Home Local News ಮೊದಲಿದ್ದ ಜಾಗದಲ್ಲಿಯೇ ಮತ್ತೆ ಕಟ್ಟೆ ನಿರ್ಮಿಸುತ್ತೇವೆ!

ಮೊದಲಿದ್ದ ಜಾಗದಲ್ಲಿಯೇ ಮತ್ತೆ ಕಟ್ಟೆ ನಿರ್ಮಿಸುತ್ತೇವೆ!

0
18

ಭಟ್ಕಳದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಗುಡುಗು

ಭಟ್ಕಳ: ʻಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಉದ್ದೇಶದಿಂದ ಯಾವ ಜಾಗದಲ್ಲಿ ಮುರಿನಕಟ್ಟೆಯನ್ನು ಧ್ವಂಸ ಮಾಡಲಾಗಿದೆಯೋ, ಅದೇ ಸ್ಥಳದಲ್ಲೇ ಮತ್ತೆ ಕಟ್ಟೆಯನ್ನು ನಿರ್ಮಿಸಿಯೇ ತೀರುತ್ತೇವೆ. ಇದನ್ನು ಯಾರೂ ತಡೆಯಲು ಸಾಧ್ಯವಿಲ್ಲʼ ಹೀಗೆಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭಟ್ಕಳದಲ್ಲಿ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ವಿರುದ್ಧ ಗುಡುಗಿದರು.

ತಾಲೂಕಿನ ಮುರಿನಕಟ್ಟೆ ಧ್ವಂಸ ಪ್ರಕರಣ ಖಂಡಿಸಿ ಉತ್ತರ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಭಟ್ಕಳ ನಗರದಲ್ಲಿ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ಅಧಿವೇಶನದವರೆಗೂ ಕಾಯುವ ಪ್ರಶ್ನೆಯೇ ಇಲ್ಲ. ಕೂಡಲೇ ಅದೇ ಜಾಗದಲ್ಲಿ ಕಟ್ಟೆ ನಿರ್ಮಾಣವಾಗಬೇಕು. ಈ ಹೋರಾಟದಲ್ಲಿ ನಮ್ಮೊಳಗೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಎಲ್ಲರೂ ಒಂದೇ ಧ್ವನಿಯಲ್ಲಿ ನಿಂತಿದ್ದೇವೆ ಎಂದು ಘೋಷಿಸಿದರು.

Ad

ಸಭೆಯಲ್ಲಿ ಪೊಲೀಸ್ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಗೇರಿ, ವಾಟ್ಸಾಪ್ ಸಂದೇಶ ಫಾರ್ವರ್ಡ್ ಮಾಡಿದ ಹಿಂದೂ ಯುವಕರನ್ನು ತಕ್ಷಣ ಬಂಧಿಸುವ ಪೊಲೀಸರು, ಇಡೀ ಕಟ್ಟೆಯನ್ನು ಧ್ವಂಸ ಮಾಡಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಸಾವಿರಾರು ಜನರಲ್ಲಿ ಕೇವಲ ಆರು ಮಂದಿಯನ್ನು ಮಾತ್ರ ಬಂಧಿಸಿರುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.

ಘಟನೆಯಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬ ಆರೋಪಿಯನ್ನೂ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ ಅವರು, ಹಿಂದೂ ಮುಖಂಡರಾದ ಸುನಿಲ್ ನಾಯ್ಕ, ಗೋವಿಂದ್ ನಾಯ್ಕ ಸೇರಿದಂತೆ ಹಲವು ಪ್ರಮುಖರ ವಿರುದ್ಧ ರಾಜಕೀಯ ಒತ್ತಡದ ಹಿನ್ನೆಲೆಯಲ್ಲಿ ಅನಗತ್ಯ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಆರೋಪಿಸಿದರು.

ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೆಲ ಪ್ರಭಾವಿ ನಾಯಕರ ಒತ್ತಡಕ್ಕೆ ಮಣಿದು ಪೊಲೀಸರು ಏಕಪಕ್ಷೀಯ ಕ್ರಮ ಕೈಗೊಳ್ಳುತ್ತಿದ್ದಾರೆ. ಪೊಲೀಸ್ ಇಲಾಖೆ ಯಾವುದೇ ರಾಜಕೀಯ ಪ್ರಭಾವಕ್ಕೆ ಒಳಗಾಗದೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ನೈಜ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

ಪ್ರತಿಭಟನಾ ಸಭೆಯಲ್ಲಿ ಮಾಜಿ ಶಾಸಕಿ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.‌ಎಸ್.‌ ಹೆಗಡೆ, ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಸುನೀಲ್‌ ಹೆಗಡೆ ಸೇರಿದಂತೆ ಜಿಲ್ಲೆಯ ಹಲವು ಬಿಜೆಪಿ ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.

Ad

NO COMMENTS

LEAVE A REPLY

Please enter your comment!
Please enter your name here

error: Content is protected !!