Saturday, May 30, 2026
HomeLocal Newsಟ್ರೆಕ್ಕಿಂಗ್‌ಗೆ ಹೊಸ SOP | ಉತ್ತರಕನ್ನಡಕ್ಕೆ ಉಂಡೆಯೋ, ಕರ್ಜಿಕಾಯಿಯೋ?!

ಟ್ರೆಕ್ಕಿಂಗ್‌ಗೆ ಹೊಸ SOP | ಉತ್ತರಕನ್ನಡಕ್ಕೆ ಉಂಡೆಯೋ, ಕರ್ಜಿಕಾಯಿಯೋ?!

ಸಂಪಾದಕೀಯ

ಕರ್ನಾಟಕವು ಪ್ರಕೃತಿ ಸೌಂದರ್ಯ, ಪಶ್ಚಿಮ ಘಟ್ಟಗಳ ಹಸಿರು ಬೆಟ್ಟಗಳು, ದಟ್ಟ ಅರಣ್ಯಗಳು, ಜಲಪಾತಗಳು ಮತ್ತು ಸಾಹಸ ಪ್ರವಾಸೋದ್ಯಮಕ್ಕೆ ಸೂಕ್ತವಾದ ನೂರಾರು ಚಾರಣಪಥಗಳಿಂದ ದೇಶದ ಪ್ರಮುಖ ಪ್ರವಾಸಿ ರಾಜ್ಯಗಳಲ್ಲೊಂದು.

ಕೊಡಗಿನ ತಡಿಯಾಂಡಮೋಳ್‌ನಿಂದ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ಕುಮಾರಪರ್ವತದಿಂದ ಉತ್ತರ ಕನ್ನಡದ ಅರಣ್ಯ ಮಾರ್ಗಗಳವರೆಗೆ ಅನೇಕ ಸ್ಥಳಗಳು ವರ್ಷಪೂರ್ತಿ ಸಾವಿರಾರು ಪ್ರವಾಸಿಗರನ್ನು ಸೆಳೆಯುತ್ತಿವೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಚಾರಣಿಗರ ಸುರಕ್ಷತೆಗೆ ಹೊಸ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್‌ಒಪಿ) ಜಾರಿಗೊಳಿಸಿರುವುದು ಮಹತ್ವದ ಬೆಳವಣಿಗೆ.

ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿರುವ ಎಲ್ಲ ಅನುಮೋದಿತ ಚಾರಣಪಥಗಳಲ್ಲಿ ಇನ್ನುಮುಂದೆ ನೇಚರ್ ಗೈಡ್ ಇಲ್ಲದೆ ಚಾರಣಕ್ಕೆ ಅವಕಾಶವಿಲ್ಲ. ಪ್ರತಿ 10 ಚಾರಣಿಗರಿಗೆ ಒಬ್ಬ ಗೈಡ್ ಇರಬೇಕು, ದಿನಕ್ಕೆ ಗರಿಷ್ಠ 150 ಮಂದಿಗೆ ಮಾತ್ರ ಅವಕಾಶ, ಆನ್‌ಲೈನ್ ನೋಂದಣಿ ಕಡ್ಡಾಯ, ಜಿಪಿಎಸ್ ವಾಕಿಟಾಕಿ, ಟ್ರ್ಯಾಕಿಂಗ್ ಆಪ್, ಬೇಸ್ ಕ್ಯಾಂಪ್ ಸೌಲಭ್ಯ, ಪ್ಲಾಸ್ಟಿಕ್ ಮತ್ತು ಕ್ಯಾಂಪ್ ಫೈರ್ ನಿಷೇಧ ಸೇರಿದಂತೆ ಹಲವು ನಿಯಮಗಳನ್ನು ಸರ್ಕಾರ ಘೋಷಿಸಿದೆ.

