Saturday, May 30, 2026
HomeTechಡೇಟಿಂಗ್ ಆ್ಯಪ್‌ಗಳಲ್ಲಿ ಹುಟ್ಟಿದ ಡಿಜಿಟಲ್ ಪ್ರೀತಿ!

ಡೇಟಿಂಗ್ ಆ್ಯಪ್‌ಗಳಲ್ಲಿ ಹುಟ್ಟಿದ ಡಿಜಿಟಲ್ ಪ್ರೀತಿ!

ಇಂದಿನ ತಂತ್ರಜ್ಞಾನ ಯುಗದಲ್ಲಿ ಪ್ರೀತಿ ಕೂಡ ತನ್ನ ಸ್ವರೂಪವನ್ನು ಬದಲಿಸಿಕೊಂಡಿದೆ. ಒಮ್ಮೆ ಸಹಜವಾಗಿ ಬೆಳೆಯುತ್ತಿದ್ದ ಸಂಬಂಧಗಳು ಇಂದು ಮೊಬೈಲ್‌ ಪರದೆಗಳೊಳಗೆ ಸೀಮಿತವಾಗುತ್ತಿವೆ.

ಲಾಗಿನ್ ಆಗಿ, ಪ್ರೊಫೈಲ್‌ ನೋಡಿ, ಲೈಕ್ ಮಾಡಿ, ಮ್ಯಾಚ್ ಆಗಿ ಇಷ್ಟರಲ್ಲೇ ಪ್ರೀತಿಯ ಪ್ರಾರಂಭ. Tinder, Bumble, Hinge, OkCupid, Aisle ಮುಂತಾದ ಡೇಟಿಂಗ್ ಆ್ಯಪ್‌ಗಳು ಈ ಹೊಸ ಪ್ರೀತಿಯ ವ್ಯಾಖ್ಯಾನವನ್ನು ರೂಪಿಸುತ್ತಿವೆ. ಆದರೆ, ಈ ಡಿಜಿಟಲ್ ಪ್ರೀತಿಯ ಹಿಂದೆ ಅಡಗಿರುವ ನಿಜಸ್ವರೂಪವೇನು ಎಂಬುದು ಮಾತ್ರ ತಕ್ಷಣ ಅರ್ಥವಾಗದು.

ಡೇಟಿಂಗ್ ಆ್ಯಪ್‌ಗಳು ಒಂಟಿತನಕ್ಕೆ ಪರಿಹಾರವೆಂಬ ಭ್ರಮೆ ಮೂಡಿಸಿದರೂ, ಹಲವಾರು ಅಧ್ಯಯನಗಳು ಆತಂಕಕಾರಿ ಚಿತ್ರಣವನ್ನು ನೀಡುತ್ತಿವೆ. 2024ರಿಂದ 2025ರ ನಡುವೆ ಭಾರತದಲ್ಲಿ ಸುಮಾರು 9.8 ಕೋಟಿ ಜನ ಈ ಆ್ಯಪ್‌ಗಳನ್ನು ಬಳಸುತ್ತಿದ್ದಾರೆ.

 ಅದೇ ಸಮಯದಲ್ಲಿ ಶೇ.73 ಬಳಕೆದಾರರು ಯಾವುದಾದರೊಂದು ರೀತಿಯ ಕಿರುಕುಳ ಅನುಭವಿಸಿರುವುದು, ಯುವತಿಯರಲ್ಲಿ ಶಾರೀರಿಕ ಹಾನಿಯ ಬೆದರಿಕೆ ಎದುರಾದದ್ದು ಈ ಪ್ರಪಂಚದ ಅಪಾಯದ ಮುಖವನ್ನೂ ತೆರೆದಿಡುತ್ತದೆ.

ಡೇಟಿಂಗ್ ಆ್ಯಪ್‌ಗಳ ಮೂಲಕ ನಡೆದ ಮೊದಲ ಭೇಟಿಗಳಲ್ಲಿಯೇ ಲೈಂಗಿಕ ದೌರ್ಜನ್ಯ ಪ್ರಕರಣಗಳ ಪ್ರಮಾಣವೂ ಗಮನಾರ್ಹವಾಗಿದೆ. 2020ರ ಬಳಿಕ ಈ ಆ್ಯಪ್‌ಗಳ ಬಳಕೆ ಶೇ.120ರಷ್ಟು ಏರಿಕೆಯಾಗಿದೆ. ಮಹಾನಗರಗಳಷ್ಟೇ ಅಲ್ಲದೆ ಸಣ್ಣ ಪಟ್ಟಣಗಳಲ್ಲಿಯೂ ಈ ಟ್ರೆಂಡ್ ವೇಗವಾಗಿ ವ್ಯಾಪಿಸುತ್ತಿದೆ.

National Crime Records Bureau ವರದಿಗಳು ಮತ್ತೊಂದು ಕಠಿಣ ಸತ್ಯವನ್ನು ಹೇಳುತ್ತವೆ. ಡೇಟಿಂಗ್ ಆ್ಯಪ್‌ಗಳ ಮೂಲಕ ಮೋಸ, ಶೋಷಣೆ, ಬ್ಲ್ಯಾಕ್‌ಮೇಲ್ ಪ್ರಕರಣಗಳು ಸಾವಿರಾರು ಸಂಖ್ಯೆಯಲ್ಲಿ ದಾಖಲಾಗಿವೆ. ವಿಶೇಷವಾಗಿ sextortion ಪ್ರಕರಣಗಳಲ್ಲಿ ಯುವಜನತೆಯೇ ಹೆಚ್ಚು ಬಲಿಯಾಗುತ್ತಿರುವುದು ಗಮನಾರ್ಹ.

ಡಿಜಿಟಲ್ ಪ್ರೀತಿಯ ಮತ್ತೊಂದು ಕತ್ತಲೆ ಮುಖವೆಂದರೆ ಪ್ರೊಫೈಲ್‌ನಲ್ಲಿ ಕಾಣುವ ವ್ಯಕ್ತಿ ನಿಜವಾಗಿಯೂ ಅವರೇ ಆಗಿರುವ ಖಾತರಿ ಇಲ್ಲ. ಚಾಟ್‌ನಲ್ಲಿ ತೋರಿಸುವ ವ್ಯಕ್ತಿತ್ವವೂ ನೈಜವಾಗಿರಲೇಬೇಕೆಂದಿಲ್ಲ!

ಹೀಗಾಗಿ, ಈ ಪ್ರಪಂಚವನ್ನು ಜಾಗ್ರತೆಯಿಂದ ಎದುರಿಸುವುದು ಅಗತ್ಯ. ನಿಜವಾದ ಮಾಹಿತಿಯನ್ನು ಮಾತ್ರ ಹಂಚಿಕೊಳ್ಳುವುದು, ಮೊದಲ ಭೇಟಿಯನ್ನು ಸಾರ್ವಜನಿಕ ಸ್ಥಳದಲ್ಲಿ ನಿಗದಿಪಡಿಸುವುದು, ಅಪರಿಚಿತರನ್ನು ತಕ್ಷಣ ನಂಬದಿರುವುದು ಇವು ಸಣ್ಣ ಮುನ್ನೆಚ್ಚರಿಕೆಗಳಾದರೂ ದೊಡ್ಡ ಅಪಾಯಗಳನ್ನು ತಪ್ಪಿಸಬಹುದು.

ಯಾರಾದರೂ ಫೋಟೋ, ಹಣ ಅಥವಾ ಅಸಭ್ಯ ಬೇಡಿಕೆಗಳನ್ನು ಮುಂದಿರಿಸಿದರೆ ಸ್ಪಷ್ಟವಾಗಿ “ಇಲ್ಲ” ಎಂದು ಹೇಳುವ ಧೈರ್ಯವೂ ಅಗತ್ಯ. ಆದ್ದರಿಂದ, ಡೇಟಿಂಗ್ ಆ್ಯಪ್‌ಗಳನ್ನು ಬಳಸುವಾಗ ಜಾಗ್ರತೆ, ಜವಾಬ್ದಾರಿ ಮತ್ತು ವಿವೇಕವೇ ನಮ್ಮ ದೊಡ್ಡ ರಕ್ಷಣೆಯಾಗಲಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share