ಸಿದ್ದಾಪುರದಲ್ಲಿ10,340 ಕುಟುಂಬಗಳು ಆತಂಕದಲ್ಲಿ | ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲು ನಿರ್ಧಾರ
ಸಿದ್ದಾಪುರ: ಅರಣ್ಯ ಹಕ್ಕು ಕಾಯಿದೆಯಡಿ ನಡೆಯುತ್ತಿರುವ ಜಂಟಿ ಮಹಜರ್ ಪ್ರಕ್ರಿಯೆಯಲ್ಲಿ ಗಂಭೀರ ಲೋಪಗಳಾಗಿವೆ ಎಂದು ಆರೋಪಿಸಿ ಸಿದ್ದಾಪುರ ತಾಲೂಕಿನ ಅರಣ್ಯವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರದ ನೀತಿಯನ್ನು ಸಮರ್ಪಕವಾಗಿ ಜಾರಿಗೆ ತರಬೇಕೆಂದು ಒತ್ತಾಯಿಸಿ ಮೇ 20ರಂದು ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಚರ್ಚೆ ನಡೆಸಲು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ತೀರ್ಮಾನಿಸಿದೆ.
ಪಟ್ಟಣದ ರಾಘವೇಂದ್ರ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ವಹಿಸಿದ್ದರು. ವೇದಿಕೆಯ ಪ್ರಧಾನ ಸಂಚಾಲಕ ಮಾಬ್ಲೇಶ್ವರ ನಾಯ್ಕ ಬೇಡ್ಕಣಿ ಮಾಹಿತಿ ನೀಡಿ, ತಪ್ಪಾದ ಮಹಜರ್ ಪ್ರಕ್ರಿಯೆಯಿಂದ ತಾಲೂಕಿನ ಸುಮಾರು 10,340 ಅರಣ್ಯವಾಸಿ ಕುಟುಂಬಗಳು ಆತಂಕಕ್ಕೊಳಗಾಗಿವೆ ಎಂದು ಹೇಳಿದರು.
ರಾಜ್ಯ ಮಟ್ಟದ ಅರಣ್ಯ ಹಕ್ಕು ಕಾಯಿದೆ ಉಸ್ತುವಾರಿ ಸಮಿತಿಯು ಜನವರಿ 6ರಂದು ನಡೆಸಿದ ಸಭೆಯಲ್ಲಿ, ದಾಖಲಾತಿಗಳ ಕೊರತೆಯಿಂದ ತಿರಸ್ಕೃತವಾದ ಅರ್ಜಿಗಳಿಗೆ ಅರಣ್ಯ, ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರನ್ನು ಒಳಗೊಂಡ ತಂಡದಿಂದ ಮಹಜರ್ ನಡೆಸಿ, ಅದನ್ನು ದಾಖಲೆಯಾಗಿ ಪರಿಗಣಿಸಬೇಕು ಎಂದು ಸೂಚಿಸಿತ್ತು. ಆದರೆ, ಪ್ರಸ್ತುತ ನಡೆಯುತ್ತಿರುವ ಮಹಜರ್ ಪ್ರಕ್ರಿಯೆಯಲ್ಲಿ ಆ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿಲ್ಲ ಎಂದು ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು.