ಸುರಕ್ಷಿತ ಪ್ರವಾಸಿ ರಾಜ್ಯ ಎಂಬ ಭಾವನೆ ನಿರ್ಮಾಣವಾದರೆ ದೇಶ-ವಿದೇಶದ ಪ್ರವಾಸಿಗರ ವಿಶ್ವಾಸ ಹೆಚ್ಚುತ್ತದೆ. ದಾರಿ ತಪ್ಪಿದರೆ ರಕ್ಷಣಾ ವ್ಯವಸ್ಥೆ ಇದೆ, ಗೈಡ್ ಇದೆ, ಮಾಹಿತಿ ವ್ಯವಸ್ಥೆ ಇದೆ ಎಂಬ ಭರವಸೆ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಮತ್ತೊಂದೆಡೆ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಯಾಗುವುದು ಈ ಯೋಜನೆಯ ದೊಡ್ಡ ಸಾಧಕ ಅಂಶ. ಗೈಡ್ ವ್ಯವಸ್ಥೆಯಿಂದ ಗ್ರಾಮೀಣ ಭಾಗದ ಯುವಕರು ತರಬೇತಿ ಪಡೆದು ಆದಾಯ ಗಳಿಸಬಹುದು. ಹೋಂಸ್ಟೇ, ಸ್ಥಳೀಯ ಆಹಾರ, ಸಾರಿಗೆ, ಗ್ರಾಮೀಣ ಮಾರುಕಟ್ಟೆಗಳಿಗೆ ಇದರಿಂದ ಪೂರಕ ಪರಿಣಾಮ ಉಂಟಾಗಬಹುದು.

ಪರಿಸರ ಸಂರಕ್ಷಣೆಯ ದೃಷ್ಟಿಯಿಂದಲೂ ಇದು ಅಗತ್ಯ ಹೆಜ್ಜೆ. ನಿಯಂತ್ರಣವಿಲ್ಲದ ಪ್ರವಾಸೋದ್ಯಮದಿಂದ ಪ್ಲಾಸ್ಟಿಕ್ ತ್ಯಾಜ್ಯ, ಶಬ್ದ ಮಾಲಿನ್ಯ, ಕ್ಯಾಂಪ್ ಫೈರ್, ಅರಣ್ಯ ಹಾನಿ, ವನ್ಯಜೀವಿಗಳಿಗೆ ತೊಂದರೆ ಉಂಟಾಗುತ್ತಿದೆ. ಗೈಡ್ ಮೇಲ್ವಿಚಾರಣೆ ಮತ್ತು ನಿಯಮಿತ ಸಂಖ್ಯೆಯ ಪ್ರವಾಸಿಗರಿಂದ ಪ್ರಕೃತಿಗೆ ಆಗುವ ಒತ್ತಡ ಕಡಿಮೆಯಾಗಬಹುದು.

ಆದರೆ ಈ ನೀತಿಗೆ ಸವಾಲುಗಳೂ ಇಲ್ಲವೆಂದಲ್ಲ. ಅನುಭವಸಂಪನ್ನ ಚಾರಣಿಗರು ಗೈಡ್ ಕಡ್ಡಾಯ ನಿಯಮವನ್ನು ಅನಗತ್ಯ ಹಸ್ತಕ್ಷೇಪವೆಂದು ಕಾಣಬಹುದು. ಹಲವು ವರ್ಷಗಳಿಂದ ಸ್ವತಂತ್ರವಾಗಿ ಚಾರಣ ನಡೆಸುತ್ತಿರುವವರಿಗೆ ಇದು ಅಸಮಾಧಾನ ತರಬಹುದು. ಗೈಡ್ ಶುಲ್ಕ, ನೋಂದಣಿ ವೆಚ್ಚ, ಇತರೆ ಸೇವಾ ಶುಲ್ಕಗಳು ಹೆಚ್ಚಾದರೆ ವಿದ್ಯಾರ್ಥಿಗಳು, ಕಡಿಮೆ ಬಜೆಟ್ ಪ್ರವಾಸಿಗರು ಹಾಗೂ ಯುವಕರಿಗೆ ಇದು ಆರ್ಥಿಕ ಭಾರವಾಗಬಹುದು.

