ಭಟ್ಕಳ: ಐಪಿಎಲ್‌ನಲ್ಲಿ Royal Challengers Bengaluru ತಂಡದ ಗೆಲುವಿನ ಸಂಭ್ರಮಾಚರಣೆಯ ವೇಳೆ ಬಾರ್‌ನಲ್ಲಿ ಗಲಾಟೆ ನಡೆಸಿ ಹಲ್ಲೆ ಮಾಡಿದ ಆರೋಪದಡಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೌಥನಿ ನಿವಾಸಿ ರಮೇಶ್ ವಸಂತ ನಾಯ್ಕ ಅವರು ನೀಡಿದ ದೂರಿನ ಪ್ರಕಾರ, ಮೇ 10ರಂದು ರಾತ್ರಿ ಭಟ್ಕಳದ ಗೊರಟೆ ಕ್ರಾಸ್‌ನಲ್ಲಿರುವ ಆರಾಧನಾ ಬಾರ್‌ನಲ್ಲಿ ಈ ಘಟನೆ ನಡೆದಿದೆ.
ಆರೋಪಿತರಾದ ಮಹೇಂದ್ರ ಶನಿಯಾರ ನಾಯ್ಕ, ಮಂಜುನಾಥ ಶನಿಯಾರ ನಾಯ್ಕ, ಚಂದನ ಮಾರುತಿ ನಾಯ್ಕ, ರಾಜೇಶ ನಾಗಪ್ಪ ನಾಯ್ಕ ಹಾಗೂ ಇನ್ನೋರ್ವ ವ್ಯಕ್ತಿ ಬಾರ್‌ಗೆ ಬಂದು ಮದ್ಯಪಾನ ಮಾಡುತ್ತಿದ್ದರು. ಈ ವೇಳೆ ಆರ್‌ಸಿಬಿ ಪಂದ್ಯ ಗೆದ್ದ ಹಿನ್ನೆಲೆ ಮಹೇಂದ್ರ ನಾಯ್ಕ ಅವರು ಬಿಯರ್ ಬಾಟಲಿ ಎತ್ತಿ ಚಿಯರ್ಸ್ ಮಾಡಿ, ಬಿಯರ್‌ನ್ನು ಟೇಬಲ್ ಮೇಲೆ ಚೆಲ್ಲಿದ್ದಾರೆ.
ಬಾರ್ ಸಿಬ್ಬಂದಿ ಈ ರೀತಿ ವರ್ತಿಸಬಾರದು ಎಂದು ಸೂಚಿಸಿ, ಬಳಿಕ ಬಾರ್ ಮುಚ್ಚುವ ಸಮಯವಾಗಿರುವುದರಿಂದ ಹಣ ಪಾವತಿಸುವಂತೆ ತಿಳಿಸಿದಾಗ ಆರೋಪಿತರು ಆಕ್ರೋಶಗೊಂಡಿದ್ದಾರೆ. ಮತ್ತೊಂದು ಬಿಯರ್ ನೀಡುವಂತೆ ಕೇಳಿದಾಗ, ರಾತ್ರಿ 12 ಗಂಟೆಯ ಬಳಿಕ ಪಾರ್ಸೆಲ್ ಮಾತ್ರ ನೀಡಲಾಗುತ್ತದೆ ಎಂದು ಹೇಳಿದ್ದಕ್ಕೆ ಗಲಾಟೆ ಆರಂಭವಾಗಿದೆ.
ಆರೋಪಿ ಮಹೇಂದ್ರ ಅವಾಚ್ಯ ಶಬ್ದಗಳಿಂದ ನಿಂದಿಸಿ ಬಿಯರ್ ಬಾಟಲಿ ಒಡೆದಿದ್ದಲ್ಲದೆ, ಚಂದನ ನಾಯ್ಕ ಹಾಗೂ ಇತರರು ಸೇರಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಿಯರ್ ಬಾಟಲಿಯಿಂದ ಹಲ್ಲೆ ಮಾಡಲು ಯತ್ನಿಸಿದ್ದು, ತಡೆಯಲು ಬಂದ ಯಶೋಧರ ನಾಯ್ಕ ಅವರ ಮೇಲೂ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.
ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.