ಕಾರವಾರ: ಉತ್ತರ ಕನ್ನಡ ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಕಾರವಾರದ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (KRIMS)ನಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ ಕಾರ್ಯಾಗಾರ ನಡೆಯಿತು.
ಉತ್ತರ ಕನ್ನಡ ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿಗಳಾದ ವಿ.ಎಂ. ಹೆಗಡೆ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿ, ಜಿಲ್ಲೆಯಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ಸಂಸ್ಥೆ ಕೈಗೊಂಡಿರುವ ವಿವಿಧ ಕಾರ್ಯಕ್ರಮಗಳ ಕುರಿತು ವಿವರಿಸಿದರು.
ಕಾರ್ಯಕ್ರಮವನ್ನು KRIMSನ ಡೀನ್ ಮತ್ತು ನಿರ್ದೇಶಕರಾದ ಡಾ. ಪೂರ್ಣಿಮಾ ಆರ್.ಟಿ ಉದ್ಘಾಟಿಸಿ ಮಾತನಾಡಿ, ಕ್ಯಾನ್ಸರ್ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಪಾತ್ರ ಮಹತ್ವದ್ದೆಂದು ಹೇಳಿದರು.
ಡಾ. ನಟರಾಜ (RCH) ಅವರು Cervical Cancer ಮುನ್ನೆಚ್ಚರಿಕೆ ಹಾಗೂ ಸಮಯಕ್ಕೆ ಸರಿಯಾದ ತಪಾಸಣೆಯ ಮಹತ್ವವನ್ನು ವಿವರಿಸಿದರು. ವೈದ್ಯಕೀಯ ಮಹಾವಿದ್ಯಾಲಯದ ಅಧೀಕ್ಷಕರಾದ ಡಾ. ನರೇಶ್ ಪಾವಸ್ಕರ್ ಉತ್ತರ ಕನ್ನಡ ಜಿಲ್ಲೆಯಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಮಾತನಾಡಿ ಜಾಗೃತಿ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಾಗಾರದಲ್ಲಿ KRIMS ವೈದ್ಯರಾದ ಡಾ. ಅಣ್ಣಪ್ಪ ಶೆಟ್ಟಿ, ಡಾ. ಅನುರಾಧಾ, ಡಾ. ವಿನಯ ಕುಮಾರ ರಾಜೇಂದ್ರ (Dr.K.S.Hegde Medical Charitable Hospital) ಅವರು ಪವರ್ ಪಾಯಿಂಟ್ ಪ್ರೆಸೆಂಟೇಶನ್ ಮೂಲಕ ಕ್ಯಾನ್ಸರ್ ಕುರಿತು ವೈಜ್ಞಾನಿಕ ಮಾಹಿತಿ, ಚಿಕಿತ್ಸೆ ಹಾಗೂ ತಡೆಗಟ್ಟುವ ಕ್ರಮಗಳನ್ನು ವಿವರಿಸಿದರು.
ಕಾರ್ಯಕ್ರಮವನ್ನು ಡಾ. ಹೇಮಗಿರಿ ಕೆ ನಿರ್ವಹಿಸಿದರು. ಕರ್ನಾಟಕ ರಾಜ್ಯ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಪ ಸಭಾಪತಿಗಳಾದ ನಜೀರ ಶೇಖ, ಸದಾನಂದ ನಾಯ್ಕ, ಯೂತ್ ರೆಡ್ ಕ್ರಾಸ್ ಮುಖ್ಯಸ್ಥ ಸಚಿನ್ ನಾಯ್ಕ ಕಾರ್ಯಕ್ರಮ ನಿರ್ವಹಣೆಗೆ ಸಹಕರಿಸಿದರು.
ಈ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರಾದ ಆರ್.ಎಸ್. ನಾಯಕ್, ಸಂದೀಪ್ ರೇವಣಕರ, ಅಜಯ್ ಸಾವಕಾರ, ಅಲ್ತಾಫ್ ಶೇಖ್, ಖೈರುನ್ನಿಸಾ ಶೇಖ್ ಮತ್ತು ನೆಹಾ ಬಿರ್ಕೋಡಿಕರ್ ಉಪಸ್ಥಿತರಿದ್ದರು. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು, ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಉತ್ತರ ಕನ್ನಡ ಜಿಲ್ಲಾ ಭಾರತೀಯ ರೆಡ್ ಕ್ರಸ್ ಸಂಸ್ಥೆಯ ಕಾರ್ಯದರ್ಶಿ ಜಗದೀಶ ಬಿರ್ಕೋಡಿಕರ ವಂದಿಸಿದರು.