ನಿಯಮ ರೂಪಿಸುವುದು ಸುಲಭವಾದರೂ ಜಾರಿಗೆ ತರುವುದು ಕಷ್ಟ. ಪ್ರತಿಯೊಂದು ಚಾರಣಪಥದಲ್ಲೂ ತರಬೇತಿ ಪಡೆದ ಗೈಡ್‌ಗಳು ಲಭ್ಯವಿರುತ್ತಾರೆಯೇ? ಜಿಪಿಎಸ್ ಸಾಧನಗಳು ಸದಾ ಕಾರ್ಯನಿರ್ವಹಿಸುತ್ತವೆಯೇ? ಆನ್‌ಲೈನ್ ವ್ಯವಸ್ಥೆ ಗ್ರಾಮೀಣ ಭಾಗದ ಜನರಿಗೆ ಸುಲಭವಾಗಿರುತ್ತದೆಯೇ? ಬೇಸ್ ಕ್ಯಾಂಪ್‌ಗಳು ಸಮರ್ಪಕವಾಗಿ ನಿರ್ವಹಿಸಲ್ಪಡುತ್ತವೆಯೇ? ಇವುಗಳಿಗೆ ಸ್ಪಷ್ಟ ಉತ್ತರ ಬೇಕಾಗಿದೆ.

ವಾಸ್ತವವಾಗಿ ಈ ಎಸ್‌ಒಪಿಯನ್ನು ದೊಡ್ಡ ಪ್ರವಾಸೋದ್ಯಮ ನೀತಿಯ ಮೊದಲ ಹಂತವಾಗಿ ಬಳಸಬಹುದು. ಗೈಡ್ ತರಬೇತಿ ಕೇಂದ್ರಗಳು, ಹವಾಮಾನ ಎಚ್ಚರಿಕೆ ವ್ಯವಸ್ಥೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಶಿಕ್ಷಣ ಚಾರಣ ಕಾರ್ಯಕ್ರಮಗಳು, ಹೋಂಸ್ಟೇಗಳಿಗೆ ಸಂಪರ್ಕಿತ ಪ್ಯಾಕೇಜ್‌ಗಳು, ಸ್ಥಳೀಯ ಸಂಸ್ಕೃತಿ ಪರಿಚಯ ಕಾರ್ಯಕ್ರಮಗಳು ಜೋಡಿಸಿದರೆ ಕರ್ನಾಟಕ ದೇಶದ ಪ್ರಮುಖ ಇಕೋ-ಟೂರಿಸಂ ಮಾದರಿಯಾಗಬಹುದು.

ಉತ್ತರ ಕನ್ನಡಕ್ಕೇನು ಲಾಭ?:

ಉತ್ತರ ಕನ್ನಡದ ದೃಷ್ಟಿಯಿಂದ ನೋಡಿದರೆ ಇದು ವರವೂ ಆಗಬಹುದು, ಶಾಪವೂ ಆಗಬಹುದು. ಉತ್ತರ ಕನ್ನಡ ಜಿಲ್ಲೆ ಸಾಹಸ ಪ್ರವಾಸೋದ್ಯಮಕ್ಕೆ ಅಪಾರ ಸಾಧ್ಯತೆಗಳ ಭೂಮಿ. ಯಾಣ, ಸೈಕ್ಸ್ ಪಾಯಿಂಟ್, ಕವಳೆ ಗುಹೆಗಳು, ಸಹಸ್ರಲಿಂಗ, ಕರಾವಳಿ ಬೆಟ್ಟಗಳು, ದಾಂಡೇಲಿ ಅರಣ್ಯ ಪ್ರದೇಶ, ಅನೇಕ ಜಲಪಾತ ಮಾರ್ಗಗಳು, ಅರಣ್ಯ ಚಾರಣ ಪಥಗಳು ದೇಶದ ಗಮನ ಸೆಳೆಯುವ ಸಾಮರ್ಥ್ಯ ಹೊಂದಿವೆ.

