ಬನವಾಸಿ: ಮನೆ ಎದುರು ನಿಲ್ಲಿಸಿದ್ದ ಬೈಕ್‌ನ್ನು ಕಳ್ಳರು ಕದ್ದೊಯ್ದ ಘಟನೆ ಬನವಾಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹಾನಗಲ್ ತಾಲೂಕಿನ ಶಿರಗೋಡ ನಿವಾಸಿ ಪೀರಸಾಬ ಅಬ್ದುಲ್ ರಹೀಂ ಮಲ್ಲಿಗಾರ ಎಂಬುವರು ಸುಮಾರು ಒಂದು ತಿಂಗಳ ಹಿಂದೆ ಬಜಾಜ್ ಪಲ್ಸರ್ ಮೋಟಾರ್‌ಸೈಕಲ್ ಖರೀದಿಸಿದ್ದರು. ಕೆಎ-27-ಇಎಕ್ಸ್-0834 ನೋಂದಣಿ ಸಂಖ್ಯೆಯ ಈ ಬೈಕ್‌ನ್ನು ಮೇ 1ರಂದು ರಾತ್ರಿ ಹಮಾಲಿ ಕೆಲಸಕ್ಕೆ ಬರುವ ಸೋಹೇಲ್ ಎಂಬಾತನಿಗೆ ಮನೆಗೆ ತೆರಳಲು ನೀಡಿದ್ದಾರೆ.
ಸೋಹೇಲ್ ಬೈಕ್‌ನ್ನು ಬೆಳ್ಳನಕೇರಿ ಗ್ರಾಮದಲ್ಲಿರುವ ತನ್ನ ಮನೆಯ ಕಂಪೌಂಡ್ ಒಳಗೆ ಹ್ಯಾಂಡಲ್ ಲಾಕ್ ಮಾಡಿ ನಿಲ್ಲಿಸಿದ್ದರು. ಆದರೆ ಮೇ 2ರಂದು ಬೆಳಿಗ್ಗೆ ನೋಡಿದಾಗ ಬೈಕ್ ನಾಪತ್ತೆಯಾಗಿತ್ತು.
ಈ ಕುರಿತು ಪೀರಸಾಬ ಹಾಗೂ ಸೋಹೇಲ್ ಇಬ್ಬರೂ ಹುಡುಕಾಟ ನಡೆಸಿದರೂ ಬೈಕ್ ಪತ್ತೆಯಾಗಿಲ್ಲ. ರಾತ್ರಿ 11.30ರಿಂದ ಬೆಳಿಗ್ಗೆ 7 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಬೈಕ್ ಕಳವು ಮಾಡಿಕೊಂಡು ಹೋಗಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ಸುಮಾರು 85 ಸಾವಿರ ರೂ ಮೌಲ್ಯದ ಬೈಕ್ ಕಳುವಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಬನವಾಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.