ಯಲ್ಲಾಪುರದಲ್ಲಿ ಮಾಜಿ ಸಂಸದ ಅನಂತಕುಮಾರ್ ಹೆಗಡೆ ನೇರ ಮಾತು
‘ಜಾತಿಯಲ್ಲಿ ಹುಟ್ಟಿದ ಮಾತ್ರಕ್ಕೆ ಆತ ಬ್ರಾಹ್ಮಣನಾಗುವುದಿಲ್ಲ. ನಡತೆಯ ಆಧಾರದಲ್ಲಿ ವ್ಯಕ್ತಿ ಬ್ರಾಹ್ಮಣನಾಗುತ್ತಾನೆ. ಬ್ರಾಹ್ಮಣತ್ವ ಎಂಬುದು ಒಂದು ಅರ್ಹತೆ, ಅದು ಜಾತಿ ಅಲ್ಲ’ ಹೀಗೆ ಅತ್ಯಂತ ತೀಕ್ಷ್ಣವಾಗಿ ಆತ್ಮಾವಲೋಕನದ ಮಾತುಗಳನ್ನಾಡಿದ ಮಾಜಿ ಸಂಸದ Anant Kumar Hegde, ಸಮಾಜದಲ್ಲಿ ‘ಸಂಸ್ಕಾರ’ ಎಂಬ ಪದದ ಅರ್ಥವೇ ಮಸುಕಾಗುತ್ತಿರುವ ಬಗ್ಗೆ ಗಂಭೀರ ಎಚ್ಚರಿಕೆ ನೀಡಿದ್ದಾರೆ.
ಯಲ್ಲಾಪುರದ ಕಾರ್ಮಿಕ ಭವನದಲ್ಲಿ ಅಖಿಲ ಹವ್ಯಕ ಮಹಾಸಭಾದವರು ಆಯೋಜಿಸಿದ್ದ ‘ಸಂಸ್ಕಾರೋತ್ಸವ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಬಾರಿ ಯಾವುದೇ ರಾಜಕೀಯ ಟೀಕೆ ಅಥವಾ ವ್ಯಕ್ತಿಗತ ಆರೋಪಗಳಿಗೆ ಅವಕಾಶ ನೀಡದೇ, ಸಂಪೂರ್ಣವಾಗಿ ಮೌಲ್ಯ, ಸಂಸ್ಕಾರ ಮತ್ತು ಬ್ರಾಹ್ಮಣತ್ವದ ಅರ್ಥದ ಬಗ್ಗೆ ಚಿಂತನೆ ಮೂಡಿಸುವ ರೀತಿಯಲ್ಲಿ ಭಾಷಣ ಮಾಡಿದರು.
ತಮ್ಮನ್ನೇ ಉದಾಹರಣೆಯಾಗಿ ತೆಗೆದುಕೊಂಡು ಮಾತನಾಡಿದ ಅನಂತಕುಮಾರ ಹೆಗಡೆ ಅವರು, “ನಾನು ಸ್ವಭಾವದಲ್ಲಿ ಕ್ಷತ್ರಿಯ, ವ್ಯವಹಾರದಲ್ಲಿ ವೈಶ್ಯ, ಸಮಾಜದ ಕೆಲಸ ಮಾಡುವಾಗ ಶೂದ್ರ” ಎಂದು ಹೇಳಿ, ಕೇವಲ ಜಾತಿ ಗುರುತಿನಿಂದ ಬ್ರಾಹ್ಮಣತ್ವ ಸಿಗುವುದಿಲ್ಲ ಎಂದು ಪ್ರತಿಪಾದಿಸಿದರು.
“ಸೃಷ್ಟಿಯ ಚೈತನ್ಯವನ್ನು ಅರ್ಥಮಾಡಿಕೊಂಡು ಅದರೊಂದಿಗೆ ಬದುಕುವ ಶ್ರೇಷ್ಠ ಸ್ಥಿತಿ ಬ್ರಾಹ್ಮಣತ್ವ” ಎಂದು ಅವರು ವಿವರಿಸಿದರು.
“ಆಚಾರ-ವಿಚಾರಗಳಲ್ಲಿ ನಾವು ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ. ಬ್ರಾಹ್ಮಣತ್ವವನ್ನು ಜಾತಿಗೆ ಮೀಸಲಾಗಿಡಬೇಡಿ. ಅದನ್ನು ಜಾತಿ ಎಂದು ಪರಿಗಣಿಸುವುದು ಬ್ರಾಹ್ಮಣತ್ವಕ್ಕೆ ಮಾಡಿದ ಅಪಚಾರ” ಎಂದು ಅವರು ಹೇಳಿದರು. ವೇದಗಳನ್ನು ಕಂಡುಕೊಂಡ ಋಷಿಮುನಿಗಳು ಸಹ ಜಾತಿಯಿಂದ ಬ್ರಾಹ್ಮಣರಾಗಿರಲಿಲ್ಲ. ಅವರ ತಪಸ್ಸು, ಅನುಷ್ಠಾನ ಮತ್ತು ಜೀವನವೇ ಅವರನ್ನು ಆ ಮಟ್ಟಕ್ಕೆ ಕೊಂಡೊಯ್ದಿತು ಎಂದು ಅವರು ಉಲ್ಲೇಖಿಸಿದರು.