ಮಹಜರ್ ವೇಳೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಹಾಜರಿರದೇ ಇರುವುದು, ಕೆಲವೆಡೆ ಅರ್ಜಿದಾರರ ಸಹಿ ಪಡೆಯದೇ ಇರುವುದು, ಮಾಹಿತಿ ಪೂರ್ಣಗೊಳಿಸದ ದಾಖಲೆಗಳನ್ನು ತೆಗೆದುಕೊಂಡು ಹೋಗುವುದು, ಅಧಿಕಾರಿಗಳ ಸಹಿಯಿಲ್ಲದ ಪ್ರತಿಗಳನ್ನು ಬಳಸುವುದು ಸೇರಿದಂತೆ ಹಲವು ಅಕ್ರಮಗಳ ಕುರಿತು ಸಭೆಯಲ್ಲಿ ಅರಣ್ಯವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳೀಯ ಮುಖಂಡರನ್ನು ಒಳಗೊಳ್ಳದೇ ಯಾಂತ್ರಿಕವಾಗಿ ಮಹಜರ್ ನಡೆಸಲಾಗುತ್ತಿದೆ. ಅರಣ್ಯವಾಸಿಗಳಿಗೆ ಪೂರ್ವ ಸೂಚನೆ ನೀಡದೇ ಸ್ಥಳ ಪರಿಶೀಲನೆ ಮಾಡಲಾಗುತ್ತಿದೆ. ಅರ್ಜಿಯಲ್ಲಿ ಉಲ್ಲೇಖಿಸಿದ ಸಾಗುವಳಿ ಪ್ರದೇಶವನ್ನು ಪರಿಗಣಿಸದೇ ಜಿಪಿಎಸ್ ಅಳತೆಯನ್ನು ಮಾತ್ರ ದಾಖಲಿಸಲಾಗುತ್ತಿದೆ. ಜನವಸತಿ ಸಂಬಂಧಿತ ಸಾಂದರ್ಭಿಕ ದಾಖಲೆಗಳನ್ನೂ ಮಹಜರ್‌ನಲ್ಲಿ ಸೇರಿಸಲಾಗುತ್ತಿಲ್ಲ ಎಂದು ಸಭೆಯಲ್ಲಿ ಗಂಭೀರ ಆರೋಪಗಳು ಕೇಳಿಬಂದವು.
ಸಭೆಯಲ್ಲಿ ಮಹಾಬಲೇಶ್ವರ ನಾಯ್ಕ ಬೇಡ್ಕಣಿ, ಕೆ.ಟಿ. ನಾಯ್ಕ, ದಿವಾಕರ್ ನಾಯ್ಕ ಬಾಳೆಜಡ್ಡಿ, ಹರಿಹರ ನಾಯ್ಕ ಓಂಕಾರ, ಮಂಜುನಾಥ ಮಡಿವಾಳ ಕಿಲಾರ, ಚೌಡು ಗೌಡ ಕಿತ್ತೋಳ್ಳಿ, ಸುಧಾಕರ ಮಡಿವಾಳ ಬಿಳಗಿ, ಶ್ರೀಧರ ಹೆಗಡೆ ಕೆರೆಮನೆ ಸೇರಿದಂತೆ ಹಲವರು ಮಾತನಾಡಿ ಜಿಲ್ಲಾಡಳಿತದ ಕ್ರಮದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಎಂ.ಎಸ್. ನಾಯ್ಕ ನರಮುಂಡಗಿ, ಸಂಕೇತ ನಾಯ್ಕ ಹಲಗೇರಿ, ವಿದ್ಯಾ ನಾಯ್ಕ ಹಾರ್ಸಿಕಟ್ಟ, ರಾಜು ನಾಯ್ಕ ಕ್ಯಾದಗಿ, ಮಂಜು ಹುತ್ಗಾರ, ತಿಮ್ಮಪ್ಪ ನಾಯ್ಕ ವಾಟಗಾರ, ಅಬ್ದುಲ್ ಸುಭಾನ ಅರೆಂದೂರು, ಕಾರ್ತಿಸ್ ಫರ್ನಾಂಡಿಸ್ ಸೇರಿದಂತೆ ಅನೇಕರು ಸಭೆಯಲ್ಲಿ ಭಾಗವಹಿಸಿದ್ದರು.
ಮಹಜರ್ ಪ್ರಕ್ರಿಯೆಯಲ್ಲಿನ ಲೋಪಗಳ ಕುರಿತು ಮೇ 20ರಂದು ಸಿದ್ದಾಪುರ ತಹಸೀಲ್ದಾರ್ ಸಮ್ಮುಖದಲ್ಲಿ ಚರ್ಚೆ ನಡೆಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದು ಹೋರಾಟಗಾರರ ವೇದಿಕೆ ತಿಳಿಸಿದೆ.