Friday, July 24, 2026
Join WhatsApp Group
HomeTechಜೀವನ ತೃಪ್ತಿ ಕಸಿಯುತ್ತಿದೆ ಸೋಷಿಯಲ್‌ ಮೀಡಿಯಾ!

ಜೀವನ ತೃಪ್ತಿ ಕಸಿಯುತ್ತಿದೆ ಸೋಷಿಯಲ್‌ ಮೀಡಿಯಾ!

ಹದಿಹರೆಯ ಯುವಜನತೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಂತೆ ಅವರ ಜೀವನ ತೃಪ್ತಿ ಕುಸಿಯುವ ಸಾಧ್ಯತೆ ಇದೆ ಎಂಬ ಜಾಗತಿಕ ಅಧ್ಯಯನದಿಂದ ಬಹಿರಂಗವಾಗಿದೆ.

World Happiness Report-2026ನಲ್ಲಿ ಪ್ರಕಟವಾದ ಈ ವಿಶ್ಲೇಷಣೆ, OECD ನಡೆಸಿದ 2022ರ PISA ಸಮೀಕ್ಷೆಯ ಡೇಟಾವನ್ನು ಆಧರಿಸಿದೆ.

47 ದೇಶಗಳ 15-16 ವರ್ಷದ ಸುಮಾರು 2.7 ಲಕ್ಷ ವಿದ್ಯಾರ್ಥಿಗಳ ಸ್ವಯಂ ಮೌಲ್ಯಮಾಪನದ ಆಧಾರದ ಮೇಲೆ ಅಧ್ಯಯನ ರೂಪುಗೊಂಡಿದ್ದು, ಸಾಮಾಜಿಕ ಜಾಲತಾಣ ಬಳಕೆ ಮತ್ತು ಜೀವನ ತೃಪ್ತಿಯ ನಡುವಿನ ನೇರ ಸಂಬಂಧವನ್ನು ಪರಿಶೀಲಿಸಿದೆ.

ಸಾಮಾನ್ಯವಾಗಿ ಇಂತಹ ಅಧ್ಯಯನಗಳು ಆತಂಕ, ಒತ್ತಡ, ಡಿಪ್ರೆಶನ್‌ಗಳಂತಹ ನಕಾರಾತ್ಮಕ ಅಂಶಗಳತ್ತ ಗಮನ ಹರಿಸುತ್ತವೆ. ಆದರೆ ಈ ವರದಿ ಜೀವನ ತೃಪ್ತಿ ಎಂಬ ಧನಾತ್ಮಕ ಅಂಶವನ್ನು ವಿಶ್ಲೇಷಿಸುವ ಮೂಲಕ ವಿಭಿನ್ನ ದೃಷ್ಟಿಕೋನ ನೀಡಿದೆ.

ಅಧ್ಯಯನದ ಪ್ರಕಾರ, ಹೆಣ್ಣುಮಕ್ಕಳಲ್ಲಿ ದಿನಕ್ಕೆ ಒಂದು ಗಂಟೆಗೂ ಕಡಿಮೆ ಸಾಮಾಜಿಕ ಜಾಲತಾಣ ಬಳಕೆ ಮಾಡುವವರು ಹೆಚ್ಚು ತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ.

ಬಳಕೆ ಸಮಯ ಹೆಚ್ಚಾದಂತೆ ತೃಪ್ತಿ ಮಟ್ಟ ಕ್ರಮೇಣ ಕುಸಿಯುತ್ತದೆ. ವಿಶೇಷವಾಗಿ ದಿನಕ್ಕೆ 5-7 ಗಂಟೆಗಳಿಗಿಂತ ಹೆಚ್ಚು ಬಳಸುವವರಲ್ಲಿ ತೃಪ್ತಿ ಕಡಿಮೆ ಇರುವ ಸಾಧ್ಯತೆ ಹೆಚ್ಚಾಗಿದೆ.

ಗಂಡುಮಕ್ಕಳಲ್ಲಿ ಫಲಿತಾಂಶಗಳು ಪ್ರದೇಶಾಧಾರಿತವಾಗಿವೆ. ಪಶ್ಚಿಮ ಯುರೋಪ್ ಹಾಗೂ ಇಂಗ್ಲಿಷ್ ಮಾತನಾಡುವ ದೇಶಗಳಲ್ಲಿ ಕಡಿಮೆ ಬಳಕೆದಾರರು ಹೆಚ್ಚು ತೃಪ್ತಿಯನ್ನು ವ್ಯಕ್ತಪಡಿಸಿದರೆ, ಇತರ ಪ್ರದೇಶಗಳಲ್ಲಿ ಸ್ಪಷ್ಟ ವ್ಯತ್ಯಾಸ ಕಾಣಿಸಲಿಲ್ಲ.

ಆದರೆ ಹೆಚ್ಚು ಬಳಸುವವರು ಮತ್ತು ಸಂಪೂರ್ಣವಾಗಿ ಬಳಸದೇ ಇರುವವರ ನಡುವೆ ತೃಪ್ತಿಯ ಅಂಕಗಳಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂದಿದೆ.

ಜಾಗತಿಕ ಮಟ್ಟದಲ್ಲಿ ಸುಮಾರು ಶೇ. 78 ಯುವಜನತೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಅಮೆರಿಕಾದಲ್ಲಿ ಯುವಕರು ಸರಾಸರಿ ದಿನಕ್ಕೆ 4.8 ಗಂಟೆಗಳ ಕಾಲ Instagram, TikTok ಮತ್ತು YouTube ಬಳಕೆ ಮಾಡುತ್ತಿರುವುದು ಡಿಜಿಟಲ್ ಬಳಕೆಯ ವ್ಯಾಪಕತೆಯನ್ನು ತೋರಿಸುತ್ತದೆ.

ಒಟ್ಟಿನಲ್ಲಿ, ಸಾಮಾಜಿಕ ಜಾಲತಾಣ ಬಳಕೆ ಮತ್ತು ಯುವಜನತೆಯ ಜೀವನ ತೃಪ್ತಿಯ ನಡುವೆ ಗಾಢ ಸಂಬಂಧವಿದೆ ಎಂದು ವರದಿ ಸೂಚಿಸಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share