ಆಸ್ತಿ ವಿಚಾರವಾಗಿ 2015ರಲ್ಲಿ ಶಿರಸಿಯಲ್ಲಿ ನಡೆದಿದ್ದ ಕೊಲೆ ಪ್ರಕರಣ
ಕಾರವಾರ: ಶಿರಸಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರದ್ಧಾನಂದ ಗಲ್ಲಿಯಲ್ಲಿ ನಡೆದ ರಂಗನಾಥ ಮಡಗಾಂವಕರ ಕೊ*ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ಪ್ರಕರಣದ ಮೊದಲ ಆರೋಪಿ ರಮೇಶ ಮಡಗಾಂವಕರಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ₹25,000 ದಂಡ ಹಾಗೂ ₹50,000 ಪರಿಹಾರ ಪಾವತಿಸಲು ಆದೇಶಿಸಲಾಗಿದೆ. ಎರಡನೇ ಆರೋಪಿ ಸಾವಿತ್ರಿ ಮಡಗಾಂವಕರಗೆ ₹2,000 ದಂಡ ವಿಧಿಸಲಾಗಿದೆ.
ಶಿರಸಿಯ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕಾರವಾರ ಪೀಠದ ನ್ಯಾಯಾಧೀಶ ಕಿರಣ ಕಿಣಿ ಅವರು ಈ ತೀರ್ಪು ಪ್ರಕಟಿಸಿದರು. ಜೊತೆಗೆ ದೂರುದಾರಳಾದ ಶಕೂ ಅವರಿಗೆ ₹2,000 ಪರಿಹಾರ ನೀಡುವಂತೆ ಹಾಗೂ ಹೆಚ್ಚಿನ ಪರಿಹಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಪಡೆಯಬಹುದೆಂದು ತಿಳಿಸಲಾಗಿದೆ.
ಪ್ರಕರಣದ ಹಿನ್ನೆಲೆ
ಶ್ರದ್ಧಾನಂದ ಗಲ್ಲಿಯಲ್ಲಿ ನೆರೆಹೊರೆಯವರಾಗಿದ್ದ ಆರೋಪಿಗಳು ಮತ್ತು ಮೃತರ ಕುಟುಂಬದ ನಡುವೆ ಆಸ್ತಿ ವಿಚಾರವಾಗಿ ಹಿಂದಿನಿಂದಲೂ ಗಲಾಟೆ ನಡೆಯುತ್ತಿತ್ತು. 2015ರ ಡಿಸೆಂಬರ್ 7ರಂದು ಮನೆಯ ಹಿಂಭಾಗದಲ್ಲಿ ಕಸ ಹಾಕಿರುವ ವಿಷಯವಾಗಿ ಜಗಳ ಉಂಟಾಗಿತ್ತು.
ಈ ವೇಳೆ ಶಕೂ ಅವರಿಗೆ ಬೈಯಲಾಗುತ್ತಿದ್ದುದನ್ನು ಕಂಡ ಮೃತ ರಂಗನಾಥ ಮಡಗಾಂವಕರ ಪ್ರಶ್ನಿಸಿದ್ದರು. ಅದರಿಂದ ಆಕ್ರೋಶಗೊಂಡ ರಮೇಶ್, ರಂಗನಾಥ ಅವರನ್ನು ರಸ್ತೆಗೆ ಎಳೆದುಕೊಂಡು ಹೋಗಿ ಕೆಡವಿ, ಎದೆ ಮತ್ತು ಹೊಟ್ಟೆ ಭಾಗಕ್ಕೆ ತುಳಿದು ಹಲ್ಲೆ ನಡೆಸಿದ್ದ.
ಗಂಭೀರವಾಗಿ ಗಾಯಗೊಂಡ ರಂಗನಾಥ ಪ್ರಜ್ಞಾಹೀನರಾಗಿದ್ದು, ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಬಳಿಕ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅವರು ಮೃತಪಟ್ಟಿದ್ದರು.
ತನಿಖೆ ಮತ್ತು ವಿಚಾರಣೆ
ಅಂದಿನ ಶಿರಸಿ ನಗರ ಠಾಣೆಯ ತನಿಖಾಧಿಕಾರಿ ಆರ್.ಎಲ್. ಗಣಪತಿ ಪ್ರಕರಣದ ತನಿಖೆ ನಡೆಸಿ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣಾ ಅವಧಿಯಲ್ಲಿ ಸಾಕ್ಷಿದಾರರನ್ನು ಹಾಜರುಪಡಿಸಿ ಪೊಲೀಸ್ ಸಿಬ್ಬಂದಿ ಸಹಕರಿಸಿದ್ದರು.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ರಾಜೇಶ್ ಎಂ. ಮಳಗಿಕರ್ ವಾದ ಮಂಡಿಸಿ, ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಮನವಿ ಮಾಡಿದ್ದರು.
ನ್ಯಾಯಾಲಯವು ಎಲ್ಲಾ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಮೊದಲ ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.