ಯಲ್ಲಾಪುರ: ತಾಲೂಕಿನ ಇಡಗುಂದಿ ಸಮೀಪ ಬುಧವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಹರೀಶ ಸಿದ್ದಿ ಎಂದು ಗುರುತಿಸಲಾಗಿದೆ.
ಉತ್ತರ ಪ್ರದೇಶ ಮೂಲದ ಧರ್ಮೇಂದ್ರ ಕುಮಾರ ಎಂಬವರು ಅಂಕೋಲಾದಿಂದ ಯಲ್ಲಾಪುರ ಕಡೆಗೆ ಕಂಟೇನರ್ ಲಾರಿ ಚಲಾಯಿಸಿಕೊಂಡು ಬರುತ್ತಿದ್ದರು. ಇಡಗುಂದಿ ಸಮೀಪ ಲಾರಿ ವೇಗವಾಗಿ ಸಂಚರಿಸುತ್ತಿದ್ದ ವೇಳೆ ಸೋನಾರಕೇರಿಯ ಸುರೇಶ ಸಿದ್ದಿ ಅವರ ಬೈಕನ್ನು ಹಿಂದಿಕ್ಕಿದೆ. ಬಳಿಕವೂ ಅದೇ ವೇಗದಲ್ಲಿ ಸಾಗಿದ ಕಂಟೇನರ್ ಮುಂದೆ ಸಾಗುತ್ತಿದ್ದ ಹರೀಶ ಸಿದ್ದಿ ಅವರ ಬೈಕ್ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ತೀವ್ರತೆಗೆ ಹರೀಶ ಸಿದ್ದಿ ಅವರು ಬೈಕ್ನಿಂದ ಕೆಳಗೆ ಬಿದ್ದಿದ್ದು, ಕಂಟೇನರ್ನ ಹಿಂದಿನ ಚಕ್ರ ಅವರ ತಲೆಯ ಮೇಲೆ ಹರಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹೆದ್ದಾರಿಯ ಮೇಲೆ ರಕ್ತದ ಮಡುವಿನಲ್ಲಿ ಶವ ಬಿದ್ದಿರುವ ದೃಶ್ಯ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಹಿಂದಿನಿಂದ ಬೈಕ್ನಲ್ಲಿ ಬರುತ್ತಿದ್ದ ಇಡಗುಂದಿಯ ಸೋನಾರಕೇರಿಯ ಸುರೇಶ ಗಣಪಾ ಸಿದ್ದಿ ಅವರು ಅಪಘಾತವನ್ನು ಕಣ್ಣಾರೆ ಕಂಡಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನೆಯ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಚಾಲಕ ಧರ್ಮೇಂದ್ರ ಕುಮಾರ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.