Saturday, May 30, 2026
HomeLocal Newsಹಣ ದುರುಪಯೋಗ ಪ್ರಕರಣ: ಕೆಡಿಸಿಸಿ ಬ್ಯಾಂಕ್ ಮಾಜಿ ಎಜಿಎಂಗೆ ನಿರೀಕ್ಷಣಾ ಜಾಮೀನು

ಹಣ ದುರುಪಯೋಗ ಪ್ರಕರಣ: ಕೆಡಿಸಿಸಿ ಬ್ಯಾಂಕ್ ಮಾಜಿ ಎಜಿಎಂಗೆ ನಿರೀಕ್ಷಣಾ ಜಾಮೀನು

ಕುಮಟಾ: ಕುಮಟಾ ತಾಲೂಕಿನ ಬರಗದ್ದೆ ಗ್ರಾಮೀಣ ಸೇವಾ ಸಹಕಾರಿ ಸಂಘದಲ್ಲಿ ನಡೆದ ಬಹುಕೋಟಿ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಡಿಸಿಸಿ ಬ್ಯಾಂಕ್ ಶಿರಸಿ ಶಾಖೆಯ ಮಾಜಿ ಸಹಾಯಕ ಮಹಾಪ್ರಬಂಧಕ (AGM) ರಾಮ ಗಣಪತಿ ಭಾಗ್ವತ್ ಅವರಿಗೆ ಕಾರವಾರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಕಾರವಾರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಬಿ. ಅವರು ಮೇ 8ರಂದು ಈ ಆದೇಶ ಹೊರಡಿಸಿದ್ದಾರೆ.

ಪ್ರಕರಣದ ಹಿನ್ನೆಲೆ:

ಕುಮಟಾ ತಾಲೂಕಿನ ಬರಗದ್ದೆ ಗ್ರಾಮೀಣ ಸೇವಾ ಸಹಕಾರಿ ಸಂಘದಲ್ಲಿ 2017ರಿಂದ 2020ರ ಅವಧಿಯಲ್ಲಿ ಸುಮಾರು 7.23 ಕೋಟಿ ರೂ ಹಣ ದುರುಪಯೋಗ ನಡೆದಿದೆ ಎಂಬ ಆರೋಪದಡಿ ಕುಮಟಾ ಪೊಲೀಸ್ ಠಾಣೆಯಲ್ಲಿ 2023ರಲ್ಲಿ ಪ್ರಕರಣ ದಾಖಲಾಗಿತ್ತು.

ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಕ್ಲರ್ಕ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಲಾಗಿತ್ತು.

ತನಿಖೆಯ ವೇಳೆ, ಕೆಡಿಸಿಸಿ ಬ್ಯಾಂಕ್ ಶಿರಸಿ ಶಾಖೆಯಲ್ಲಿ ಎಜಿಎಂ ಆಗಿದ್ದ ರಾಮ ಗಣಪತಿ ಭಾಗ್ವತ್ ಅವರು ಆರೋಪಿಗಳಿಗೆ ಹಣ ದುರುಪಯೋಗ ಮಾಡಲು ಸಹಕಾರ ನೀಡಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ ಎಂದು ಸಿಐಡಿ ನ್ಯಾಯಾಲಯಕ್ಕೆ ತಿಳಿಸಿತ್ತು.

ಅರ್ಜಿದಾರರ ಪರ ವಕೀಲರು, ರಾಮ ಗಣಪತಿ ಭಾಗ್ವತ್ ನಿರಪರಾಧಿಯಾಗಿದ್ದು, ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ವಾದಿಸಿದರು. ಅವರ ಹೆಸರು ಮೂಲ ದೂರಿನಲ್ಲಿ ಅಥವಾ ಎಫ್‌ಐಆರ್‌ನಲ್ಲಿ ಇಲ್ಲ. ತನಿಖಾಧಿಕಾರಿಗಳು ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ಬಂಧನ ಭೀತಿ ಎದುರಾಗಿತ್ತು ಎಂದು ತಿಳಿಸಿದರು.

ಇನ್ನೊಂದೆಡೆ ಸರ್ಕಾರದ ಪರ ವಕೀಲರು, ಆರೋಪಿಗಳಿಗೆ ಸಹಕಾರ ನೀಡಿರುವ ಗಂಭೀರ ಆರೋಪ ಇರುವುದರಿಂದ ಆರೋಪಿಯನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವುದು ಅಗತ್ಯ ಎಂದು ವಾದಿಸಿದರು. ಜಾಮೀನು ನೀಡಿದರೆ ಸಾಕ್ಷ್ಯ ನಾಶಪಡಿಸುವ ಅಥವಾ ಸಾಕ್ಷಿದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಹೇಳಿದರು.

ನ್ಯಾಯಾಲಯವು ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿ, ಅರ್ಜಿದಾರರ ವಿರುದ್ಧ ನೇರ ಆರೋಪಗಳು ಎಫ್‌ಐಆರ್‌ನಲ್ಲಿ ಇಲ್ಲ ಎಂಬುದನ್ನು ಗಮನಿಸಿ, ತನಿಖೆಗೆ ಸಹಕರಿಸುವ ಷರತ್ತಿನಡಿ ನಿರೀಕ್ಷಣಾ ಜಾಮೀನು ನೀಡಬಹುದು ಎಂದು ಅಭಿಪ್ರಾಯಪಟ್ಟಿತು.

ವಿಧಿಸಿದ ಷರತ್ತುಗಳು:

ನ್ಯಾಯಾಲಯ ರಾಮ ಗಣಪತಿ ಭಾಗ್ವತ್ ಅವರಿಗೆ 1 ಲಕ್ಷ ರೂ ವೈಯಕ್ತಿಕ ಬಾಂಡ್ ಹಾಗೂ ಸಮಾನ ಮೊತ್ತದ ಓರ್ವ ಜಾಮೀನುದಾರರ ಭದ್ರತೆಯ ಮೇಲೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಅಷ್ಟೇ ಅಲ್ಲದೆ, ತನಿಖೆಗೆ ಸಂಪೂರ್ಣ ಸಹಕರಿಸಬೇಕು, ಸಾಕ್ಷ್ಯ ನಾಶಪಡಿಸಬಾರದು, ಸಾಕ್ಷಿದಾರರ ಮೇಲೆ ಪ್ರಭಾವ ಬೀರುವಂತಿಲ್ಲ ಹಾಗೂ ಪ್ರತಿ 15 ದಿನಕ್ಕೊಮ್ಮೆ ಪೊಲೀಸ್ ಠಾಣೆಗೆ ಹಾಜರಾಗಬೇಕು ಎಂಬ ಷರತ್ತುಗಳನ್ನು ವಿಧಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share