ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ತಾರೇಬಾಗಿಲು ಸಮೀಪದ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕಾ ಬೋಟ್‌ವೊಂದು ಮುಳುಗಿದ್ದು, ಅದೃಷ್ಷವಶಾತ್ 7 ಮಂದಿ ಮೀನುಗಾರರು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.
ಅಂಕೋಲಾದ ಬೆಳಂಬಾರ ಮೂಲದ ‘ಶ್ರೀ ನವರತ್ನ’ ಹೆಸರಿನ ಮೀನುಗಾರಿಕಾ ಬೋಟ್ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಬೋಟ್‌ನ ಹೊರಭಾಗಕ್ಕೆ ಹಾನಿ ಉಂಟಾಗಿದೆ. ಇದರಿಂದ ಬೋಟ್‌ಗೆ ನೀರು ನುಗ್ಗಿ ಮುಳುಗಲು ಆರಂಭಿಸಿತು.
ಬೋಟ್‌ನಲ್ಲಿದ್ದ ವೆಂಕಟೇಶ್ ಖಾರ್ವಿ, ನಾಗಪ್ಪ ಖಾರ್ವಿ, ಸಂದೀಪ್ ಖಾರ್ವಿ, ವಿಕಾಸ್ ಖಾರ್ವಿ, ವಿಘ್ನೇಶ್ ಖಾರ್ವಿ, ರಜತ್ ಬಾಣಾವಳಿಕರ್ ಹಾಗೂ ಲತೇಶ್ ಖಾರ್ವಿ ಸೇರಿದಂತೆ ಏಳು ಮಂದಿ ಮೀನುಗಾರರು ಸಮುದ್ರದಲ್ಲಿ ಸಿಲುಕಿ ಆತಂಕಕ್ಕೊಳಗಾಗಿದ್ದರು.
ಈ ಸಂದರ್ಭದಲ್ಲಿ ಸ್ಥಳೀಯ ಮೀನುಗಾರರಾದ ಇಕ್ಬಾಲ್, ಅಬ್ದುಲ್ ಹಾಗೂ ಗಫೂರ್ ತಮ್ಮ ಬೋಟ್ ಮೂಲಕ ತಕ್ಷಣ ಧಾವಿಸಿ, ಸಮುದ್ರದಲ್ಲಿ ಸಿಲುಕಿದ್ದ ಎಲ್ಲ ಏಳು ಮಂದಿಯನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ಸ್ಥಳೀಯ ಮೀನುಗಾರರ ಸಮಯೋಚಿತ ಕಾರ್ಯಾಚರಣೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ದುರಂತ ತಪ್ಪಿದಂತಾಗಿದೆ.