Friday, July 24, 2026
Join WhatsApp Group
HomeLocal Newsನದಿ ಕಣಿವೆಗಳ ರಕ್ಷಣೆ ಅರಣ್ಯ ಇಲಾಖೆಯ ಜವಾಬ್ದಾರಿ

ನದಿ ಕಣಿವೆಗಳ ರಕ್ಷಣೆ ಅರಣ್ಯ ಇಲಾಖೆಯ ಜವಾಬ್ದಾರಿ

ಬೇಡ್ತಿ-ಅಘನಾಶಿನಿ ಯೋಜನೆಗೆ ಅರಣ್ಯ ಇಲಾಖೆ ಅನುಮತಿ ನೀಡದಿರಲು ಸಮಿತಿಯ ಆಗ್ರಹ

ಯಲ್ಲಾಪುರ: ಬೇಡ್ತಿ-ವರದಾ ಯೋಜನೆಯ ಸಲುವಾಗಿ ಎನ್‌ಡಬ್ಲ್ಯುಡಿಎ (NWDA) ಹಾಗೂ ರಾಜ್ಯ ಸಂಪನ್ಮೂಲ ಇಲಾಖೆ ಸ್ಥಳ ಸಮೀಕ್ಷೆ ನಡೆಸಲು ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶಗಳಿಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಆಗ್ರಹಿಸಿ, ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯವರು ಮಂಗಳವಾರ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಬೇಡ್ತಿ, ಅಘನಾಶಿನಿ ಹಾಗೂ ಶಾಲ್ಮಲಾ ನದೀ ಕಣಿವೆಗಳ ರಕ್ಷಣೆ ಅರಣ್ಯ ಇಲಾಖೆಯ ಜವಾಬ್ದಾರಿಯಾಗಿದ್ದು, ಯಲ್ಲಾಪುರ ಮತ್ತು ಶಿರಸಿ ಅರಣ್ಯ ವಿಭಾಗ ವ್ಯಾಪ್ತಿಯಲ್ಲಿ ಜೀವ ವೈವಿಧ್ಯತೆಯ ಸಮೃದ್ಧ ತಾಣಗಳಿವೆ ಎಂದು ಸಮಿತಿ ತಿಳಿಸಿದೆ. ಸೀತಾ, ಅಶೋಕಾ, ಮರ ಅರಿಶಿಣ ಸೇರಿದಂತೆ ಅಪರೂಪದ ವೃಕ್ಷ ಸಂಕುಲಗಳು, ವಿನಾಶದ ಅಂಚಿನಲ್ಲಿರುವ ಔಷಧೀಯ ಸಸ್ಯ ಸಂಪತ್ತು ಈ ಪ್ರದೇಶದಲ್ಲಿದ್ದು, ಬೇಡ್ತಿ ಮತ್ತು ಅಘನಾಶಿನಿ ನದೀತೀರದ ಅಮೂಲ್ಯ ಸಸ್ಯವರ್ಗಗಳ ಸಂರಕ್ಷಣೆ ಅತ್ಯಂತ ಅಗತ್ಯವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಈಗಾಗಲೇ ಹಲವು ಬೃಹತ್ ಯೋಜನೆಗಳಿಂದ ಕೆನರಾ ಅರಣ್ಯ ವಲಯ ಜರ್ಝರಿತವಾಗಿದ್ದು, ಭೂಕುಸಿತದ ಸೂಕ್ಷ್ಮ ವಲಯಗಳಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಬೇಡ್ತಿ ಹಾಗೂ ಅಘನಾಶಿನಿ ನದೀ ತಿರುವು ಯೋಜನೆಗಳಿಗೆ ಮತ್ತು ಅರಣ್ಯ ಸಮೀಕ್ಷೆಗೆ ಅನುಮತಿ ನೀಡಬಾರದು ಎಂದು ಒತ್ತಾಯಿಸಲಾಗಿದೆ.

