Saturday, May 30, 2026
HomeLocal Newsತಡೆಗೋಡೆ ಕಾಮಗಾರಿ ವಿರೋಧಿಸಿ ಬಿಜೆಪಿ ಪ್ರತಿಭಟನೆ

ತಡೆಗೋಡೆ ಕಾಮಗಾರಿ ವಿರೋಧಿಸಿ ಬಿಜೆಪಿ ಪ್ರತಿಭಟನೆ

ತಾತ್ಕಾಲಿಕ ಸ್ಥಗಿತಕ್ಕೆ ಅಧಿಕಾರಿಗಳ ಮೌಖಿಕ ಭರವಸೆ

ಸಿದ್ದಾಪುರ: ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿರುವ ಉರ್ದು ಶಾಲೆಯ ಶಿಥಿಲ ಕಟ್ಟಡಕ್ಕೆ ತಡೆಗೋಡೆ ನಿರ್ಮಿಸುವ ಕಾಮಗಾರಿಯನ್ನು ವಿರೋಧಿಸಿ ಸಿದ್ದಾಪುರ ಬಿಜೆಪಿ ಮಂಡಲದ ವತಿಯಿಂದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯ ಬಳಿಕ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ತಹಶೀಲ್ದಾರ್ ಮೌಖಿಕ ಭರವಸೆ ನೀಡಿದ್ದು, ನಂತರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಕೈಬಿಟ್ಟರು.

ಮಂಡಲ ಅಧ್ಯಕ್ಷ ತಿಮ್ಮಪ್ಪ ಮಡಿವಾಳ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾರ್ಯಕರ್ತರು, ಶಾಲೆಯ ತರಗತಿಗಳು ನಡೆಯದಿದ್ದರೂ ಸರ್ಕಾರದಿಂದ 22 ಲಕ್ಷ ರೂ ಅನುದಾನ ಮಂಜೂರು ಮಾಡಲಾಗಿದೆ ಎಂದು ಆರೋಪಿಸಿದರು. ಇದೇ ಕಾಮಗಾರಿಗೆ ಶಾಸಕ ಭೀಮಣ್ಣ ನಾಯ್ಕ್ ಗುದ್ದಲಿ ಪೂಜೆ ನೆರವೇರಿಸಿದ್ದರು ಎಂಬುದನ್ನೂ ಪ್ರತಿಭಟನಾಕಾರರು ಉಲ್ಲೇಖಿಸಿದರು.

ಯಾವುದೇ ಕಾರಣಕ್ಕೂ ಕಾಮಗಾರಿ ಮುಂದುವರಿಸಬಾರದು. ಆ ಜಾಗವನ್ನು ಸಿದ್ದಾಪುರ ಸಂತೆ ಮಾರುಕಟ್ಟೆಯಾಗಿ ಪರಿವರ್ತಿಸಬೇಕು ಎಂದು ಆಗ್ರಹಿಸಿದರು. ಈಗಾಗಲೇ ಶಾಲೆ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಮತ್ತೆ ಅದೇ ಜಾಗದಲ್ಲಿ ಶಾಲೆ ಆರಂಭಿಸುವ ಅಗತ್ಯವಿಲ್ಲ. ಶಾಲಾ ಮಕ್ಕಳಿಗಾಗಿ ಬೇರೆಡೆ ಹೊಸ ಕಟ್ಟಡ ನಿರ್ಮಿಸಿ ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿದರು.

ಒಂದುವೇಳೆ ತಡೆಗೋಡೆ ನಿರ್ಮಿಸಿ ಶಾಲೆ ಪುನರಾರಂಭಿಸಿ ಮುಂದೆ ಯಾವುದಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಸ್ಥಳೀಯ ಶಾಸಕರು, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಹಾಗೂ ತಹಶೀಲ್ದಾರ್ ನೇರ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ತೋಟಪ್ಪ ನಾಯ್ಕ್, ಅನಂತಮೂರ್ತಿ ಹೆಗಡೆ, ನಂದನ್ ಬೋಕರ್, ಮಾರುತಿ ನಾಯ್ಕ್ ಹೊಸೂರು ಸೇರಿದಂತೆ ಹಲವರು ಮಾತನಾಡಿ ವಿರೋಧ ವ್ಯಕ್ತಪಡಿಸಿದರು. ಪ್ರತಿಭಟನೆ ವೇಳೆ ಕೆಲಕಾಲ ಪ್ರತಿಭಟನಾಕಾರರು ಹಾಗೂ ತಹಶೀಲ್ದಾರ್ ನಡುವೆ ಮಾತಿನ ಚಕಮಕಿ ನಡೆಯಿತು.

ಅಧಿಕಾರಿಗಳು ತಾತ್ಕಾಲಿಕವಾಗಿ ಕಾಮಗಾರಿ ಸ್ಥಗಿತಗೊಳಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಅಂತ್ಯಗೊಂಡಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share