ಯುವಕಸಾ*ವು, ಮತ್ತೋರ್ವನಸ್ಥಿತಿಗಂಭೀರ
ಯಲ್ಲಾಪುರ: ತಾಲೂಕಿನ ಉಪಳೇಶ್ವರ ಸಮೀಪ ಸಂಭವಿಸಿದ ಭೀಕರ ಬೈಕ್ ಅಪಘಾತದಲ್ಲಿ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ನಡೆದಿದೆ.
ಮುಂಡಗೋಡ ತಾಲೂಕಿನ ಕರ್ಲಿ ಸಮೀಪದ ಪ್ರದೀಪ (26) ಹಾಗೂ ಮನ್ವತ್ (33) ಅವರು ಬೈಕ್‌ನಲ್ಲಿ ಶಿರಸಿ ಕಡೆಗೆ ತೆರಳುತ್ತಿದ್ದರು. ಯಲ್ಲಾಪುರ-ಶಿರಸಿ ರಸ್ತೆಯ ಉಪಳೇಶ್ವರ ದಾಟಿ ಮಳಲಗಾಂ ಬಳಿ ತಲುಪುತ್ತಿದ್ದಂತೆ ಬೈಕ್ ಸ್ಕಿಡ್ ಆಗಿ ನಿಯಂತ್ರಣ ತಪ್ಪಿದೆ ಎನ್ನಲಾಗಿದೆ.
ಅಪಘಾತದ ತೀವ್ರತೆಗೆ ಬೈಕ್‌ನಲ್ಲಿದ್ದ ಇಬ್ಬರೂ ರಸ್ತೆ ಬದಿಗೆ ಎಸೆಯಲ್ಪಟ್ಟಿದ್ದು, ಸವಾರ ಪ್ರದೀಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿಂಬದಿ ಸವಾರ ಮನ್ವತ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತ ಗಮನಿಸಿದ ಸ್ಥಳೀಯರು ತಕ್ಷಣ ನೆರವಿಗೆ ಧಾವಿಸಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮನ್ವತ್ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.