ಕಾರವಾರ: ತಾಲೂಕಿನ ಶಿರವಾಡ ಜಾಂಬಾ ಕ್ರಾಸ್ ಸಮೀಪದ ಕಿರಾಣಿ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ.
ಸೀಮಾ ರಾಮದಾಸ್ ಶೇಟ್ ಅವರಿಗೆ ಸೇರಿದ “ಸಾಗರ್ ಜನರಲ್ ಸ್ಟೋರ್” ಅಂಗಡಿಯಲ್ಲಿ ರಾತ್ರಿ ಸುಮಾರು 1 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಎಲೆಕ್ಟ್ರಿಕ್ ಮೀಟರ್ ಬೋರ್ಡ್ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡು ಬಳಿಕ ಸಂಪೂರ್ಣ ಅಂಗಡಿಗೆ ವ್ಯಾಪಿಸಿದೆ ಎಂದು ತಿಳಿದುಬಂದಿದೆ.
ಘಟನೆ ನಡುರಾತ್ರಿ ಸಂಭವಿಸಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಅಂಗಡಿಯಲ್ಲಿದ್ದ ಕಿರಾಣಿ ಸಾಮಗ್ರಿಗಳು ಹಾಗೂ ಇತರೆ ವಸ್ತುಗಳು ಬೆಂಕಿಗೆ ಆಹುತಿಯಾಗಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.
ಸ್ಥಳೀಯರು ತಕ್ಷಣ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದು ಹೆಚ್ಚಿನ ಹಾನಿಯಾಗುವುದನ್ನು ತಪ್ಪಿಸಿದರು.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಮಹಾಬಲೇಶ್ವರ್ ಎನ್. ಗೌಡ ಹಾಗೂ ಸಿಬ್ಬಂದಿಗಳಾದ ಸಪ್ನಿಲ್ ಪೆಡ್ನೇಕರ್, ರವಿರಾಜ್ ಭೂತೆ, ಟೋನಿ ಬಾರಬೋಜ, ದೀಪಕ್ ಅಂಕೋಲೇಕರ್ ಮತ್ತು ಚಂದನ್ ದಳವಾಯಿ ಭಾಗವಹಿಸಿದ್ದರು.