ಇದೇ ವೇಳೆ, “ಯಾರು ಯಾವುದೇ ಫಲಾಪೇಕ್ಷೆ ಇಲ್ಲದೇ ಸೇವೆ ಮಾಡುತ್ತಾರೋ ಅವರು ಶೂದ್ರರು. ಆದರೆ ಇಂದಿನ ಅನೇಕ ಯುವಕರಿಗೆ ಶೂದ್ರ ಎಂದು ಕರೆಯಿಸಿಕೊಳ್ಳುವ ಯೋಗ್ಯತೆಯೂ ಇಲ್ಲ” ಎಂದು ಅವರು ಕಟುವಾಗಿ ಹೇಳಿದರು. ಸಮಾಜಕ್ಕಾಗಿ ದುಡಿಯುವ ಮನೋಭಾವ ಕಳೆದುಹೋಗುತ್ತಿರುವ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದರು.
ಮಕ್ಕಳ ಸಂಸ್ಕಾರ ಕುರಿತು ಮಾತನಾಡಿದ ಅವರು, “ಶಿಕ್ಷಣ ಸಂಸ್ಥೆಗಳು ಕೇವಲ ಸರ್ಟಿಫಿಕೇಟ್ ಕೊಡುತ್ತವೆ. ಮನೆಯಲ್ಲಿ ಸಿಗುವ ಸಂಸ್ಕಾರವೇ ಸಮಾಜದಲ್ಲಿ ವ್ಯಕ್ತಿಗೆ ಸಿಗುವ ನಿಜವಾದ ಪ್ರಮಾಣಪತ್ರ” ಎಂದರು. “ನಮಗೆ ಇಲ್ಲದ ಸಂಸ್ಕಾರವನ್ನು ಮಕ್ಕಳಿಂದ ನಿರೀಕ್ಷಿಸುವುದು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದರು.
“ನಮ್ಮ ನಡೆತೆಯೇ ಮೇಲ್ಪಂಕ್ತಿ ಆದಾಗ ಮಕ್ಕಳಿಗೆ ಹೇಳಿಕೊಡಬೇಕಾಗುವುದಿಲ್ಲ. ಅವರು ನಮ್ಮನ್ನೇ ಅನುಸರಿಸುತ್ತಾರೆ” ಎಂದು ಹೇಳಿದ ಅವರು, ಸಂಸ್ಕಾರ ಎಂಬುದು ಉಪನ್ಯಾಸಗಳಿಂದ ಅಥವಾ ದೊಡ್ಡ ಸಭೆಗಳಿಂದ ಬರುವುದಿಲ್ಲ, ಅದು ನಿತ್ಯದ ಜೀವನಶೈಲಿಯಿಂದ ಮೂಡಿಬರಬೇಕು ಎಂದು ಅಭಿಪ್ರಾಯಪಟ್ಟರು.
ಧಾರ್ಮಿಕ ಆಚರಣೆಗಳ ಹೆಸರಿನಲ್ಲಿ ನಡೆಯುತ್ತಿರುವ ಅಂಧ ಅನುಸರಣೆಗಳ ಮೇಲೂ ಅವರು ಟೀಕೆ ಮಾಡಿದರು. “ನಾವು ನಮ್ಮ ಸ್ವಭಾವಕ್ಕೆ ತಕ್ಕಂತೆ ದೇವರನ್ನೇ ಭ್ರಷ್ಟರನ್ನಾಗಿಸಿದ್ದೇವೆ. ಇಂಥ ಕೆಲಸ ಮಾಡಿದರೆ ಗಣಹೋಮ, ಮತ್ತೊಂದು ಮಾಡಿದರೆ ರುದ್ರಹೋಮ ಎಂದು ದೇವರಿಗೆ ಲಂಚ ಕೊಡುವ ಮಟ್ಟಕ್ಕೆ ಇಳಿದಿದ್ದೇವೆ” ಎಂದು ಹೇಳಿದರು.
“ಭಗವಂತ ನಮ್ಮ ಕಷ್ಟ ಕೇಳಿಕೊಳ್ಳಲು ಇರುವ ಗುಮಾಸ್ತನಲ್ಲ. ಅದು ಒಂದು ಅದ್ಭುತ ಶಕ್ತಿ. ಅದನ್ನು ಅರ್ಥಮಾಡಿಕೊಂಡರೆ ಜೀವನದ ಅರ್ಥ ಗೊತ್ತಾಗುತ್ತದೆ” ಎಂದು ಅವರು ಹೇಳಿದರು.
ಭಾಷಣದ ಕೊನೆಯಲ್ಲಿ, “ನನ್ನ ಮಾತು ತೀಕ್ಷ್ಣ ಎನಿಸಬಹುದು. ಆದರೆ ಅದು ವಾಸ್ತವ. ಆ ತೀಕ್ಷ್ಣತೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಮತ್ತೆ ನನ್ನನ್ನು ಇಂಥ ಕಾರ್ಯಕ್ರಮಕ್ಕೆ ಕರೆಯಬೇಡಿ” ಎಂದು ನೇರವಾಗಿ ಹೇಳುವ ಮೂಲಕ ಸಭಿಕರನ್ನು ಚಿಂತನೆಗೆ ದೂಡಿದರು.