ಇಂತಹ ಜಿಲ್ಲೆಗೆ ನಿಯೋಜಿತ ಚಾರಣ ವ್ಯವಸ್ಥೆ ಬಂದರೆ ಅದು ದೊಡ್ಡ ಅವಕಾಶ. ದಾರಿ ತಪ್ಪುವಿಕೆ, ಅಪಘಾತ, ಅನಧಿಕೃತ ಪ್ರವೇಶ ಕಡಿಮೆಯಾಗಬಹುದು. ಸ್ಥಳೀಯ ಯುವಕರಿಗೆ ಗೈಡ್ ಉದ್ಯೋಗ ಸಿಗಬಹುದು. ಹೋಂಸ್ಟೇ, ಜೀಪ್ ಸೇವೆ, ಸ್ಥಳೀಯ ಆಹಾರ, ಕೈಗಾರಿಕೆ ಉತ್ಪನ್ನಗಳಿಗೆ ಮಾರುಕಟ್ಟೆ ವಿಸ್ತರಿಸಬಹುದು. ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಉತ್ತರ ಕನ್ನಡ ಮಾದರಿಯಾಗುವ ಅವಕಾಶ ಇದೆ.

ಆದರೆ, ಉತ್ತರ ಕನ್ನಡದಲ್ಲಿ ಇನ್ನೂ ಅನೇಕ ಪ್ರವಾಸಿ ತಾಣಗಳಿಗೆ ರಸ್ತೆ, ಮೊಬೈಲ್ ನೆಟ್‌ವರ್ಕ್, ಶೌಚಾಲಯ, ಪಾರ್ಕಿಂಗ್, ತುರ್ತು ವೈದ್ಯಕೀಯ ವ್ಯವಸ್ಥೆಗಳು ಸಮರ್ಪಕವಾಗಿಲ್ಲ. ಇಂತಹ ಮೂಲಸೌಕರ್ಯವಿಲ್ಲದೆ ನಿಯಮ ಮಾತ್ರ ತಂದರೆ ಸ್ಥಳೀಯರಿಗೆ ಆದಾಯ ಕಡಿಮೆಯಾಗುವ ಅಪಾಯವಿದೆ.

ಮುಖ್ಯವಾಗಿ ಹೊರಗಿನ ಏಜೆನ್ಸಿಗಳಿಗಿಂತ ಗ್ರಾಮಸ್ಥರು, ಯುವಕರು, ಅರಣ್ಯ ಅಂಚಿನ ಸಮುದಾಯಗಳು ಗೈಡ್‌, ಹೋಂಸ್ಟೇ, ಸಾರಿಗೆ, ಆಹಾರ ಸೇವೆಯಲ್ಲಿ ಭಾಗಿಯಾದರೆ ಇದು ವರ. ಇಲ್ಲದಿದ್ದರೆ ಲಾಭ ಬೇರೆಡೆ ಹೋಗಿ, ಹೊರೆ ಮಾತ್ರ ಸ್ಥಳೀಯರ ಮೇಲಿದೆ ಎಂದರೆ ಅದು ಶಾಪ.

ಉತ್ತರ ಕನ್ನಡಕ್ಕೆ ಪ್ರಕೃತಿ ಇದೆ, ಸಾಮರ್ಥ್ಯ ಇದೆ, ಬೇಡಿಕೆ ಇದೆ. ಈಗ ಬೇಕಾಗಿರುವುದು ಬುದ್ಧಿವಂತ ನಡೆ, ಮೂಲ ಸೌಲಭ್ಯಗಳ ಪೂರೈಕೆಯಷ್ಟೇ. ಹೊರತಾಗಿ, ಕಾಗದದ ನಿಯಮ, ಗೊಂದಲ, ಪ್ರವಾಸಿಗರಿಗೆ ತೊಂದರೆ ಎಂಬ ರೀತಿಯಲ್ಲಿ ಜಾರಿಯಾದರೆ ಅದು ಶಾಪವಲ್ಲದೆ ಮತ್ತಿನ್ನೇನು?

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share