Saturday, May 30, 2026
HomeLocal Newsಪಶ್ಚಿಮ ಘಟ್ಟ ಸಂರಕ್ಷಣೆಗೆ ಮಹತ್ವದ ನಿರ್ಣಯ

ಪಶ್ಚಿಮ ಘಟ್ಟ ಸಂರಕ್ಷಣೆಗೆ ಮಹತ್ವದ ನಿರ್ಣಯ

ಯಲ್ಲಾಪುರ: ಪಟ್ಟಣದ ತಾಲೂಕು ಪಂಚಾಯತ್‌ ಸಭಾಭವನದಲ್ಲಿ ಬುಧವಾರ ನಡೆದ “ಪಶ್ಚಿಮ ಘಟ್ಟ ಅರಣ್ಯ, ಪರಿಸರ ಮತ್ತು ಜೀವ ವೈವಿಧ್ಯತಾ ಕಾರ್ಯಾಗಾರ”ದಲ್ಲಿ ಸಹ್ಯಾದ್ರಿ ಸಂರಕ್ಷಣೆ ಹಾಗೂ ಜೀವ ವೈವಿಧ್ಯ ಉಳಿವಿಗೆ ಸಂಬಂಧಿಸಿದ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಡಾ. ಮಹಾಬಲೇಶ್ವರ ಕಾರವಾರ ನಿರ್ಣಯಗಳನ್ನು ಮಂಡಿಸಿದರು.

ಕಾರ್ಯಾಗಾರದಲ್ಲಿ, ಜಗತ್ತಿನಲ್ಲೇ ಅಪರೂಪದ ಜೀವ ವೈವಿಧ್ಯ ಹೊಂದಿರುವ ಪಶ್ಚಿಮ ಘಟ್ಟದ ಅಧ್ಯಯನ ಮತ್ತು ಸಂರಕ್ಷಣೆಗೆ ಜೀವ ವೈವಿಧ್ಯ ಮಂಡಳಿ ಹಾಗೂ ಸರ್ಕಾರಗಳು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಲಾಯಿತು.

ಕರ್ನಾಟಕದ ಪಶ್ಚಿಮ ಘಟ್ಟಗಳ ಪರಿಸರ ಧಾರಣ ಸಾಮರ್ಥ್ಯ ಅಧ್ಯಯನಕ್ಕೆ ರಾಜ್ಯ ಸರ್ಕಾರ ಆದೇಶ ಹೊರಡಿಸಬೇಕು, ಹವಾಮಾನ ಬದಲಾವಣೆಯಿಂದ ಕೃಷಿ, ತೋಟಗಾರಿಕೆ ಮತ್ತು ಅರಣ್ಯಗಳ ಮೇಲೆ ಆಗುತ್ತಿರುವ ಪರಿಣಾಮಗಳ ಕುರಿತು ರೈತರಿಗೆ ಅಧ್ಯಯನ ವರದಿಗಳ ಮಾಹಿತಿ ತಲುಪಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಸಂಶೋಧನಾ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ಅಧ್ಯಯನಗಳ ಮುಖ್ಯಾಂಶಗಳು ಕನ್ನಡದಲ್ಲೂ ಲಭ್ಯವಾಗಬೇಕು, ಪಂಚಾಯತ್‌ ಜೀವ ವೈವಿಧ್ಯ ಸಮಿತಿಗಳ ಮೂಲಕ ಈ ಮಾಹಿತಿಗಳನ್ನು ಗ್ರಾಮೀಣ ಮಟ್ಟಕ್ಕೆ ತಲುಪಿಸುವ ವ್ಯವಸ್ಥೆ ರೂಪಿಸಬೇಕು ಎಂದು ಶಿಫಾರಸು ಮಾಡಲಾಯಿತು.

ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ, ಜೌಗು ಭೂಮಿ ಸಂರಕ್ಷಣಾ ಪ್ರಾಧಿಕಾರ, ಅರಣ್ಯ ಇಲಾಖೆಯ ಸಂಶೋಧನಾ ವಿಭಾಗ, ಔಷಧಿ ಮೂಲಿಕಾ ಮಂಡಳಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಗಳ ಸಮನ್ವಯ ಸಮಿತಿ ರಚಿಸಿ ಅಧ್ಯಯನಗಳನ್ನು ಸಮಗ್ರವಾಗಿ ನಡೆಸಲು ಜೀವ ವೈವಿಧ್ಯ ಮಂಡಳಿ ಮುಂದಾಗಬೇಕು ಎಂದು ತಿಳಿಸಲಾಯಿತು.

2021ರಲ್ಲಿ ಸಲ್ಲಿಸಲಾಗಿದ್ದ ಭೂಕುಸಿತ ಅಧ್ಯಯನ ವರದಿ ಶಿಫಾರಸುಗಳನ್ನು ತ್ವರಿತವಾಗಿ ಜಾರಿಗೆ ತರಬೇಕು ಎಂದು ಒತ್ತಾಯಿಸಲಾಯಿತು.

ಜೀವ ವೈವಿಧ್ಯ ಮಂಡಳಿ ನೇತೃತ್ವದಲ್ಲಿ ಪರಿಸರ, ಅರಣ್ಯ ಮತ್ತು ಜೀವ ವೈವಿಧ್ಯ ತಜ್ಞರ ನಿಯೋಗ ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವರನ್ನು ಭೇಟಿ ಮಾಡಿ ಸಹ್ಯಾದ್ರಿಯ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿ ಕುರಿತು ಸಮಾಲೋಚನೆ ನಡೆಸಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು.

ಇದಲ್ಲದೆ, ಪಶ್ಚಿಮ ಘಟ್ಟಗಳ ಪ್ರಸ್ತುತ ಪರಿಸ್ಥಿತಿಯ ಕುರಿತು ವಿಜ್ಞಾನಿಗಳ ಕಮ್ಮಟವನ್ನು ಶಿವಮೊಗ್ಗ ಜಿಲ್ಲೆಯಲ್ಲಿ ನಡೆಸಲು ತೀರ್ಮಾನಿಸಲಾಯಿತು.

ಅಘನಾಶಿನಿ ಅಪ್ಪೆಮಿಡಿ ವೃಕ್ಷಗಳ ಸಂರಕ್ಷಿತ ಪ್ರದೇಶ ಘೋಷಣೆಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ಇದೇ ವೇಳೆ ಅರಣ್ಯ ಇಲಾಖೆಗೆ ಸಲ್ಲಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share