ಇಂದು ಸ್ಮಾರ್ಟ್‌ಫೋನ್ ನಮ್ಮ ಬದುಕಿನ ಅವಿಭಾಜ್ಯ ಅಂಗ. ನಗರಗಳಿಂದ ಹಿಡಿದು ಹಳ್ಳಿಗಳವರೆಗೆ ಎಲ್ಲೆಡೆ ಅದರ ಪ್ರಭಾವ ವಿಸ್ತರಿಸಿದೆ. ಒಂದು ಕಾಲದಲ್ಲಿ ಮನೆಯಲ್ಲೊಂದು ಮೊಬೈಲ್ ಇದ್ದರೆ ಸಾಕು ಎನ್ನುವಂತಿತ್ತು. ಈಗ ಪ್ರತಿಯೊಬ್ಬರ ಜೇಬಿನಲ್ಲೂ ಸ್ಮಾರ್ಟ್‌ಫೋನ್ ಸಾಮಾನ್ಯ. ಆದರೆ ಈ ಸೌಲಭ್ಯದ ಜೊತೆಗೆ ಅಪಾಯಗಳೂ ಹೆಚ್ಚುತ್ತಿವೆ. ವಿಶೇಷವಾಗಿ ಇಂಟರ್ನೆಟ್ ಬಳಕೆಯ ವಿಚಾರದಲ್ಲಿ ಅಜಾಗರೂಕತೆ ತೋರಿದರೆ, ಸೈಬರ್ ಅಪರಾಧಿಗಳ ಬಲೆಗೆ ಬೀಳುವ ಸಾಧ್ಯತೆ ತುಂಬಾ ಹೆಚ್ಚು.
“ನಮ್ಮ ಫೋನ್‌ನಲ್ಲಿ ಏನಿದೆ? ನಮ್ಮನ್ನು ಯಾರು ಗುರಿಯಾಗಿಸುತ್ತಾರೆ?” ಎಂಬ ನಿರ್ಲಕ್ಷ್ಯದ ಮನೋಭಾವ ಹಲವರಲ್ಲಿದೆ. ಆದರೆ ಸೈಬರ್ ಅಪರಾಧಿಗಳಿಗೆ ನಿಮ್ಮ ಫೋನ್ ಬೆಲೆ ಎಷ್ಟು ಎಂಬುದು ಮುಖ್ಯವಲ್ಲ. ಅದು 4 ಸಾವಿರ ರೂಪಾಯಿಯ ಫೋನ್ ಆಗಿರಲಿ, 50 ಸಾವಿರ ರೂಪಾಯಿಯ ಫೋನ್ ಆಗಿರಲಿ, ಇಂಟರ್ನೆಟ್‌ಗೆ ಸಂಪರ್ಕ ಹೊಂದಿರುವ ಪ್ರತಿಯೊಂದು ಸಾಧನವೂ ಅವರ ದೃಷ್ಟಿಯಲ್ಲಿ ಒಂದೇ!
ನಾವು ವಾಸಿಸುವ ಮನೆಯನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ ಕಾಪಾಡಿಕೊಳ್ಳುವಂತೆ, ಸ್ಮಾರ್ಟ್‌ಫೋನ್‌ಗೂ ಡಿಜಿಟಲ್ ಸ್ವಚ್ಛತೆ ಅಗತ್ಯ. ಇಲ್ಲದಿದ್ದರೆ ನಮ್ಮ ವೈಯಕ್ತಿಕ ಮಾಹಿತಿ, ಬ್ಯಾಂಕಿಂಗ್ ವಿವರಗಳು, ಸಾಮಾಜಿಕ ಜಾಲತಾಣಗಳ ಖಾತೆಗಳು ಮತ್ತು ಖಾಸಗಿ ದಾಖಲೆಗಳು ದುಷ್ಕರ್ಮಿಗಳ ಕೈಗೆ ಸಿಲುಕುವ ಅಪಾಯವಿದೆ.