ಕಳೆದ ಎಂಟು ತಿಂಗಳಿನಿಂದ ಬೇಡ್ತಿ-ಅಘನಾಶಿನಿ ಕಣಿವೆಯ ಸಮಗ್ರ ಜನತೆ ಈ ವಿಷಯವಾಗಿ ತೀವ್ರ ಜನಾಂದೋಲನ ನಡೆಸುತ್ತಿದ್ದು, ಸ್ವರ್ಣವಲ್ಲೀ ಶ್ರೀಗಳ ನೇತೃತ್ವದ ಸಮಿತಿಯ ಸಹಕಾರಕ್ಕೆ ಮತ್ತೊಮ್ಮೆ ಹಕ್ಕೊತ್ತಾಯ ಮಂಡಿಸುತ್ತೇವೆ ಎಂದು ಸಮಿತಿ ತಿಳಿಸಿದೆ.

ಶರಾವತಿ ನದೀ ಕಣಿವೆ ಪಶ್ಚಿಮ ಘಟ್ಟದ ಹೃದಯಭಾಗವಾಗಿದ್ದು, ಅದರ ಒಂದು ಭಾಗ ಈಗಾಗಲೇ ಮುಳುಗಡೆಯಾಗಿದೆ. ಉಳಿದ ಅರಣ್ಯ ಪ್ರದೇಶವನ್ನು ಸರ್ಕಾರವೇ ಶರಾವತಿ ಅಭಯಾರಣ್ಯ ಎಂದು ಘೋಷಿಸಿದೆ. ಇಂತಹ ಪ್ರದೇಶದಲ್ಲಿ ಬೃಹತ್ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸರ್ಕಾರದ ಅರಣ್ಯ ಮತ್ತು ವನ್ಯಜೀವಿ ಇಲಾಖೆ ಒಪ್ಪಿಗೆ ನೀಡಬಾರದು ಎಂದು ಆಗ್ರಹಿಸಲಾಗಿದೆ.

ಇಲ್ಲಿ ಈಗಾಗಲೇ ನಾಲ್ಕು ಜಲಾಶಯಗಳು, ಗಣಿಗಾರಿಕೆ ಹಾಗೂ ಇನ್ನಿತರ ಕಾಮಗಾರಿಗಳಿದ್ದು, ಕೇಂದ್ರ ವನ್ಯಜೀವಿ ಮಂಡಳಿಯ ತಜ್ಞರ ಸಮಿತಿಯೂ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಅನುಮತಿ ನೀಡಬಾರದು ಎಂದು ವರದಿ ನೀಡಿದೆ. ಈ ವರದಿಯನ್ನು ಪರಿಗಣಿಸಿ ಸರ್ಕಾರ ಯೋಜನೆಗೆ ಅನುಮತಿ ನಿರಾಕರಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಸಂಚಾಲಕ ನರಸಿಂಹ ಸಾತೊಡ್ಡಿ, ಪರಿಸರ ವಿಜ್ಞಾನಿ ಬಾಲಚಂದ್ರ ಸಾಯಿಮನೆ, ಟಿ.ಆರ್. ಹೆಗಡೆ, ಡಾ. ರವಿ ಭಟ್ಟ ಬರಗದ್ದೆ, ಜಿ.ಎಸ್. ಭಟ್ಟ ಕಾರೆಮನೆ, ವೆಂಕಟ್ರಮಣ ಬೆಳ್ಳಿ, ರಾಮಕೃಷ್ಣ ಕವಡಿಕೆರೆ, ಕೆ.ಟಿ. ಹೆಗಡೆ ಕೊರಗಿ, ಕೇಶವ ಭಟ್ಟ ಕವಡಿಕೆರೆ, ಗೋಪಾಲಕೃಷ್ಣ ಮಂಗಳಾರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಸಮಿತಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ನದಿ ತಟದಲ್ಲಿ ವೃಕ್ಷಾರೋಪಣ ನಡೆಸಬೇಕಾದ ಸ್ಥಳಗಳನ್ನು ಗುರುತಿಸುವುದು, ಈಗಾಗಲೇ ರಚಿಸಿದ ಕಾವಲು ಪಡೆಗಳಿಗೆ ಜವಾಬ್ದಾರಿ ನೀಡುವುದು, ಸರ್ವೆಗೆ ಬರುವವರ ಮೇಲೆ ನಿಗಾ ಇಡುವುದು, ಪಂಚಾಯತ್ ಗ್ರಾಮಸಭೆಗಳಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಸಲ್ಲಿಸುವುದು ಹಾಗೂ ಜನಜಾಗೃತಿ ಮೂಡಿಸುವುದು ಸೇರಿದಂತೆ ಹಲವು ಮಹತ್ವದ ನಿರ್ಣಯಗಳನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share