ಶಿರಸಿ: ಗ್ರಾಮೀಣ ಪ್ರದೇಶದ ಯುವಕರು ಹೊಸ ತಂತ್ರಜ್ಞಾನದಲ್ಲಿ ಸಾಧನೆ ಮಾಡಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಗಮನಾರ್ಹವಾಗಿದ್ದು, ಉದ್ಯಮ ಕ್ಷೇತ್ರದಲ್ಲಿ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ತಾಲೂಕಿನ ಹುಳಗೋಳ ಗ್ರಾಮದ ಯುವ ಉದ್ಯಮಿ ಪ್ರವರ್ ಹೆಗಡೆ ಅವರು 3ಡಿ ತಂತ್ರಜ್ಞಾನದ ಮೂಲಕ ಗಮನ ಸೆಳೆದಿದ್ದಾರೆ.ತಮ್ಮದೇ ಸಂಸ್ಥೆ ಪ್ರೋಭಾರತ್ ಟೆಕ್ನಾಲಜೀಸ್ ಮೂಲಕ ಅಭಿವೃದ್ಧಿಪಡಿಸಿರುವ ಸ್ವದೇಶಿ 3ಡಿ ಪ್ರಿಂಟಿಂಗ್ ಹಾಗೂ ಸ್ಮಾರ್ಟ್ ಮ್ಯಾನ್ಯುಫ್ಯಾಕ್ಚರಿಂಗ್ ವ್ಯವಸ್ಥೆಯನ್ನು ಅವರು ಧಾರವಾಡದಲ್ಲಿ ನಡೆದ ಇನ್ಕೊಮೆಕ್ಸ 2026 ಉದ್ಯಮ ಪ್ರದರ್ಶನದಲ್ಲಿ ಯಶಸ್ವಿಯಾಗಿ ಪ್ರದರ್ಶಿಸಿ ವ್ಯಾಪಕ ಮೆಚ್ಚುಗೆ ಗಳಿಸಿದ್ದಾರೆ.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಆಯೋಜಿಸಿದ್ದ ಈ ರಾಜ್ಯ ಮಟ್ಟದ ಪ್ರದರ್ಶನದಲ್ಲಿ 300ಕ್ಕೂ ಹೆಚ್ಚು ಸ್ಟಾಲ್‌ಗಳು ಭಾಗವಹಿಸಿದ್ದವು. ಲಕ್ಷಾಂತರ ಮಂದಿ ಭೇಟಿ ನೀಡಿದ ಈ ಪ್ರದರ್ಶನದಲ್ಲಿ ಪ್ರವರ್ ಹೆಗಡೆ ಅವರ ತಂತ್ರಜ್ಞಾನ ವಿಶೇಷ ಗಮನ ಸೆಳೆಯಿತು.
ವಿವಿಧ ಉದ್ಯಮಿಗಳು, ತಾಂತ್ರಿಕ ತಜ್ಞರು, ವಿದ್ಯಾರ್ಥಿಗಳು ಹಾಗೂ ಸ್ಟಾರ್ಟ್‌ಅಪ್ ಆಸಕ್ತರು ಅವರ ಆವಿಷ್ಕಾರ ಕುರಿತು ಮಾಹಿತಿ ಪಡೆದರು.
ಇದೇ ಸಂದರ್ಭದಲ್ಲಿ ಕೆಎಲ್ ಇ ತಾಂತ್ರಿಕ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಡೆದ ಐಡಿಯಾಸ್ಪ್ರಿಂಟ್ ಸ್ಪರ್ಧೆಯಲ್ಲಿಯೂ ಅವರು ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದಾರೆ. ಪ್ರವರ್ ಹೆಗಡೆ ಅವರು ಕರ್ನಾಟಕ ಸರ್ಕಾರದ ಎಲಿವೇಟ್ 2025 ಯೋಜನೆಯ ಪ್ರಶಸ್ತಿ ವಿಜೇತರಾಗಿದ್ದು, ಅವರ ಸಂಸ್ಥೆ ಸರ್ಕಾರದಿಂದ ಮಾನ್ಯತೆ ಪಡೆದ ಸ್ಟಾರ್ಟ್‌ಅಪ್ ಆಗಿದೆ.
ಸ್ವದೇಶಿ 3ಡಿ ಪ್ರಿಂಟಿಂಗ್ ಮತ್ತು ಸ್ಮಾರ್ಟ್ ಮ್ಯಾನ್ಯುಫ್ಯಾಕ್ಚರಿಂಗ್ ತಂತ್ರಜ್ಞಾನವು ಸ್ಟಾರ್ಟ್‌ಅಪ್‌ಗಳು, ವಿದ್ಯಾರ್ಥಿಗಳು ಹಾಗೂ ಸಣ್ಣ ಉದ್ಯಮಿಗಳಿಗೆ ಕಡಿಮೆ ವೆಚ್ಚದಲ್ಲಿ ವೇಗವಾದ ಉತ್ಪಾದನಾ ಸಾಮರ್ಥ್ಯ ಒದಗಿಸುವ ಉದ್ದೇಶ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.
ಎಲಿವೇಟ್ 2025 ಕರ್ನಾಟಕ ಸರ್ಕಾರದ ಪ್ರಮುಖ ಸ್ಟಾರ್ಟ್‌ಅಪ್ ಉತ್ತೇಜನಾ ಯೋಜನೆಯಾಗಿದ್ದು, ಆಯ್ಕೆಯಾದ ಹೊಸ ಆಲೋಚನೆಗಳಿಗೆ ₹50 ಲಕ್ಷವರೆಗೆ ಷೇರು ಹಂಚಿಕೆ ಇಲ್ಲದೆ ಹಾಗೂ ಮರುಪಾವತಿ ಅಗತ್ಯವಿಲ್ಲದ ಅನುದಾನ ನೀಡಲಾಗುತ್ತದೆ.
ಪ್ರವರ್ ಹೆಗಡೆ ಅವರ ಸಾಧನೆ ಗ್ರಾಮೀಣ ಯುವಕರಿಗೆ ಪ್ರೇರಣೆಯಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಗೂ ಕಾರಣವಾಗಿದೆ. ಅವರು ಹುಳಗೋಳದ ರಾಮಚಂದ್ರ ಹೆಗಡೆ ಮತ್ತು ರಾಜೇಶ್ವರಿ ಹೆಗಡೆ ಅವರ ಪುತ್ರರಾಗಿದ್ದಾರೆ.