ರಸ್ತೆ ಸಂಚಾರದಲ್ಲಿ ಬದಲಾವಣೆ
ಕಾರವಾರ: ಹುಬ್ಬಳ್ಳಿ-ಕಾರವಾರ ರಾಷ್ಟ್ರೀಯ ಹೆದ್ದಾರಿ 63ರ ದೇವಿಕೊಪ್ಪ ಗ್ರಾಮದ ಐ.ಬಿ ಕ್ರಾಸ್ ಬಳಿ ಏಪ್ರಿಲ್ 22ರಂದು ಎಲ್‌ಪಿಜಿ ಅನಿಲ ಹೊತ್ತೊಯ್ಯುತ್ತಿದ್ದ ಅಶೋಕ್ ಟ್ಯಾಂಕರ್ ಅಪಘಾತಕ್ಕೊಳಗಾಗಿದ್ದು, ಟ್ಯಾಂಕರ್‌ನಿಂದ ಅನಿಲ ಸೋರಿಕೆಯಾಗುತ್ತಿದೆ.
ಅನಿಲ ಸೋರಿಕೆಯಿಂದಾಗಿ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಕಲಘಟಗಿ-ಯಲ್ಲಾಪುರ ಮಾರ್ಗದಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದ್ದು, ಪರಿಸ್ಥಿತಿ ನಿಯಂತ್ರಿಸಲು ಶ್ರಮಿಸುತ್ತಿದ್ದಾರೆ.
ಪರ್ಯಾಯ ಮಾರ್ಗಗಳ ವಿವರ: ಗ್ಯಾಸ್ ಸೋರಿಕೆ ಹಿನ್ನೆಲೆಯಲ್ಲಿ ಸಂಭವನೀಯ ಅನಾಹುತ ತಡೆಯಲು ಪೊಲೀಸ್ ಇಲಾಖೆಯು ವಾಹನಗಳ ಸಂಚಾರ ಮಾರ್ಗವನ್ನು ಈ ಕೆಳಗಿನಂತೆ ಬದಲಾಯಿಸಿದೆ.
* ಹುಬ್ಬಳ್ಳಿ -ಕಾರವಾರ-ಅಂಕೋಲಾ ಕಡೆಗೆ ಹೋಗುವವರು ಹುಬ್ಬಳ್ಳಿಯಿಂದ ತಡಸ್ ಕ್ರಾಸ್-ಮುಂಡಗೋಡ ಮಾರ್ಗವಾಗಿ ಸಂಚರಿಸಬೇಕು.
* ಧಾರವಾಡ-ಕಲಘಟಗಿ-ಯಲ್ಲಾಪುರ ಮಾರ್ಗದ ವಾಹನಗಳು ಹುಬ್ಬಳ್ಳಿ – ತಡಸ್ ಕ್ರಾಸ್ – ಮುಂಡಗೋಡ ಮಾರ್ಗವನ್ನೇ ಬಳಸಬೇಕು.
* ಯಲ್ಲಾಪುರದಿಂದ ಹುಬ್ಬಳ್ಳಿ/ಧಾರವಾಡಕ್ಕೆ ಬರುವವರು ಯಲ್ಲಾಪುರ ಹಳಿಯಾಳ ಕ್ರಾಸ್-ಹಳಿಯಾಳ- ಧಾರವಾಡ ಮಾರ್ಗವಾಗಿ ಸಂಚರಿಸಲು ಸೂಚಿಸಲಾಗಿದೆ.
* ತಡಸ್ ಗ್ರಾಮದಿಂದ ಬರುವವರು ತಬಕದ ಹೊನ್ನಳ್ಳಿ-ಕಲಘಟಗಿ ಮಾರ್ಗದ ಬದಲಾಗಿ ಮುಂಡಗೋಡ-ಶಿರಸಿ ಮಾರ್ಗವನ್ನು ಬಳಸುವಂತೆ ಸೂಚನೆ ನೀಡಲಾಗಿದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಹುಬ್ಬಳ್ಳಿ ಗ್ರಾಮೀಣ, ಧಾರವಾಡ ಗ್ರಾಮೀಣ, ಹುಬ್ಬಳ್ಳಿ-ಧಾರವಾಡ ಕಮೀಷನರೇಟ್ ವ್ಯಾಪ್ತಿಯ ಪೊಲೀಸ್ ಠಾಣೆಗಳು ಹಾಗೂ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಹಳಿಯಾಳ ಮತ್ತು ಮುಂಡಗೋಡ ಪೊಲೀಸ್ ಠಾಣೆಗಳಿಗೆ ತುರ್ತು ಮಾಹಿತಿ ರವಾನಿಸಲಾಗಿದೆ. ಸಾರ್ವಜನಿಕರು ಹಾಗೂ ವಾಹನ ಸವಾರರು ಪೊಲೀಸರೊಂದಿಗೆ ಸಹಕರಿಸಿ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಕೋರಲಾಗಿದೆ.