ಅಂಕೋಲಾ: ಜಿಐ (Geographical Indication) ಮಾನ್ಯತೆ ಪಡೆದಿರುವ ಅಂಕೋಲಾದ ಪ್ರಸಿದ್ಧ ಕರಿ ಇಶಾಡ್ ಮಾವು ಇದೀಗ ಜಾಗತಿಕ ಮಾರುಕಟ್ಟೆಯತ್ತ ಹೆಜ್ಜೆಯಿಟ್ಟಿದೆ. ಮೊದಲ ಬಾರಿಗೆ ಈ ವಿಶೇಷ ತಳಿಯ ಮಾವಿನ ಹಣ್ಣುಗಳನ್ನು ಇಟಲಿಗೆ ರಫ್ತು ಮಾಡಲು ಸಿದ್ಧತೆ ನಡೆಯುತ್ತಿದ್ದು, ಆರಂಭಿಕ ಹಂತವಾಗಿ 25 ಕೆ.ಜಿ. ಮಾವುಗಳನ್ನು ಮಾದರಿ ರೂಪದಲ್ಲಿ ಕಳುಹಿಸಲಾಗುತ್ತಿದೆ.
ಇದರ ಬೆನ್ನಲ್ಲೇ ಫಿಜಿ ಹಾಗೂ ನ್ಯೂಜಿಲೆಂಡ್ ದೇಶಗಳಿಗೂ ಮುಂದಿನ ದಿನಗಳಲ್ಲಿ ರಫ್ತು ಮಾಡುವ ಯೋಜನೆ ರೂಪಿಸಲಾಗಿದೆ. ಇಶಾಡ್ ಮಾವಿಗೆ ಜಿಐ ಮಾನ್ಯತೆ ದೊರಕಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಂಕೋಲಾದ ರೈತ ಮಾಧವ ಇಂದ್ರ ಗೌಡ ಇದೀಗ ವಿದೇಶಿ ಮಾರುಕಟ್ಟೆ ತಲುಪಿಸುವ ಕಾರ್ಯಕ್ಕೂ ಮುಂದಾಗಿದ್ದಾರೆ.
ಬೆಂಗಳೂರು ಮೂಲದ ‘ಡೋವಿಶಾ’ ರಫ್ತು ಸಂಸ್ಥೆ ಯುರೋಪ್ ಹಾಗೂ ಫಾರ್ ಈಸ್ಟ್ ರಾಷ್ಟ್ರಗಳಲ್ಲಿ ಇಶಾಡ್ ಮಾವನ್ನು ಪರಿಚಯಿಸಲು ಆಸಕ್ತಿ ತೋರಿದೆ. ಪ್ರಥಮ ಹಂತವಾಗಿ ಸಣ್ಣ ಪ್ರಮಾಣದ ಮಾದರಿ ರಫ್ತು ಮಾಡಲಾಗುತ್ತಿದೆ ಎಂದು ಮಾಧವ ಗೌಡ ತಿಳಿಸಿದ್ದಾರೆ.
ಈ ವರ್ಷ ಹವಾಮಾನ ವೈಪರೀತ್ಯದಿಂದ ಇಶಾಡ್ ಮಾವಿನ ಇಳುವರಿ ಕುಸಿದಿದೆ. ಅತಿಯಾದ ಬಿಸಿಲಿನ ಪರಿಣಾಮ ಹಲವಾರು ಹಣ್ಣುಗಳು ಉದುರಿವೆ. ಕೆಲವರು ಮುಂಗಡ ಕೊಯ್ಲು ಹಾಗೂ ಕೃತಕ ಹಣ್ಣಾಗಿಸುವ ಕ್ರಮ ಅನುಸರಿಸಿದ್ದರಿಂದ ಹಣ್ಣಿನ ಗಾತ್ರ ಹಾಗೂ ಗುಣಮಟ್ಟಕ್ಕೂ ಹೊಡೆತ ಬಿದ್ದಿದೆ. ಆದರೂ ಇಶಾಡ್ ಮಾವಿಗೆ ಬಹುಕಾಲದ ಬಳಿಕ ಸಿಗಬೇಕಾದ ಮಾನ್ಯತೆ ಸಿಗುತ್ತಿರುವುದು ಸಂತೋಷ ತಂದಿದೆ ಎಂದಿದ್ದಾರೆ.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸತೀಶ್ ಮಾಹಿತಿ ನೀಡಿ, 2025 ಡಿಸೆಂಬರ್‌ನಿಂದ ನಿರಂತರ ಉಷ್ಣ ಹವಾಮಾನ ಇದ್ದ ಕಾರಣ ಸರಿಯಾದ ಪರಾಗಸ್ಪರ್ಶವಾಗಲಿಲ್ಲ. ಹೀಗಾಗಿ ಫಸಲು ಗಣನೀಯವಾಗಿ ಕುಸಿದಿದೆ ಎಂದು ತಿಳಿಸಿದ್ದಾರೆ.
ಅಂಕೋಲಾ ತಾಲೂಕಿನ ಸುಮಾರು 250 ಹೆಕ್ಟೇರ್ ಪ್ರದೇಶದಲ್ಲಿ ಕರಿ ಇಶಾಡ್ ಮಾವು ಬೆಳೆಯಲಾಗುತ್ತಿದ್ದು, ಸಂಪೂರ್ಣ ಇಶಾಡ್ ತೋಟಗಳ ವಿಸ್ತೀರ್ಣ ಕೇವಲ 50 ಹೆಕ್ಟೇರ್‌ಗಳಷ್ಟಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ತನ್ನ ವಿಶಿಷ್ಟ ರುಚಿ ಹಾಗೂ ಗಟ್ಟಿಯಾದ ತಿರುಳಿನಿಂದ ಪ್ರಸಿದ್ಧಿಯಾಗಿರುವ ಇಶಾಡ್ ಮಾವು ಬ್ರಿಟಿಷರ ಕಾಲದಲ್ಲಿಯೇ ಖ್ಯಾತಿ ಪಡೆದಿತ್ತು. ಅಂದಿನ ಕಾಲದಲ್ಲಿ ಇದರ ಪಲ್ಪ್ ಹಾಗೂ ಕ್ಯಾನಿಂಗ್ ಘಟಕ ಸ್ಥಾಪಿಸಿ ಇಂಗ್ಲೆಂಡ್‌ಗೆ ರಫ್ತು ಮಾಡಲಾಗುತ್ತಿತ್ತು. ಆದರೆ ತಾಜಾ ಹಣ್ಣಿನ ರೂಪದಲ್ಲಿ ಜಾಗತಿಕ ಮಾರುಕಟ್ಟೆ ಪ್ರವೇಶಿಸುತ್ತಿರುವುದು ಇದೇ ಮೊದಲು.