ಶಿರಸಿ:ಉತ್ತರ ಕನ್ನಡ ಜಿಲ್ಲೆಯ ಪ್ರಯಾಣಿಕರಿಗೆ ಮಹತ್ವದ ಸಿಹಿಸುದ್ದಿ ದೊರೆತಿದ್ದು, ಕಾಚೆಗುಡ–ಮುರುಡೇಶ್ವರ ಎಕ್ಸ್‌ಪ್ರೆಸ್ ರೈಲನ್ನು ಇದೀಗ ಕುಮಟಾ ನಿಲ್ದಾಣದವರೆಗೆ ವಿಸ್ತರಿಸಲು ಕೇಂದ್ರ ರೈಲ್ವೆ ಮಂಡಳಿ ಅಧಿಕೃತ ಆದೇಶ ಹೊರಡಿಸಿದೆ.
ಈ ಸಾಧನೆಗೆ ಸಂಸದ Vishweshwar Hegde Kageri ಅವರ ವಿಶೇಷ ಪ್ರಯತ್ನ ಕಾರಣವಾಗಿದೆ ಎಂದು ತಿಳಿದುಬಂದಿದೆ. ಸಾರ್ವಜನಿಕರ ಬಹುಕಾಲದ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಸಂಸದರು ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ Ashwini Vaishnaw ಹಾಗೂ ರೈಲ್ವೆ ರಾಜ್ಯ ಸಚಿವ V. Somanna ಅವರನ್ನು ಭೇಟಿ ಮಾಡಿ ಈ ಭಾಗದ ಸಾರಿಗೆ ಅಗತ್ಯಗಳ ಕುರಿತು ಚರ್ಚೆ ನಡೆಸಿದ್ದರು.
ಹೈದರಾಬಾದ್ ಭಾಗದೊಂದಿಗೆ ನೇರ ಸಂಪರ್ಕದ ಅಗತ್ಯತೆಯನ್ನು ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ.ಈ ಹಿನ್ನೆಲೆಯಲ್ಲಿ ರೈಲು ಸಂಖ್ಯೆ 12789/12790 ಕಾಚೆಗುಡ–ಮುರುಡೇಶ್ವರ ಎಕ್ಸ್‌ಪ್ರೆಸ್ ಸೇವೆಯನ್ನು ಈಗ ಕುಮಟಾ ತನಕ ವಿಸ್ತರಿಸಲಾಗಿದ್ದು, ಇದರಿಂದ ಉತ್ತರ ಕನ್ನಡ ಜಿಲ್ಲೆಯ ಜನತೆಗೆ ದೊಡ್ಡ ಅನುಕೂಲವಾಗಲಿದೆ.
ರೈಲು ವೇಳಾಪಟ್ಟಿ:
12789 (ಕಾಚೆಗುಡ → ಕುಮಟಾ): ಬೆಳಿಗ್ಗೆ 06:05 ಕ್ಕೆ ಕಾಚೆಗುಡದಿಂದ ಹೊರಟು, ಮಧ್ಯಾಹ್ನ 13:48 ಕ್ಕೆ ಮುರುಡೇಶ್ವರ ತಲುಪಿ, 14:30ಕ್ಕೆ ಕುಮಟಾ ಆಗಮಿಸುತ್ತದೆ.
12790 (ಕುಮಟಾ → ಕಾಚೆಗುಡ): ಮಧ್ಯಾಹ್ನ 15:10ಕ್ಕೆ ಕುಮಟಾದಿಂದ ಹೊರಟು, 15:50ಕ್ಕೆ ಮುರುಡೇಶ್ವರ ತಲುಪಿ, ಮರುದಿನ ರಾತ್ರಿ 23:40ಕ್ಕೆ ಕಾಚೆಗುಡ ತಲುಪುತ್ತದೆ.
ಈ ರೈಲು ಸೇವೆಯ ವಿಸ್ತರಣೆಯಿಂದ ಕುಮಟಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಹೈದರಾಬಾದ್ (ಕಾಚೆಗುಡ) ಭಾಗದೊಂದಿಗೆ ನೇರ ಸಂಪರ್ಕ ಸಿಗಲಿದ್ದು, ಪ್ರಯಾಣಿಕರು, ವ್ಯಾಪಾರಸ್ಥರು ಹಾಗೂ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಜೊತೆಗೆ, ಜಿಲ್ಲೆಯ ಆರ್ಥಿಕ ಚಟುವಟಿಕೆಗಳು ಹಾಗೂ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗುವ ನಿರೀಕ್ಷೆಯಿದೆ. ಈ ಸಾಧನೆಗೆ ಸಹಕರಿಸಿದ ಕೇಂದ್ರ ರೈಲ್ವೆ ಸಚಿವಾಲಯ ಮತ್ತು ಕೊಂಕಣ ರೈಲ್ವೆ ಅಧಿಕಾರಿಗಳಿಗೆ ಸಂಸದರು ಅಭಿನಂದನೆ ಸಲ್ಲಿಸಿದ್ದಾರೆ.