ಸೈಬರ್ ಅಪರಾಧಿಗಳು ಸಾಮಾನ್ಯವಾಗಿ “ಫಿಶಿಂಗ್” ಎಂಬ ತಂತ್ರವನ್ನು ಹೆಚ್ಚು ಬಳಸುತ್ತಾರೆ. ಮೆಸೇಜ್ ಅಥವಾ ಇ-ಮೇಲ್ ಮೂಲಕ ಕಳುಹಿಸುವ ನಕಲಿ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿಸಿದ ಬಳಿಕ ನಿಮ್ಮ ಫೋನ್‌ಗೆ ದುರುದ್ದೇಶಪೂರಿತ ಸಾಫ್ಟ್‌ವೇರ್ ನುಗ್ಗಬಹುದು. ಕೆಲವೊಮ್ಮೆ ನಿಮ್ಮ ಅರಿವಿಗೇ ಬಾರದಂತೆ ಸ್ಪೈವೇರ್ ಅಥವಾ ಟ್ರ್ಯಾಕಿಂಗ್ ಅಪ್ಲಿಕೇಶನ್‌ಗಳನ್ನು ಸ್ಥಾಪಿಸಿ ನಿಮ್ಮ ಚಟುವಟಿಕೆಗಳ ಮೇಲೆ ನಿಗಾ ಇಡಬಹುದು.
ಉಚಿತ ಎಂದು ಭಾವಿಸಿ ಸಾರ್ವಜನಿಕ ವೈ-ಫೈ ಬಳಸುವುದೂ ಅಪಾಯಕಾರಿ. ವಿಮಾನ ನಿಲ್ದಾಣ, ರೈಲು ನಿಲ್ದಾಣ, ಹೋಟೆಲ್ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಲಭ್ಯವಿರುವ ಕೆಲವು ವೈ-ಫೈ ಜಾಲಗಳ ಮೂಲಕ ನಿಮ್ಮ ಮಾಹಿತಿಯನ್ನು ಕದಿಯುವ ಪ್ರಯತ್ನಗಳು ನಡೆಯಬಹುದು.
ಅದೇ ರೀತಿ ಮೊಬೈಲ್‌ನಲ್ಲಿ ಕಾಣಿಸಿಕೊಳ್ಳುವ ಪಾಪ್-ಅಪ್ ಜಾಹೀರಾತುಗಳನ್ನೂ ನಿರ್ಲಕ್ಷಿಸಬಾರದು. ಕೆಲವು ಪಾಪ್-ಅಪ್‌ಗಳು ಬಳಕೆದಾರರ ಮಾಹಿತಿಯನ್ನು ಸಂಗ್ರಹಿಸಲು ಅಥವಾ ಹಾನಿಕಾರಕ ತಾಣಗಳಿಗೆ ಕರೆದೊಯ್ಯಲು ಬಳಸಲ್ಪಡುತ್ತವೆ.
ಇನ್ನೊಂದು ಪ್ರಮುಖ ಅಪಾಯ ನಿಮ್ಮ ಬ್ರೌಸಿಂಗ್ ಅಭ್ಯಾಸಗಳಿಂದ ಬರುತ್ತದೆ. ಸಂಶಯಾಸ್ಪದ ವೆಬ್‌ಸೈಟ್‌ಗಳು, ಅಶ್ಲೀಲ ಅಥವಾ ಕಾನೂನುಬಾಹಿರ ವಿಷಯಗಳಿರುವ ತಾಣಗಳು, ಉಚಿತ ಡೌನ್‌ಲೋಡ್ ಹೆಸರಿನಲ್ಲಿ ನೀಡುವ ಫೈಲ್‌ಗಳು ಬಹಳಷ್ಟು ಬಾರಿ ಮಾಲ್ವೇರ್ ಅಥವಾ ಹಾನಿಕಾರಕ ಸಾಫ್ಟ್‌ವೇರ್‌ಗಳನ್ನು ಹೊತ್ತು ತರುತ್ತವೆ. ಇವುಗಳಲ್ಲಿ ಕೆಲವು ಫೋನ್ ಅನ್ನು ಸಂಪೂರ್ಣವಾಗಿ ನಿಯಂತ್ರಿಸುವ ಸಾಮರ್ಥ್ಯವನ್ನೂ ಹೊಂದಿರುತ್ತವೆ.
