ಪುರುಷರಿಗೂ ಫ್ರೀ ಬಸ್ ಪ್ರಯಾಣ, ಬಡವರಿಗೆ ಫ್ರೀ ಫ್ರಿಡ್ಜ್!
ಚೆನ್ನೈ: ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಮುಖ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ರಾಜಕೀಯ ಪೈಪೋಟಿ ದಿನೇದಿನೇ ತೀವ್ರಗೊಳ್ಳುತ್ತಿದೆ.
ಈ ಬಾರಿ ತಮಿಳು ನಟ ವಿಜಯ್ ಅವರ ಟಿವಿಕೆ ಪಕ್ಷವೂ ಕಣಕ್ಕಿಳಿದಿದ್ದು, ಚುನಾವಣಾ ರಣರಂಗ ಇನ್ನಷ್ಟು ಕುತೂಹಲಕರವಾಗಿದೆ.
ಇದರ ಮಧ್ಯೆ, ಬಿಜೆಪಿ ಮಿತ್ರಪಕ್ಷವಾದ ಎಐಎಡಿಎಂಕೆ ಮಂಗಳವಾರ 297 ಭರವಸೆಗಳನ್ನು ಒಳಗೊಂಡ ಮಹತ್ವಾಕಾಂಕ್ಷಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
ಜನಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡು ಹಲವು ಉಚಿತ ಯೋಜನೆಗಳು ಮತ್ತು ನೆರವು ಘೋಷಣೆಗಳನ್ನು ಪ್ರಕಟಿಸಲಾಗಿದೆ.
ಪ್ರಣಾಳಿಕೆಯಲ್ಲಿ ಪ್ರಮುಖವಾಗಿ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂ ಸಹಾಯಧನ ನೀಡುವುದಾಗಿ ಘೋಷಿಸಿದ್ದು, ಇದು ಕರ್ನಾಟಕದ ‘ಗೃಹಲಕ್ಷ್ಮಿ’ ಯೋಜನೆಯನ್ನು ಹೋಲುವಂತಿದೆ. ಅದೇ ರೀತಿಯಲ್ಲಿ ಪುರುಷರಿಗೂ ಉಚಿತ ಬಸ್ ಪ್ರಯಾಣ ಸೌಲಭ್ಯ ಘೋಷಿಸಲಾಗಿದೆ.
ಇದರ ಜೊತೆಗೆ, ಬಡವರ ಮನೆಗಳಿಗೆ ಉಚಿತ ಫ್ರಿಜ್ ನೀಡುವುದು, ಬೆಲೆ ಏರಿಕೆ ಮತ್ತು ತೆರಿಗೆ ಹೊರೆ ನಿವಾರಣೆಗೆ ಪ್ರತಿ ಕುಟುಂಬಕ್ಕೆ 10 ಸಾವಿರ ರೂ ವಿಶೇಷ ನೆರವು ನೀಡುವುದು ಸೇರಿದಂತೆ ಹಲವು ಆಕರ್ಷಕ ಭರವಸೆಗಳನ್ನು ನೀಡಲಾಗಿದೆ.
ಪ್ರತಿ ಮನೆಗೆ ವರ್ಷಕ್ಕೆ 3 ಉಚಿತ ಗ್ಯಾಸ್ ಸಿಲಿಂಡರ್ ನೀಡುವುದಾಗಿ ಕೂಡ ತಿಳಿಸಲಾಗಿದೆ. ಜಲ್ಲಿಕಟ್ಟು ಎಮ್ಮೆಗಳನ್ನು ಪಳಗಿಸುವ ವೇಳೆ ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ ರೂ ಪರಿಹಾರ, ವೃದ್ಧರ ಪಿಂಚಣಿ ಹೆಚ್ಚಳ ಹಾಗೂ ಸೇನೆಯಲ್ಲಿ ಹುತಾತ್ಮರಾದ ಅಥವಾ ಅಂಗವಿಕಲರಾದ ಸೈನಿಕರ ಕುಟುಂಬ ಸದಸ್ಯರಿಗೆ ಅನುಕಂಪದ ಉದ್ಯೋಗ ನೀಡುವ ಭರವಸೆಗಳನ್ನು ಸಹ ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ.
ಇದಲ್ಲದೆ, ‘ಅಮ್ಮ’ ಯೋಜನೆಯಡಿ ಉದ್ಯೋಗದಲ್ಲಿರುವ 5 ಲಕ್ಷ ಮಹಿಳೆಯರಿಗೆ 25 ಸಾವಿರ ರೂ ಸಬ್ಸಿಡಿ ಸಹಾಯದೊಂದಿಗೆ ದ್ವಿಚಕ್ರ ವಾಹನ ನೀಡುವ ಯೋಜನೆಯೂ ಗಮನ ಸೆಳೆಯುತ್ತಿದೆ.
ಒಟ್ಟು 297 ಭರವಸೆಗಳನ್ನು ಒಳಗೊಂಡ ಈ ಪ್ರಣಾಳಿಕೆ, ತಮಿಳುನಾಡು ಚುನಾವಣೆಯಲ್ಲಿ ಮತದಾರರ ಮನಸೆಳೆಯಲು ಎಐಎಡಿಎಂಕೆಯ ಮಹತ್ವದ ಹೆಜ್ಜೆಯಾಗಿದೆ.