮಾನತ್ವ ವಹಿಸಿದರೆ, ಊರ ಹಿರಿಯ ವೈದಿಕರ ಮಾರ್ಗದರ್ಶನ ಮತ್ತು ಪಾಲ್ಗೊಳ್ಳುವಿಕೆಯಿಂದ ಯಶಸ್ವಿಯಾಗುತ್ತಿದೆ.
ಆಯುಷ್ಮಾನ್ ಭವ, ವಿಜಯೀಭವ ಬಳಗದ ಕೇಂದ್ರಸ್ಥಾನವಾಗಿ ಇದೀಗ ಯಲ್ಲಾಪುರ ತಾಲೂಕಿನ ನಂದೊಳ್ಳಿ ಗ್ರಾ.ಪಂ ವ್ಯಾಪ್ತಿಯ ಭಟ್ರಕೇರಿಯಲ್ಲಿ ಭಾರದ್ವಾಜಾಶ್ರಮ ಆರಂಭವಾಗಿ ಮುನ್ನಡೆಯುತ್ತಿದೆ. ಅಂದಾಜು 4 ಎಕರೆ ಕ್ಷೇತ್ರದಲ್ಲಿ ಭಾರದ್ವಾಜಾಶ್ರಮದ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಧನ್ವಂತರಿಯ ದೇವಾಲಯ, ಯಾಗಶಾಲೆ, ಗೋಶಾಲೆಗಳೊಂದಿಗೆ ಗುರುಕುಲವನ್ನೂ ಮುನ್ನಡೆಸುವ ಸಂಕಲ್ಪವನ್ನು ಹೊಂದಲಾಗಿದೆ ಎಂದು ಭಾರದ್ವಾಜಾಶ್ರಮದ ಸಂಸ್ಥಾಪಕರಾದ ಮಂಜುನಾಥ ಭಟ್ಟ ಭಟ್ರಕೇರಿ ಮಾಹಿತಿ ನೀಡುತ್ತಾರೆ.
ಇದರೊಂದಿಗೆ ದೇವ ಪುಷ್ಕರಣಿ (ಕಲ್ಯಾಣಿ) ನಿರ್ಮಾಣ, ನವಗ್ರಹ, ನಕ್ಷತ್ರವನ, ರಾಶಿವನಗಳ ನಿರ್ಮಾಣವೂ ಅಂತಿಮ ಹಂತದಲ್ಲಿದೆ. ಪ್ರತಿನಿತ್ಯ ರಾಷ್ಟ್ರಹಿತವನ್ನು ಸಂಕಲ್ಪಿಸಿ ಕಾರ್ಯಕ್ರಮಗಳನ್ನು ನಿರಂತರವಾಗಿ ಮುನ್ನಡೆಸುವ ಸಂಕಲ್ಪವನ್ನೂ ಸಂಘಟಕರು ಹೊಂದಿದ್ದಾರೆ.
ಸಂಘಟನೆಯ 360ನೇ ಕಾರ್ಯಕ್ರಮವಾಗಿ 13 ಕೋಟಿ ರಾಮತಾರಕ ಜಪಾನುಷ್ಠಾನ ಈಗಾಗಲೇ ಸಂಪನ್ನವಾಗಿದೆ. ಏಪ್ರಿಲ್ 25ರಿಂದ 27ರವರೆಗೆ ಅಕ್ಷರ ಕೋಟಿ ರಾಮತಾರಕ ಜಪಯಜ್ಞದ ಮಹಾಸಮರ್ಪಣೆ, ಒಂದು ಲಕ್ಷ ರಾಮತಾರಕ ಮಂತ್ರ ಹವನ, ವೇದ ಪಾರಾಯಣ, ಅಥರ್ವಶೀರ್ಷ ಹವನ, ಚಂಡೀ ಹವನ, ಧನ್ವಂತರಿ ಹವನ, ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ.
ಈ ಎಲ್ಲ ಕಾರ್ಯಕ್ರಮಗಳಲ್ಲಿ ಆಸ್ತಿಕರು, ರಾಷ್ಟ್ರಭಕ್ತರು, ಗ್ರಾಮಸ್ಥರೆಲ್ಲರೂ ಪಾಲ್ಗೊಳ್ಳುವಂತೆ ಸಂಘಟಕರಾದ ಮಂಜುನಾಥ ಭಟ್ಟ ಭಟ್ರಕೇರಿ ಮನವಿ ಮಾಡಿದ್ದಾರೆ.