Saturday, May 30, 2026
HomeLocal Newsಸ್ವಚ್ಛತಾ ಕಾರ್ಯಕ್ಕೆ ಆರ್.ವಿ. ದೇಶಪಾಂಡೆ ಚಾಲನೆ

ಸ್ವಚ್ಛತಾ ಕಾರ್ಯಕ್ಕೆ ಆರ್.ವಿ. ದೇಶಪಾಂಡೆ ಚಾಲನೆ

ಹಳಿಯಾಳ: ಹಳಿಯಾಳ ವಿಧಾನ ಸಭಾ ಕ್ಷೇತ್ರದಾದ್ಯಂತ ಮಾರ್ಚ್ 30ರಿಂದ ಏಪ್ರಿಲ್ 1ರವರೆಗೆ ನಿರಂತರವಾಗಿ 3 ದಿನಗಳ ಕಾಲ ಸಂಪೂರ್ಣ ಸ್ವಚ್ಛತಾ ಕಾರ್ಯ ಆಯೋಜಿಸುವ ಮೂಲಕ ದೇಶದಲ್ಲೇ ವಿನೂತನ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.

ಅವರು ಸೋಮವಾರ ಹಳಿಯಾಳದಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಹಾಕಿಕೊಟ್ಟ ಸ್ವಚ್ಛತೆಯ ಹಾದಿಯಲ್ಲಿ ನಾವು ಸಾಗಬೇಕು. ಸ್ವಚ್ಛತೆಯ ಕೆಲಸಕ್ಕೆ ಪೂರ್ಣವಿರಾಮ ಇರಬಾರದು. ಸಾರ್ವಜನಿಕರ ಸಹಕಾರದೊಂದಿಗೆ ಪ್ರತಿ ಹಳ್ಳಿ, ಪಟ್ಟಣ, ಶೌಚಾಲಯ ಹಾಗೂ ಉದ್ಯಾನವನಗಳು ಸ್ವಚ್ಛವಾಗಿರಬೇಕು ಎಂದರು.

ಹಳಿಯಾಳ ವಿಧಾನ ಸಭಾ ಕ್ಷೇತ್ರದ ಹಳಿಯಾಳ, ದಾಂಡೇಲಿ, ಜೋಯಿಡಾ ತಾಲೂಕುಗಳ ನಗರ, ಗ್ರಾಮ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸಂಪೂರ್ಣ ಸ್ವಚ್ಛತಾ ಕಾರ್ಯ ನಡೆಯಲಿದ್ದು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಹಕಾರದೊಂದಿಗೆ ಈ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ತಹಸೀಲ್ದಾರ್ ಫಿರೋಜ್ ಷಾ ಮಾತನಾಡಿ, ಗಾಂಧೀಜಿಯವರ ಸ್ವಚ್ಛತೆಯೇ ಸೇವೆ ಮತ್ತು ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಧ್ಯೇಯವಾಕ್ಯಗಳೊಂದಿಗೆ, ಶಾಸಕರ ಸೂಚನೆಯ ಮೇರೆಗೆ ಹಳಿಯಾಳ ತಾಲೂಕಿನ ಸಂಪೂರ್ಣ ಸ್ವಾಸ್ಥ್ಯಕ್ಕಾಗಿ ಈ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ.

ಇದು ಕೇವಲ ಒಂದು ದಿನದ ಕಾರ್ಯಕ್ರಮವಲ್ಲ, ನಿರಂತರವಾಗಿ ಸ್ವಚ್ಛತೆಯನ್ನು ಕಾಯ್ದುಕೊಳ್ಳುವ ಗುರಿಯನ್ನು ಹೊಂದಿದ್ದು, ಹಳಿಯಾಳ ತಾಲೂಕಿನ ಸಾರ್ವಜನಿಕರು ಈ ಅಭಿಯಾನಕ್ಕೆ ಸಂಪೂರ್ಣವಾಗಿ ಸಹಕರಿಸುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರು, ಸಾರ್ವಜನಿಕರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share