ಮಾಹಿತಿ ಬಹಿರಂಗಪಡಿಸಲು ರವೀಂದ್ರ ನಾಯ್ಕ ಆಗ್ರಹ
ಶಿರಸಿ: ಅರಣ್ಯ ಪ್ರದೇಶಗಳಲ್ಲಿ ನಡೆಯುತ್ತಿರುವ ನೆಡುತೋಪು ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕಳೆದ 3 ವರ್ಷಗಳು ಹಾಗೂ ಪ್ರಸಕ್ತ ವರ್ಷದಲ್ಲಿ ಎಷ್ಟು ಗಿಡಗಳನ್ನು ನೆಡಲಾಗಿದೆ, ಅವುಗಳಲ್ಲಿ ಎಷ್ಟು ಬದುಕುಳಿದಿವೆ, ಎಷ್ಟು ವೆಚ್ಚ ಮಾಡಲಾಗಿದೆ ಸೇರಿದಂತೆ ಆರು ಅಂಶಗಳ ಮಾಹಿತಿಯನ್ನು ಮುಂದಿನ 30 ದಿನಗಳೊಳಗೆ ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅರಣ್ಯ ಇಲಾಖೆಯನ್ನು ಆಗ್ರಹಿಸಿದೆ.
ಈ ಕುರಿತು ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಸಲ್ಲಿಸಿರುವ ಪತ್ರವನ್ನು ಹೋರಾಟಗಾರರ ವೇದಿಕೆಯ ಕಚೇರಿಯಲ್ಲಿ ಬಿಡುಗಡೆಗೊಳಿಸಿ ಮಾತನಾಡಿದ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ, ನೆಡುತೋಪು ಕಾಮಗಾರಿಗಳ ಕುರಿತು ಸಾರ್ವಜನಿಕ ವಲಯದಲ್ಲಿ ವಿವಿಧ ಪ್ರಶ್ನೆಗಳು ಮತ್ತು ಟೀಕೆಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕು ಕಾಯ್ದೆ ಹಾಗೂ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆಯಡಿ ಅಗತ್ಯ ಮಾಹಿತಿಯನ್ನು ಬಹಿರಂಗಪಡಿಸುವುದು ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.
ಕೆನರಾ ವೃತ್ತ ವ್ಯಾಪ್ತಿಯಲ್ಲಿ ಕಳೆದ ಐದು ವರ್ಷಗಳಲ್ಲಿ ವಿವಿಧ ಯೋಜನೆಗಳಡಿ ನೆಡಲಾದ ಗಿಡಗಳ ಸಂಖ್ಯೆ, ನೆಡುತೋಪು ಕೈಗೊಂಡ ಒಟ್ಟು ಪ್ರದೇಶ, ವೆಚ್ಚದ ವಿವರ ಹಾಗೂ ಬದುಕುಳಿದ ಗಿಡಗಳ ಪ್ರಮಾಣವನ್ನು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಅಲ್ಲದೆ, ನೆಡುತೋಪು ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಗುತ್ತಿಗೆದಾರರ ಹೆಸರು ಮತ್ತು ಕಾಮಗಾರಿಯ ಮೊತ್ತವನ್ನು ಸೂಚನಾ ಫಲಕಗಳಲ್ಲಿ ಪ್ರಕಟಿಸದಿರುವ ಕಾರಣವನ್ನೂ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಇತ್ತೀಚೆಗೆ ಜಾರಿಯಲ್ಲಿರುವ ಕೇಂದ್ರ ವನ್ಯಜೀವಿ ನಿರ್ವಹಣಾ ಯೋಜನೆಗೆ ಸಂಬಂಧಿಸಿದ ದೃಢೀಕರಣ ವರದಿ, ಅಭಯಾರಣ್ಯ ಪ್ರದೇಶಗಳಲ್ಲಿ ನೆಡುತೋಪು, ತಂತಿಬೇಲಿ, ಇಂಗುಗುಂಡಿ ಹಾಗೂ ಇತರ ಕಾಮಗಾರಿಗಳಿಗೆ ಕೇಂದ್ರ ಸರ್ಕಾರದಿಂದ ಪಡೆದಿರುವ ಅನುಮತಿ ದಾಖಲೆಗಳನ್ನೂ ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ನೆಟ್ಟ ಗಿಡಗಳ ಜೀವಂತಿಕೆ ಕುರಿತು ಕಾಲಕಾಲಕ್ಕೆ ನಡೆಸುವ ಸ್ಥಳ ಪರಿಶೀಲನಾ ವರದಿಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕು. ಕಳೆದ ಮೂರು ಪರಿಶೀಲನಾ ವರದಿಗಳನ್ನು ಪ್ರಕಟಿಸುವುದರ ಜೊತೆಗೆ, ಪ್ರಸಕ್ತ ವರ್ಷದ ನೆಡುತೋಪು ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ಸಂಬಂಧಿಸಿದ ವಲಯ ಅರಣ್ಯ ಕಚೇರಿ ಹಾಗೂ ಗ್ರಾಮ ಪಂಚಾಯಿತಿಗಳ ಸೂಚನಾ ಫಲಕಗಳಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು ಎಂದು ರವೀಂದ್ರ ನಾಯ್ಕ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಇಬ್ರಾಹಿಂ ಸಾಬ್ ಗೌಡಳ್ಳಿ, ಕೆ.ಟಿ. ನಾಯ್ಕ ಹೆಗ್ಗೇರಿ, ರಾಜರಾಮ ಹೊನ್ನೇಬಿಡಾರ ಹಾಗೂ ಗೋವಿಂದ ನಾಯ್ಕ ಹೊನ್ನೇಬಿಡಾರ ಉಪಸ್ಥಿತರಿದ್ದರು.