ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಮನವಿ
ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಪ್ರಸ್ತಾಪಗೊಂಡಿರುವ ಅಘನಾಶಿನಿ ನದಿ ಜೋಡಣೆ ಯೋಜನೆ ಜನ ಹಾಗೂ ಪರಿಸರ ವಿರೋಧಿಯಾಗಿದೆ ಎಂದು ಆರೋಪಿಸಿ ಕರ್ನಾಟಕ ಗಡಿ ಹಾಗೂ ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಚ್.ಎಲ್. ನಾಗಮೋಹನ್ ದಾಸ್ ಅವರ ಗಮನಕ್ಕೆ ವಿಷಯವನ್ನು ತರಲಾಗಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬೆಂಗಳೂರಿನ ಆಯೋಗದ ಕಚೇರಿಯಲ್ಲಿ ಆಯೋಗದ ಅಧ್ಯಕ್ಷರನ್ನು ಭೇಟಿಯಾಗಿ ಯೋಜನೆಗೆ ಸಂಬಂಧಿಸಿದ ದಾಖಲೆಗಳು ಹಾಗೂ ಅಂಕಿ-ಅಂಶಗಳೊಂದಿಗೆ ವಿರೋಧ ವ್ಯಕ್ತಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ನೀರು ಅಭಿವೃದ್ದಿ ಪ್ರಾಧಿಕಾರವು 2025ರ ಅಕ್ಟೋಬರ್‌ನಲ್ಲಿ ಅಘನಾಶಿನಿ–ವೇದಾವತಿ (ವಾಣಿ ವಿಲಾಸ ಸಾಗರ) ನದಿ ಜೋಡಣೆ ಯೋಜನೆಗೆ ಪ್ರಾಥಮಿಕ ಸಾಧ್ಯತೆ ವರದಿ ಸಿದ್ಧಪಡಿಸಿರುವುದಾಗಿ ತಿಳಿಸಿದೆ. ಯೋಜನೆಯಂತೆ ಸುಮಾರು 35 ಟಿಎಂಸಿ ನೀರನ್ನು ಅಘನಾಶಿನಿಯಿಂದ ವಾಣಿವಿಲಾಸ ಜಲಾಶಯಕ್ಕೆ ಸುಮಾರು 194 ಕಿಲೋಮೀಟರ್ ದೂರದ ಸುರಂಗ ಮತ್ತು ಪೈಪ್‌ಲೈನ್ ಮೂಲಕ ಸಾಗಿಸಲು ಉದ್ದೇಶಿಸಲಾಗಿದೆ.
ಈ ಯೋಜನೆಯಿಂದ ಪಶ್ಚಿಮ ಘಟ್ಟ ಪ್ರದೇಶದ ಜನಜೀವನ, ಜೀವ ವೈವಿಧ್ಯತೆ, ಪ್ರಾಣಿ–ಪಕ್ಷಿಗಳು ಹಾಗೂ ಅಪರೂಪದ ಸಸ್ಯ ಸಂಪತ್ತಿಗೆ ಹಾನಿಯಾಗುವ ಸಾಧ್ಯತೆ ಇದೆ ಎಂದು ರವೀಂದ್ರ ನಾಯ್ಕ ಆತಂಕ ವ್ಯಕ್ತಪಡಿಸಿದರು.
ನದಿ ಜೋಡಣೆ ಯೋಜನೆಗೆ ವಿರೋಧವಾಗಿ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಸುಮಾರು 25 ಸಾವಿರಕ್ಕೂ ಹೆಚ್ಚು ಕುಟುಂಬಗಳಿಂದ ಲಿಖಿತ ಆಕ್ಷೇಪಣೆ ಸಲ್ಲಿಸಿರುವುದನ್ನು ಆಯೋಗದ ಗಮನಕ್ಕೆ ತರಲಾಗಿದೆ. ಯುನೆಸ್ಕೋ ವಿಶ್ವ ಪರಂಪರೆ ಮಾರ್ಗಸೂಚಿಗಳ ಅನ್ವಯ ಕ್ರಮ ಕೈಗೊಳ್ಳಬೇಕೆಂದು ಭಾರತ ಸರ್ಕಾರಕ್ಕೆ ಸೂಚನೆ ನೀಡಲಾಗಿದ್ದು, ಈ ಸಂಬಂಧ ಹೋರಾಟಗಾರರ ವೇದಿಕೆ ಸಲ್ಲಿಸಿದ ಆಕ್ಷೇಪಣೆಗೆ ಯುನೆಸ್ಕೋ ಪ್ರತಿಕ್ರಿಯೆ ನೀಡಿರುವುದನ್ನು ನ್ಯಾಯಮೂರ್ತಿ ನಾಗಮೋಹನ್ ದಾಸ್ ಪ್ರಶಂಸಿಸಿದ್ದಾರೆ ಎಂದು ರವೀಂದ್ರ ನಾಯ್ಕ ತಿಳಿಸಿದ್ದಾರೆ.