ಲಿಂಕ್ ಒತ್ತಿ ಯಾಮಾರದಿರಿ | PIB ಎಚ್ಚರಿಕೆ
ನವದೆಹಲಿ: ಸಾಮಾಜಿಕ ಜಾಲತಾಣಗಳು ಹಾಗೂ ವಾಟ್ಸ್ಆಪ್ ಮೂಲಕ ವ್ಯಾಪಕವಾಗಿ ಹರಡುತ್ತಿರುವ ‘Dak Seva Gifts’ ಯೋಜನೆ ಕುರಿತ ಸಂದೇಶ ಸಂಪೂರ್ಣ ನಕಲಿ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಕೇಂದ್ರ ಸರ್ಕಾರದ ಪತ್ರಿಕಾ ಮಾಹಿತಿ ಕಚೇರಿ (PIB)ಯ ಫ್ಯಾಕ್ಟ್ ಚೆಕ್ ಘಟಕವು ಈ ಕುರಿತು ಸಾರ್ವಜನಿಕ ಎಚ್ಚರಿಕೆ ನೀಡಿದ್ದು, ಭಾರತ ಅಂಚೆ ಇಲಾಖೆ (India Post) ‘Dak Seva Gifts’ ಹೆಸರಿನ ಯಾವುದೇ ಉಡುಗೊರೆ ಅಥವಾ ಬಹುಮಾನ ವಿತರಣಾ ಯೋಜನೆಯನ್ನು ನಡೆಸುತ್ತಿಲ್ಲ ಎಂದು ತಿಳಿಸಿದೆ.
ವೈರಲ್ ಆಗಿರುವ ಸಂದೇಶದಲ್ಲಿ ಭಾರತ ಅಂಚೆ ಇಲಾಖೆಯ ಲೋಗೋವನ್ನು ಬಳಸಲಾಗಿದ್ದು, ಜನರು ಬಹುಮಾನ ಪಡೆಯಬಹುದು ಎಂಬ ಆಮಿಷದೊಂದಿಗೆ ಅನುಮಾನಾಸ್ಪದ ಲಿಂಕ್ ಒಂದನ್ನು ಸಹ ಹಂಚಿಕೊಳ್ಳಲಾಗುತ್ತಿದೆ. ಈ ಮೂಲಕ ಸಾರ್ವಜನಿಕರನ್ನು ವಂಚಿಸುವ ಪ್ರಯತ್ನ ನಡೆಯುತ್ತಿರುವ ಸಾಧ್ಯತೆ ಇರುವುದರಿಂದ ನಾಗರಿಕರು ಇಂತಹ ಸಂದೇಶಗಳಿಗೆ ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸಬಾರದು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಅಧಿಕಾರಿಗಳು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಅಪರಿಚಿತ ಲಿಂಕ್ಗಳನ್ನು ಕ್ಲಿಕ್ ಮಾಡುವುದು, ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವುದು ಅಥವಾ ಬ್ಯಾಂಕಿಂಗ್ ವಿವರಗಳನ್ನು ನಮೂದಿಸುವುದನ್ನು ತಪ್ಪಿಸುವಂತೆ ಸಲಹೆ ನೀಡಿದ್ದಾರೆ.
ಯಾವುದೇ ಯೋಜನೆ ಅಥವಾ ಸರ್ಕಾರಿ ಘೋಷಣೆ ಬಗ್ಗೆ ಅನುಮಾನವಿದ್ದರೆ, ಸಂಬಂಧಿತ ಇಲಾಖೆಯ ಅಧಿಕೃತ ವೆಬ್ಸೈಟ್ ಅಥವಾ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳ ಮೂಲಕ ಮಾಹಿತಿ ಪರಿಶೀಲಿಸಿಕೊಳ್ಳುವಂತೆ ಸೂಚಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಇಲಾಖೆ, ಬ್ಯಾಂಕ್ಗಳು ಹಾಗೂ ಸಾರ್ವಜನಿಕ ಸಂಸ್ಥೆಗಳ ಹೆಸರಿನಲ್ಲಿ ನಕಲಿ ಸಂದೇಶಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ನಾಗರಿಕರು ಎಚ್ಚರಿಕೆಯಿಂದಿರಬೇಕು ಎಂದು ಪಿಐಬಿ ಮತ್ತೊಮ್ಮೆ ಮನವಿ ಮಾಡಿದೆ.