Saturday, May 30, 2026
HomeLocal Newsಭವಿಷ್ಯದಲ್ಲಿ ಬೆಂಗಳೂರು ‘ಗ್ಯಾಸ್ ಚೇಂಬರ್’ ಆಗುವ ಅಪಾಯವಿದೆ!

ಭವಿಷ್ಯದಲ್ಲಿ ಬೆಂಗಳೂರು ‘ಗ್ಯಾಸ್ ಚೇಂಬರ್’ ಆಗುವ ಅಪಾಯವಿದೆ!

ಕಾರವಾರ: ಬೆಂಗಳೂರಿನಲ್ಲಿ ಪರಿಸರ ಸಮತೋಲನ ಕಾಪಾಡಿ ಆರೋಗ್ಯಕರ ನಗರ ನಿರ್ಮಿಸಲು ಕನಿಷ್ಠ ಶೇ. 33ರಷ್ಟು ಹಸಿರು ಹೊದಿಕೆ ಅಗತ್ಯವಿದ್ದು, 1.40 ಕೋಟಿ ಜನಸಂಖ್ಯೆ ಹೊಂದಿರುವ ನಗರದಲ್ಲಿ ಕನಿಷ್ಠ 10 ಕೋಟಿ ಮರಗಳನ್ನು ಪೋಷಿಸುವ ಅವಶ್ಯಕತೆ ಇದೆ ಎಂದು ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ಅಸರ್ ಸೋಷಿಯಲ್ ಇಂಪ್ಯಾಕ್ಟ್ ಅಡ್ವೈಸರ್ಸ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ “ಬೆಂಗಳೂರಿನಲ್ಲಿ ತಾಪಮಾನ ವೈಪರೀತ್ಯ ಹಾಗೂ ಅದರ ಪರಿಣಾಮಗಳು” ಕುರಿತ ಮಾಧ್ಯಮ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಒಬ್ಬ ಮನುಷ್ಯನಿಗೆ ಸಮರ್ಪಕ ಆಮ್ಲಜನಕ ದೊರಕಲು ಕನಿಷ್ಠ 7 ಮರಗಳು ಅಗತ್ಯವೆಂದು ವಿಜ್ಞಾನ ಹೇಳುತ್ತದೆ. ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಹಸಿರು ಹೊದಿಕೆ ಕ್ಷೀಣಿಸುತ್ತಿದ್ದು, ಇದು ಭವಿಷ್ಯದಲ್ಲಿ ನಗರವನ್ನು ‘ಗ್ಯಾಸ್ ಚೇಂಬರ್’ ಆಗಿಸುವ ಅಪಾಯವಿದೆ ಎಂದು ಅವರು ಎಚ್ಚರಿಸಿದರು.

ಕಳೆದ ಮೂರು ವರ್ಷಗಳಲ್ಲಿ ರಾಜ್ಯದಾದ್ಯಂತ ಸುಮಾರು 11 ಕೋಟಿ ಸಸಿಗಳನ್ನು ನೆಡಲಾಗಿದೆ. ಅವುಗಳಲ್ಲಿ ಎಷ್ಟು ಸಸಿಗಳು ಬದುಕುಳಿದಿವೆ ಎಂಬುದರ ಕುರಿತು ವೈಜ್ಞಾನಿಕ ಸಮೀಕ್ಷೆ ನಡೆಸಿ, ವರದಿಯನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸುವುದಷ್ಟೇ ಅಲ್ಲದೆ, ಮರು ಅತಿಕ್ರಮಣ ತಡೆಯಲು ಮಾಸ್ಟರ್ ಪ್ಲಾನ್ ರೂಪಿಸಲಾಗಿದೆ. ವಶಪಡಿಸಿಕೊಂಡ ಜಾಗಗಳಿಗೆ ತಕ್ಷಣ ಕಾಂಪೌಂಡ್ ನಿರ್ಮಿಸಿ, ಸಾವಿರಾರು ಸಸಿಗಳನ್ನು ನೆಡುವ ಮೂಲಕ ‘ಅರ್ಬನ್ ಫಾರೆಸ್ಟ್’ಗಳಾಗಿ ಅಭಿವೃದ್ಧಿಪಡಿಸಲಾಗುವುದು. ಇವು ನಗರಕ್ಕೆ ಶುದ್ಧ ಗಾಳಿ ನೀಡುವ ನೈಸರ್ಗಿಕ ಕೇಂದ್ರಗಳಾಗಲಿವೆ ಎಂದು ಹೇಳಿದರು.

ಹವಾಮಾನ ಬದಲಾವಣೆ ತಡೆಗೆ ರೂಪಿಸಿರುವ ‘ಕರ್ನಾಟಕ ರಾಜ್ಯ ಕ್ರಿಯಾ ಯೋಜನೆ’ಗೆ ಸರ್ಕಾರ ಒಪ್ಪಿಗೆ ನೀಡಿದ್ದು, ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತರಬೇತಿ ಮತ್ತು ಅನುಷ್ಠಾನ ಪ್ರಕ್ರಿಯೆಗಳು ಶೀಘ್ರ ಆರಂಭವಾಗಲಿವೆ ಎಂದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ ಮಾತನಾಡಿ, ಬದಲಾಗುತ್ತಿರುವ ಬೆಂಗಳೂರಿನ ಪರಿಸರ ಸ್ಥಿತಿ ಹಾಗೂ ಹೆಚ್ಚುತ್ತಿರುವ ಶಾಖದ ಕುರಿತು ಸರ್ಕಾರದ ಗಮನ ಸೆಳೆಯುವಲ್ಲಿ ಮಾಧ್ಯಮಗಳು ಸೇತುವೆಯಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ನಿರ್ದೇಶಕ ಎಂ.ಎಸ್. ದಿವಾಕರ್, ಪರಿಸರ ವೈಪರೀತ್ಯಗಳು ಹೊಸದಲ್ಲ, ಆದರೆ ತಂತ್ರಜ್ಞಾನ ಮತ್ತು ಮಾಧ್ಯಮ ಸಂವಹನದಿಂದ ಅವುಗಳ ಪರಿಣಾಮ ಹೆಚ್ಚು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಐಐಎಚ್‌ಎಸ್‌ನ ಹಿರಿಯ ಸಹವರ್ತಿ ಎಸ್. ಸ್ವಾತಿ, ಹೀಟ್ ವಾಚ್ ಸಂಸ್ಥೆಯ ಆಪೇಕ್ಷಿತಾ ವರ್ಶನಯ್, ಬಿಬಿಎಂಪಿ ಹವಾಮಾನ ಕ್ರಿಯಾ ಕೋಶದ ನಿತ್ಯಾ ಜೆ ಸೇರಿದಂತೆ ಹಲವರು ಬೆಂಗಳೂರಿನ ತಾಪಮಾನ ಏರಿಕೆ, ಶಾಖದ ಅಲೆಗಳು ಹಾಗೂ ನಗರ ಪರಿಸರ ನಿರ್ವಹಣೆ ಕುರಿತು ಮಾಹಿತಿ ಹಂಚಿಕೊಂಡರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share