ಹಾಗಾದರೆ ಫೋನ್ ಹ್ಯಾಕ್ ಆಗಿರುವುದನ್ನು ಹೇಗೆ ಗುರುತಿಸಬಹುದು? ಸಾಮಾನ್ಯ ಬಳಕೆಯಲ್ಲಿದ್ದರೂ ಡೇಟಾ ಅತಿವೇಗವಾಗಿ ಖಾಲಿಯಾಗುತ್ತಿದ್ದರೆ ಎಚ್ಚರಿಕೆಯಿಂದಿರಿ. ನಿಮ್ಮ ಫೋನ್‌ನಲ್ಲಿ ನಿಮಗೆ ಅರಿವಿಲ್ಲದಂತೆಯೇ ಯಾವುದೋ ಅಪ್ಲಿಕೇಶನ್ ಡೇಟಾ ಕಳುಹಿಸುತ್ತಿರಬಹುದು. ಬ್ಯಾಟರಿ ಅಸಹಜವಾಗಿ ಬೇಗ ಖಾಲಿಯಾಗುವುದು, ಹೆಚ್ಚು ಬಳಸದೇ ಇದ್ದರೂ ಫೋನ್ ಬಿಸಿಯಾಗುವುದು, ಬ್ರೌಸರ್‌ನಲ್ಲಿ ಒಂದು ಲಿಂಕ್ ಒತ್ತಿದಾಗ ಮತ್ತೊಂದು ವೆಬ್‌ಸೈಟ್ ತೆರೆಯುವುದು ಇವೆಲ್ಲವೂ ಅಪಾಯದ ಸೂಚನೆಗಳಾಗಿರಬಹುದು.
ಸ್ಮಾರ್ಟ್‌ಫೋನ್ ಸುರಕ್ಷಿತವಾಗಿರಲು ಕೆಲವು ಸರಳ ಕ್ರಮಗಳನ್ನು ಪಾಲಿಸಿದರೆ ಸಾಕು. ಬಳಕೆಯಲ್ಲಿಲ್ಲದ ಅಪ್ಲಿಕೇಶನ್‌ಗಳನ್ನು ಆಗಾಗ ಹುಡುಕಿ ತೆಗೆದುಹಾಕಿ. ಮೊಬೈಲ್‌ನಲ್ಲಿ ಇರುವ ಬ್ಯಾಂಕಿಂಗ್ ಮತ್ತು ಸೋಷಿಯಲ್ ಮೀಡಿಯಾಗಳಂತಹ ಸೂಕ್ಷ್ಮ ಅಪ್ಲಿಕೇಶನ್‌ಗಳ ಸುರಕ್ಷತೆಗೆ ಹೆಚ್ಚಿನ ಗಮನ ಕೊಡಿ.
ಅಪರಿಚಿತ ಸಂಖ್ಯೆಯಿಂದ ಬಂದ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಅಗತ್ಯವಿದ್ದರೆ ಪ್ರಮುಖ ಖಾತೆಗಳ ಪಾಸ್‌ವರ್ಡ್‌ಗಳನ್ನು ಬದಲಾಯಿಸಿ. ವಾಟ್ಸಾಪ್, ಫೇಸ್‌ಬುಕ್ ಅಥವಾ ಇತರೆ ಅಪ್ಲಿಕೇಶನ್‌ಗಳಲ್ಲಿ Two-Factor Authentication ಸಕ್ರಿಯಗೊಳಿಸಿ.
ಹೊಸ ಮೊಬೈಲ್ ಖರೀದಿಸಿದಾಗ ಅಥವಾ ಕೆಲವು ಅಪ್‌ಡೇಟ್‌ಗಳ ಬಳಿಕ ಅನಗತ್ಯ ಅಪ್ಲಿಕೇಶನ್‌ಗಳು ಕಾಣಿಸಿಕೊಳ್ಳಬಹುದು. ನೀವು ಬಳಸದೇ ಇರುವ ಹಾಗೂ ಅಗತ್ಯವಿಲ್ಲದ ಅಪ್ಲಿಕೇಶನ್‌ಗಳನ್ನು ತೆಗೆದುಹಾಕುವುದು ಉತ್ತಮ.
ಸ್ಮಾರ್ಟ್‌ಫೋನ್ ಕೇವಲ ಸಂಪರ್ಕ ಸಾಧನವಲ್ಲ, ಅದು ನಮ್ಮ ವೈಯಕ್ತಿಕ ಜೀವನದ ದೊಡ್ಡ ಭಾಗವನ್ನು ಒಳಗೊಂಡಿದೆ. ಆದ್ದರಿಂದ ಅದರ ಸುರಕ್ಷತೆ ಮತ್ತು ಸ್ವಚ್ಛತೆಯ ಬಗ್ಗೆ ಎಚ್ಚರಿಕೆಯಿಂದಿರುವುದು ಇಂದಿನ ಡಿಜಿಟಲ್ ಯುಗದ ಅಗತ್ಯ.
ಜಾಣರಾಗಿರಿ, ಜಾಗರೂಕರಾಗಿರಿ. ಈ ಮಾಹಿತಿ ಉಪಯುಕ್ತವೆನಿಸಿದರೆ ಇತರರಿಗೂ ಶೇರ್ ಮಾಡಿ.